ಕಾಠ್ಮಂಡು: ನೇಪಾಳ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ಮೇಲೆ ನೇಪಾಳ ದಂಗೆ ವೇಳೆ ಜನರು ಮುಗಿಬಿದ್ದು ಹಿಂಸಾತ್ಮಕ ದಾಳಿ ಮಾಡಿದ್ದಾರೆ. ದಾಳಿಕೋರರಿಗೆ ಬೆಚ್ಚುವ ಅವರು, ಕಂಗಾಲಾಗಿ ಓಡುತ್ತಿರುವುದು ಕಂಡುಬರುತ್ತದೆ. ಅವರು ತಪ್ಪಿಸಿಕೊಳ್ಳುವಾಗ ಒಬ್ಬ ಪ್ರತಿಭಟನಾಕಾರ ಇದ್ದಕ್ಕಿದ್ದಂತೆ ಅವರನ್ನು ಒದ್ದಿದ್ದಾನೆ, ಇದರಿಂದಾಗಿ ಅವರು ನೆಲಕ್ಕೆ ಬಿದ್ದಿದ್ದಾರೆ. ಒಂದು ಕ್ಷಣ, ಅವರು ಎಡವಿ ಬಿದ್ದರೂ ನಂತರ ಬೇಗನೆ ಎದ್ದೇಳುತ್ತಾರೆ ಹಾಗೂ ಹತಾಶರಾಗಿ ಓಡುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು, ದೇಶದ ಸ್ಥಿತಿಯ ಸೂಚಕದಂತಿದೆ.
ನೇಪಾಳ ಮಾಜಿ ಪ್ರಧಾನಿ ಪತ್ನಿ ಸಜೀವ ದಹನ
ಕಾಠ್ಮಂಡು: ಹಿಂಸಾಚಾರದಿಂದ ನಲುಗುತ್ತಿರುವ ನೇಪಾಳದಲ್ಲಿ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಯ ಮೇಲೆ ಪ್ರತಿಭಟನಾನಿರತ ಯುವಕರು ಬೆಂಕಿ ಹಚ್ಚಿದ ಪರಿಣಾಮ ಖಾನಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ರಾಜಧಾನಿ ಕಾಠ್ಮಂಡುವಿನ ದಲ್ಲು ಪ್ರದೇಶದಲ್ಲಿ ಖಾನಲ್ ನಿವಾಸ ಹೊಂದಿದ್ದರು. ಮನೆಗೆ ಬೆಂಕಿ ಹಚ್ಚುವ ಪೂರ್ವದಲ್ಲಿ ಪ್ರತಿಭಟನಕಾರರ ತಂಡ ರಾಜ್ಯಲಕ್ಷ್ಮಿಯವರನ್ನು ಬಲವಂತವಾಗಿ ಮನೆಯೊಳಗೆ ನುಗ್ಗಿಸಿತು. ಆ ಬಳಿಕ ಮನೆಗೆ ಬೆಂಕಿ ಹಚ್ಚಿತು. ತೀವ್ರವಾಗಿ ಸುಟ್ಟುಹೋಗಿದ್ದ ಅವರನ್ನು ಕೀರ್ತಿಪುರ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನೇಪಾಳ ಮಾಜಿ ಪ್ರಧಾನಿ ದೇವುಬಾ ಮೇಲೆಯೇ ಹಲ್ಲೆ
ಕಾಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಮೇಲೆ ಪ್ರತಿಭಟನಾಕಾರರು ಆಕ್ರಮಣ ನಡೆಸಿದ್ದು, ತಲೆಯಿಂದ ಧಾರಾಕಾರ ರಕ್ತ ಸುರಿಯುತ್ತಿದ್ದ ಸ್ಥಿತಿಯಲ್ಲಿದ್ದ ದೇವುಬಾ ಅಸಹಾಯಕರಾಗಿ ಬಯಲಿನಲ್ಲಿಯೇ ಕುಳಿತ ಮನಕಲಕುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರತಿಭಟನಕಾರರು ದೇವುಬಾ ಅವರ ಮನೆಗೆ ನುಗ್ಗಿ, ಅವರು ಹಾಗೂ ಪತ್ನಿ ಅರ್ಜು ರಾಣಾ ದೇವುಬಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಕ್ತದಿಂದ ತೊಯ್ದು ತೊಪ್ಪೆಯಾಗಿರುವ ದೇವುಬಾ ಬಯಲಲ್ಲಿ ನಿಸ್ಸಹಾಯಕರಾಗಿ ಕುಳಿತುಕೊಳ್ಳುತ್ತಾರೆ. ಆ ಬಳಿಕ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು ಅವರನ್ನು ಕರೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬರುತ್ತದೆ.