ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ‘ರಾಷ್ಟ್ರಪತಿಗಳ ವಿಶೇಷ’ ರೈಲಿನಲ್ಲಿ ಒಡಿಶಾದ ಭುವನೇಶ್ವರದಿಂದ ಬೆಹ್ರಾಂಪುರಕ್ಕೆ ಪ್ರಯಾಣ ಕೈಗೊಂಡರು.
ರೈಲು ಪ್ರಯಾಣ ಏಕೆ?
- ರಾಷ್ಟ್ರಪತಿಗಳು ದೇಶದ ಎಲ್ಲಿಗೇ ಹೋದರೂ ವಿಮಾನ ಬಳಸುತ್ತಾರೆ. ವಿಮಾನದಿಂದ ಕಾರ್ಯಕ್ರಮ ಸ್ಥಳಕ್ಕೆ ಹೆಲಿಕಾಪ್ಟರ್ ಕಾರಲ್ಲಿ ತೆರಳುತ್ತಾರೆ- ಒಡಿಶಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಆಗಮಿಸಿದಾಗ ಪ್ರತಿಕೂಲ ಹವಾಮಾನ ಸೃಷ್ಟಿ. ಹೀಗಾಗಿ ರೈಲು ಪ್ರಯಾಣ ಆಯ್ಕೆ
- ಭುವನೇಶ್ವರದಿಂದ ಬೆಹ್ರಾಂಪುರ ನಡುವಣ 170 ಕಿ.ಮೀ. ದೂರವನ್ನು ಎರಡು ತಾಸಿನಲ್ಲಿ ಕ್ರಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಇದ್ದ ರೈಲು- ಈ ಹಿಂದೆ ರಾಮನಾಥ ಕೋವಿಂದ್ ಹಾಗೂ ಅಬ್ದುಲ್ ಕಲಾಂ ಅವರು ಕೂಡ ರಾಷ್ಟ್ರಪತಿ ಸ್ಪೆಷಲ್ ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡಿದ್ದರು
--ಭುವನೇಶ್ವರ: ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ‘ರಾಷ್ಟ್ರಪತಿಗಳ ವಿಶೇಷ’ ರೈಲಿನಲ್ಲಿ ಒಡಿಶಾದ ಭುವನೇಶ್ವರದಿಂದ ಬೆಹ್ರಾಂಪುರಕ್ಕೆ ಪ್ರಯಾಣ ಕೈಗೊಂಡರು. ಈ ವೇಳೆ ಅವರೊಂದಿಗೆ ರಾಜ್ಯಪಾಲ ಹರಿಬಾಬು ಕಂಭಾಪತಿ ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಮತ್ತಿತರರು ಇದ್ದರು. ರಾಷ್ಟ್ರಪತಿಗಳು ರೈಲಿನಲ್ಲಿ ಪ್ರಯಾಣಿಸುವುದು ಬಹಳ ಅಪರೂಪದ ಪ್ರಕರಣವಾದ ಕಾರಣ, ಇದಕ್ಕೆ ಭಾರೀ ಸಿದ್ಧತೆ ನಡೆಸಲಾಗಿತ್ತು. ಹಿಂದೊಂದು, ಮುಂದೊಂದು ರೈಲಿನ ಮೂಲಕ ಬೆಂಗಾವಲು ಭದ್ರತೆ ಒದಗಿಸಲಾಗಿತ್ತು. ರಾಷ್ಟ್ರಪತಿಗಳಿಗೆ ನೀಡಲಾದ ಈ ಪರಿ ಭದ್ರತೆಯನ್ನು ಜನತೆ ಕೂಡ ಬಹಳ ಕುತೂಹಲದಿಂದ ಬೆಳವಣಿಗೆ ಗಮನಿಸಿದರು.
‘ರಾಷ್ಟ್ರಪತಿ ವಿಶೇಷ’ ರೈಲು ಅತ್ಯಂತ ಐಷಾರಾಮಿ (ಅಲ್ಟ್ರಾ ಲಕ್ಶುರಿ) ಬೋಗಿ ಆಗಿದ್ದು ಹವಾನಿಯಂತ್ರಿತ ಬೆಡ್‌ರೂಂ, ಅಡುಗೆ ಮನೆ, ಊಟದ ಕೋಣೆಗಳನ್ನು ಹೊಂದಿದೆ. 8-10 ಬೋಗಿಗಳನ್ನು ಒಳಗೊಂಡ ರೈಲು 170 ಕಿ.ಮೀ ಪ್ರಯಾಣವನ್ನು 2 ಗಂಟೆಗಳ ಅವಧಿಯಲ್ಲಿ ಪೂರ್ಣಗೊಳಿಸಿತು. ರಾಜ್ಯದಲ್ಲಿ ಪ್ರಸಕ್ತ ಭಾರೀ ಮಳೆ, ಪ್ರವಾಹ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಬೆಹ್ರಾಂಪುರದ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ನಿಗದಿತ ಸಮಯ ತಲುಪುವುದನ್ನು ಖಚಿತಪಡಿಸಲು ಅವರಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿತ್ತು.ಭುವನೇಶ್ವರದಲ್ಲಿ ರಾಷ್ಟ್ರಪತಿಗಳು ರೈಲು ಏರಲು ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್‌ವರೆಗೂ ಕಾರು ಓಡಿಸಲಾಯಿತು. ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೋಗಿಯವರೆಗೆ ಕೆಂಪುಹಾಸು ಹಾಸಲಾಗಿತ್ತು. ಮುರ್ಮು ಅವರು ರೈಲನ್ನು ಏರಲು ವಿಶೇಷ ಮೆಟ್ಟಿಲು, ರೇಲಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ರಾಷ್ಟ್ರಪತಿಗಳ ರೈಲಿಗೆ ಭದ್ರತಾ ಕಾರಣಕ್ಕಾಗಿ ಎರಡು ಬೆಂಗಾವಲು ರೈಲುಗಳನ್ನು ಬಳಸಲಾಗಿತ್ತು. ಒಂದು ರೈಲು ಮುಂದೆ ಚಲಿಸಿದರೆ ಇನ್ನೊಂದು ರಾಷ್ಟ್ರಪತಿಗಳ ರೈಲನ್ನು ಹಿಂಬಾಲಿಸಿಕೊಂಡು ಬಂದಿತು. ಈ ರೈಲುಗಳು ಕೂಡ ತಲಾ 10 ಬೋಗಿಗಳನ್ನು ಹೊಂದಿದ್ದವು. ಮುರ್ಮು ಪ್ರಯಾಣದ ಅವಧಿಯಲ್ಲಿ ಆ ಮಾರ್ಗದಲ್ಲಿ ಬೇರೆ ಯಾವುದೇ ರೈಲುಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ಇಡೀ ಮಾರ್ಗವನ್ನೇ ಬಂದ್ ಮಾಡಲಾಗಿತ್ತು.ಮುರ್ಮು ಪ್ರಯಾಣ ಹಿನ್ನೆಲೆಯಲ್ಲಿ ಎರಡೂ ರೈಲು ನಿಲ್ದಾಣಗಳಲ್ಲಿ ಕಂಡುಕೇಳರಿಯ ಭದ್ರತೆ ಒದಗಿಸಲಾಗಿತ್ತು. ಜೊತೆಗೆ ರೈಲಿನೊಳಗೂ ರೈಲ್ವೆ ಪೊಲೀಸರು, ರೈಲೈ ರಕ್ಷಣಾ ಪಡೆ, ಕೆಲವು ಕೇಂದ್ರೀಯ ಭದ್ರತಾ ಸಿಬ್ಬಂದಿ ಕೂಡ ಉಪಸ್ಥಿತರಿದ್ದರು.
ಈ ಹಿಂದೆ 2021ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಿಂದ ಕಾನ್ಪುರದಲ್ಲಿ ತಮ್ಮ ಹುಟ್ಟೂರಿಗೆ ಹಾಗೂ 2006ರಲ್ಲಿ ಅಬ್ದುಲ್ ಕಲಾಂ ಅವರು ದೆಹಲಿಯಿಂದ ಡೆಹ್ರೂಡೂನ್‌ಗೆ ವಿಶೇಷ ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದರು.