ಚೆನ್ನೈ: ಕರ್ನಾಟಕದ ಬೆಂಗಳೂರು ಸನಿಹದ ಅತ್ತಿಬೆಲೆಯ ಪಟಾಕಿ ಘಟಕದ ಸ್ಫೋಟ ಬೆನ್ನಲ್ಲೇ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದು ಸ್ಫೋಟಗೊಂಡು 9 ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ ವೀರಗಲೂರ್ ಗ್ರಾಮದಲ್ಲಿದ್ದ ಖಾಸಗಿ ಪಟಾಕಿ ತಯಾರಿಕಾ ಘಟಕದಲ್ಲಿ ಸೋಮವಾರ ಮುಂಜಾನೆ 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಭಾರೀ ಸ್ಫೋಟ ಸಂಭವಿಸಿದೆ. ಬಳಿಕ ಅಗ್ನಿಶಾಮಕ ದಳವು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿವೆ. ಇನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50,000 ಪರಿಹಾರ ಹಣ ಘೋಷಿಸಿದ್ದಾರೆ.