ಸಂವಿಧಾನ ರಚನೆಕಾರರಿಗೂ ರಾಮನ ಆಡಳಿತ ಸ್ಫೂರ್ತಿ: ಮೋದಿ

KannadaprabhaNewsNetwork |  
Published : Jan 29, 2024, 01:34 AM ISTUpdated : Jan 29, 2024, 06:46 AM IST
Narendra Modi

ಸಾರಾಂಶ

ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ಕೋಟ್ಯಂತರ ಜನರ ಒಗ್ಗೂಡಿಸಿದೆ. ಪದ್ಮ ಪ್ರಶಸ್ತಿಗಳು ಕಳೆದೊಂದು ದಶಕದಲ್ಲಿ ಜನರ ಪ್ರಶಸ್ತಿಯಾಗಿ ಬದಲಾಗಿದೆ ಎಂದು ವರ್ಷದ ಮೊದಲ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನವದೆಹಲಿ: ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮಮಂದಿರಲ್ಲಿನ ಬಾಲಕ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಒಗ್ಗೂಡಿಸಿದೆ. 

ಜೊತೆಗೆ ಈ ಸಂದರ್ಭದಲ್ಲಿ ದೇಶದ ಜನತೆಯ ಸಾಮೂಹಿಕ ಶಕ್ತಿ ಪ್ರದರ್ಶನ ಅನಾವರಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ವರ್ಷದ ತಮ್ಮ ಮೊದಲ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ‘ದೇಶದ ಸಂವಿಧಾನದ ರಚನೆಕಾರರಿಗೂ ಕೂಡಾ ರಾಮನ ಆಡಳಿತ ಸ್ಫೂರ್ತಿಯಾಗಿತ್ತು. 

ಈ ಕಾರಣಕ್ಕಾಗಿಯೇ ಜ.22ರಂದು ನಾನು ‘ದೇವರಿಂದ ದೇಶ ಮತ್ತು ರಾಮನಿಂದ ರಾಷ್ಟ್ರ’ ಎಂದು ಹೇಳಿದ್ದು. ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಡೀ ದೇಶವನ್ನು ಒಂದುಗೂಡಿಸಿತ್ತು. 

ಪ್ರತಿಯೊಬ್ಬರು ಒಂದೇ ರೀತಿಯ ಅನುಭೂತಿ ಹೊಂದಿದ್ದರು, ಪ್ರತಿಯೊಬ್ಬರು ಭಕ್ತಿಯೋ ಒಂದೇ ರೀತಿಯದ್ದಾಗಿತ್ತು. ರಾಮ ಪ್ರತಿಯೊಬ್ಬನ ಮಾತುಗಳಲ್ಲೂ ತುಂಬಿದ್ದ, ರಾಮ ಪ್ರತಿಯೊಬ್ಬನ ಹೃದಯವನ್ನೂ ಆವರಿಸಿಕೊಂಡಿದ್ದ’ ಎಂದು ಹೇಳಿದರು.

‘ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ಇಡೀ ದೇಶದ ಸಾಮೂಹಿಕ ಶಕ್ತಿ ವ್ಯಕ್ತವಾಗಿತ್ತು. ಇದು ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣದ ಪ್ರತಿಜ್ಞೆಗೆ ಮೂಲವಾಗಿತ್ತು. 

ಇಂಥ ಸಾಮೂಹಿಕ ಶಕ್ತಿ ದೇಶವನ್ನು ಅಭಿವೃದ್ಧಿ ಇನ್ನಷ್ಟು ಉತ್ತುಂಗಕ್ಕೆ ಏರಲಿದೆ’ ಎಂದು ಪ್ರಧಾನಿ ಬಣ್ಣಿಸಿದರು.

ಜನರ ಪದ್ಮ: ಇದೇ ವೇಳೆ ತೆರೆಮೆರೆಯ ಸಾಧಕರನ್ನು ಆರಿಸಿ ಪದ್ಮ ಪ್ರಶಸ್ತಿ ನೀಡುವ ಸರ್ಕಾರ ಸಂಪ್ರದಾಯವನ್ನು ಸ್ಮರಿಸಿಕೊಂಡ ಪ್ರಧಾನಿ, ಕಳೆದೊಂದು ದಶಕದಲ್ಲಿ ಪದ್ಮ ಪ್ರಶಸ್ತಿಗಳು ಜನರ ಪ್ರಶಸ್ತಿಯಾಗಿ ಬದಲಾವಣೆಯಾಗಿದೆ. 

ಪ್ರತಿಯೊಬ್ಬ ಪದ್ಮ ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಇಡೀ ದೇಶದ ಜನತೆ ಸ್ಫೂರ್ತಿಯಾಗುವಂಥದ್ದು ಎಂದು ಹೇಳಿದರು.ಈ ನಡುವೆ ಇತ್ತೀಚೆಗೆ ನಡೆದ 75ನೇ ಗಣರಾಜ್ಯೋತ್ಸವ ಪರೇಡ್ ವೇಳೆ ಭಾಗಿಯಾಗಿದ್ದ 20 ತಂಡಗಳ ಪೈಕಿ 11 ತಂಡಗಳ ಸಂಪೂರ್ಣ ಮಹಿಳಾಮಯವಾಗಿದ್ದನ್ನೂ ಪ್ರಧಾನಿ ಶ್ಲಾಘಿಸಿದರು. 

ಇನ್ನು ಸ್ತಬ್ಧಚಿತ್ರಗಳಲ್ಲೂ ಸಾಕಷ್ಟು ಮಹಿಳೆಯರಿದ್ದರು. ಅವುಗಳೆಲ್ಲವೂ ಅತ್ಯುತ್ತಮವಾಗಿತ್ತು. 21ನೇ ಶತಮಾನದ ಭಾರತ ಮಹಿಳಾ ನೇತೃತ್ವದ ಅಭಿವೃದ್ದಿಯ ಮಂತ್ರ ಮುಂದಿಟ್ಟುಕೊಂಡು ಸಾಗುತ್ತಿದೆ ಎಂದರು.

ಇದೇ ವೇಳೆ ಕಳೆದ ಕೆಲ ವರ್ಷಗಳಿಂದ ನಾನಾ ಕಾರಣಗಳಿಂದ ಮೃತಪಟ್ಟವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗುತ್ತಿದ್ದಾರೆ. ಇದು ಸ್ವಾಗತಾರ್ಹ ಎಂದು ಪ್ರಧಾನಿ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು