;Resize=(412,232))
ಮುಂಬೈ: ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್-ಎ-ಉರ್ದು ಕಾರ್ಯಕ್ರಮಕ್ಕೆ ಹಿರಿಯ ನಟ ನಾಸಿರುದ್ದೀನ್ ಶಾ ಅವರನ್ನು ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ಆಹ್ವಾನ ನಿರಾಕರಿಸಿದೆ. ಇದಕ್ಕೆ ನಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ನಾನು ‘ವಿಶ್ವಗುರು’ವನ್ನು ಟೀಕಿಸುವುದೇ ಕಾರಣ ಎಂದು ಪ್ರಧಾನಿ ಮೋದಿ ಹೆಸರು ಹೇಳದೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಅವರು, ‘ವಿವಿಯ ಉರ್ದು ವಿಭಾಗ ಫೆ.1ರಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ನನಗೆ ವಿದ್ಯಾರ್ಥಿಗಳ ಜತೆಗೆ ಬೆರೆಯುವುದು ಇಷ್ಟ. ಆದರೆ, ಜ.31ರ ರಾತ್ರಿ ನನಗೆ ಕರೆ ಮಾಡಿ ಆಹ್ವಾನ ನಿರಾಕರಿಸಲಾಯಿತು. ಬಳಿಕ ನಾನೇ ಕಾರ್ಯಕ್ರಮದಿಂದ ದೂರವುಳಿದೆ ಎಂದು ಹೇಳಲಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೋದಿ ವಿರುದ್ಧ ಹರಿಹಾಯ್ದಿರುವ ಅವರು ‘ಸ್ವಯಂಘೋಷಿತ ವಿಶ್ವಗುರುವನ್ನು ನಾನು ಯಾವತ್ತೂ ಹೊಗಳಿಲ್ಲ, ಬದಲಾಗಿ ಟೀಕಿಸಿದವನು. ಕಳೆದ 10 ವರ್ಷಗಳಲ್ಲಿ ಅವರು ಮಾಡಿದ ಯಾವುದೇ ಕೆಲಸ ನನಗೆ ಮೆಚ್ಚುಗೆಯಾಗಿಲ್ಲ’ ಎಂದಿದ್ದಾರೆ. ಈ ಮೂಲಕ ತಾನು ಮೋದಿಯವರನ್ನು ಟೀಕಿಸಿದ್ದಕ್ಕಾಗಿಯೇ ವಿವಿ ಆಹ್ವಾನ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.