ನಿತೀಶ್‌ ನಿರ್ಗಮನ: ಇಂಡಿಯಾ ಕೂಟಕ್ಕೆ ಭಾರಿ ಆಘಾತ

KannadaprabhaNewsNetwork | Updated : Jan 29 2024, 06:40 AM IST

ಸಾರಾಂಶ

ಪ್ರಾದೇಶಿಕ ಪಕ್ಷಗಳ ‘ಚೌಕಾಸಿ ಶಕ್ತಿ’ ಏರಿಕೆಯಾಗಿದ್ದು, ಇಂಡಿಯಾ ಕೂಟದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವು ಆಗಲಿದೆ.

ನವದೆಹಲಿ: ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆದಿರುವುದು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದ ವಿಪಕ್ಷಗಳ ಮೈತ್ರಿಕೂಟಕ್ಕೆ ಭಾರಿ ಆಘಾತ ತಂದಿದೆ.

ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸೀಟು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. 

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ (ಆಪ್‌) ಮುಖ್ಯಮಂತ್ರಿ ಭಗವಂತ ಮಾನ್‌ ಕೂಡ ಎಲ್ಲಾ ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಅವರಿಬ್ಬರೂ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಹೇಳಿದ್ದರು. 

ಇದೀಗ ಜೆಡಿಯು ಬಿಹಾರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಿಂದ ಹೊರಹೋಗಿ ಬಿಜೆಪಿ ಜೊತೆ ಕೈಜೋಡಿಸಿರುವುದು ಕಾಂಗ್ರೆಸ್‌ ಮುಂದಾಳತ್ವದ ‘ಇಂಡಿಯಾ’ ಕೂಟಕ್ಕೆ ಬಹುದೊಡ್ಡ ಹೊಡೆತ ನೀಡಿದೆ.

ಪ್ರಾದೇಶಿಕ ಪಕ್ಷಗಳ ಕೈ ಮೇಲು: ವಿಶೇಷವಾಗಿ, ನಿತೀಶ್‌ ನಿರ್ಗಮನದಿಂದ ಪ್ರಾದೇಶಿಕ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸೀಟುಗಳಿಗಾಗಿ ಕಾಂಗ್ರೆಸ್‌ ಜೊತೆ ನಡೆಸುವ ‘ಚೌಕಾಶಿ’ ಇನ್ನಷ್ಟು ಹೆಚ್ಚಲಿದ್ದು, ಅದು ಕಾಂಗ್ರೆಸ್‌ ಪಕ್ಷಕ್ಕೆ ಸ್ಪರ್ಧಿಸಲು ಸಿಗುವ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಮೈತ್ರಿಕೂಟದಿಂದ ನಿರ್ಗಮಿಸಲು ನಿತೀಶ್‌ ನೀಡಿರುವ ಬಹುಮುಖ್ಯ ಕಾರಣವೆಂದರೆ ‘ಮೈತ್ರಿಕೂಟದಲ್ಲಿ ಏನೂ ಪ್ರಗತಿಯಾಗುತ್ತಿಲ್ಲ. 

ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿ ಇರುವ ಕಡೆಯಲ್ಲೂ ಕಾಂಗ್ರೆಸ್‌ನವರು ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಒತ್ತಡ ಹಾಕುತ್ತಿದ್ದಾರೆ’ ಎಂಬುದೇ ಆಗಿದೆ. 

ಹೀಗಾಗಿ, ಕಾಂಗ್ರೆಸ್‌ನ ಒತ್ತಡದಿಂದಲೇ ನಿತೀಶ್‌ ಮೈತ್ರಿ ತೊರೆದರು ಎಂಬ ನೆಪ ಮುಂದಿಟ್ಟು ಇನ್ನಿತರ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಬಳಿ ಹೆಚ್ಚು ಸೀಟುಗಳಿಗೆ ಬೇಡಿಕೆ ಇಡಬಹುದು ಎನ್ನಲಾಗಿದೆ.

ಬಿಹಾರದಲ್ಲಿ ಬಿಜೆಪಿಗೆ ಆನೆ ಬಲ: ಒಂದೆಡೆ ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ನಿತೀಶ್‌ ನಿರ್ಗಮನದಿಂದ ಹಿನ್ನಡೆಯಾಗಿದ್ದರೆ, ಅವರ ಆಗಮನದಿಂದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಆನೆಬಲ ಬಂದಂತಾಗಿದೆ. 

ಈ ಬೆಳವಣಿಗೆಯು 40 ಲೋಕಸಭಾ ಸೀಟುಗಳಿರುವ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲ ಮಾಡಿಕೊಡಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನ ಇಮೇಜ್‌ಗೆ ಧಕ್ಕೆ:ಇಂಡಿಯಾ ಮೈತ್ರಿಕೂಟವನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್‌ ಪಕ್ಷ ಹಾಗೂ ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊತ್ತುಕೊಂಡಿದ್ದರು. ಜೆಡಿಯು ನಿರ್ಗಮನವು ಕಾಂಗ್ರೆಸ್‌ನ ಇಮೇಜ್‌ಗೆ ಧಕ್ಕೆ ತಂದಿದೆ. ಹೀಗಾಗಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ ಕೂಟದಲ್ಲಿ ಒಗ್ಗಟ್ಟಿಲ್ಲ’ ಎಂಬ ಪ್ರಚಾರವನ್ನು ಇನ್ನಷ್ಟು ತೀವ್ರಗೊಳಿಸಲಿದೆ.

ಖರ್ಗೆ ಪ್ರಧಾನಿ ಅಭ್ಯರ್ಥಿ ಮಾಡಲು ನಡೆದ ಯತ್ನ ನಿತೀಶ್‌ ಮುನಿಸಿಗೆ ಕಾರಣ: ಜೆಡಿಯು

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ನಡೆಸಿದ ಯತ್ನವೇ ನಿತೀಶ್‌ ಕುಮಾರ್‌ ಅವರು ಇಂಡಿಯಾ ಕೂಟಕ್ಕೆ ಗುಡ್‌ಬೈ ಹೇಳಲು ನಾಂದಿ ಹಾಡಿತು ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷವು ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್‌ ಮೈತ್ರಿಕೂಟದಿಂದ ಹೊರಬರಲು ಕಾರಣ. 

ಮುಂಬೈನಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ನಾವು ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೆವು. ಆದರೆ ಡಿ.19ರಂದು ನಡೆದ ಸಭೆಯಲ್ಲಿ ಸಂಚಿನ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಯಿತು. 

ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೂಲಕ ಖರ್ಗೆ ಹೆಸರು ಸೂಚಿಸುವಂತೆ ಮಾಡಲಾಯಿತು’ ಎಂದು ಆರೋಪಿಸಿದರು.ಪಕ್ಷದ ಇನ್ನೋರ್ವ ನಾಯಕ ರಜಿಬ್‌ ರಂಜನ್‌ ಮಾತನಾಡಿ ‘ಕಾಂಗ್ರೆಸ್‌ ಭಸ್ಮಾಸುರ ಇದ್ದಂತೆ’ ಎಂದು ವ್ಯಂಗ್ಯವಾಡಿದರು.

‘ಮೊದಲಿಗೆ ಯಾವುದೇ ನಾಯಕತ್ವ ಇಲ್ಲದ ವ್ಯಕ್ತಿಯನ್ನು ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ ತನ್ನನ್ನು ತಾನು ಮುಳುಗಿಸಿಕೊಂಡಿತು ಎಂದು ಹೆಸರು ಹೇಳದೆಯೇ ರಾಹುಲ್‌ ಹಾಂಧಿ ವಿರುದ್ಧ ಕಿಡಿಕಾರಿದರು.

ಇಂಡಿಯಾ ಕೂಟದ ವಿರುದ್ಧ ನಿತೀಶ್ ವಾಗ್ದಾಳಿ

‘ಇಂಡಿಯಾ ಮೈತ್ರಿಕೂಟ ನನ್ನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿನ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. 

ಹೀಗಾಗಿ ಹಳೆಯ ಮೈತ್ರಿಕೂಟದಿಂದ ಹೊರಬಂದು ಹೊಸ ಮೈತ್ರಿಕೂಟ ರಚಿಸಿದ್ದೇವೆ’ ಎಂದು ಆರ್‌ಜೆಡಿ-ಕಾಂಗ್ರೆಸ್‌ ಸಂಗ ತೊರೆದು ಬಿಜೆಪಿ ಕೈಹಿಡಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಭಾನುವಾರ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್‌ ಬಳಿಕ ಹಾಗೂ ಮತ್ತೆ ಸಿಎಂ ಆಗಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.‘ನಾನು ಇಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಜತೆ ಸೇರಿದ್ದೇನೆ. 

ಈ ಸಂದರ್ಭ ಎದುರಾಗಲು ಇಂಡಿಯಾ ಮೈತ್ರಿಕೂಟ ನನ್ನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದ್ದರ ಜೊತೆಗೆ, ರಾಜ್ಯದಲ್ಲೂ ಮೈತ್ರಿ ಸರ್ಕಾರದಲ್ಲೂ ಎಲ್ಲವೂ ಸರಿ ಇರಲಿಲ್ಲ. 

ಅದನ್ನು ಸರಿಪಡಿಸಲು ನಾನು ಸಾಕಷ್ಟು ಯತ್ನಿಸಿದರೂ ಅದು ಫಲ ಕೊಡಲಿಲ್ಲ. ಈ ಬಗ್ಗೆ ನನಗೆ ಹಲವರಿಂದ ಅಭಿಪ್ರಾಯಗಳು ಸಲ್ಲಿಕೆಯಾಗಿದ್ದವು. ಅವರೆಲ್ಲರ ಅಭಿಪ್ರಾಯಗಳನ್ನು ಆಲಿಸಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಈ ಹಿಂದೆ ಎನ್‌ಡಿಎ ಜತೆಗಿದ್ದೆ. ಕಾಲ ಬದಲಾದಾಗ ಬೇರೆ ಮಾರ್ಗದಲ್ಲಿ ಸಾಗಿದ್ದೆ. ಈಗ ಮನೆಗೆ ಮರಳಿದ್ದೇನೆ. ಎನ್‌ಡಿಎ ಬಿಟ್ಟು ಇನ್ನೆಲ್ಲೂ ಹೋಗಲ್ಲ’ ಎಂದು ಸ್ಪಷ್ಟಪಡಿಸಿದರು.

Share this article