ನಿತೀಶ್‌ ಗೋಸುಂಬೆ, ದ್ರೋಹ ತಜ್ಞ: ವಿಪಕ್ಷಗಳ ಕಟುಟೀಕೆ

KannadaprabhaNewsNetwork |  
Published : Jan 29, 2024, 01:34 AM ISTUpdated : Jan 29, 2024, 06:57 AM IST
ನಿತೀಶ್‌ ಕುಮಾರ್‌  | Kannada Prabha

ಸಾರಾಂಶ

ಜೆಡಿಯು ನಾಯಕನ ನಿರ್ಧಾರಕ್ಕೆ ಕಾಂಗ್ರೆಸ್‌, ಡಿಎಂಕೆ, ಆರ್‌ಜೆಡಿ, ಟಿಎಂಸಿ ಕಿಡಿಕಾರಿದ್ದು, ನಿತೀಶ್‌ಕುಮಾರ್‌ರನ್ನು ಗೋಸುಂಬೆ ತಜ್ಞ ಎಂದು ಕಿಡಿಕಾರಿವೆ.

ನವದೆಹಲಿ: ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಸರ್ಕಾರ ಪತನಗೊಳಿಸಿ ಮರಳಿ ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿರ್ಧಾರವನ್ನು ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಆರ್‌ಜೆಡಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳು ತೀವ್ರವಾಗಿ ಟೀಕಿಸಿವೆ. 

ನಿತೀಶ್‌ ಕುಮಾರ್‌ ಗೋಸುಂಬೆ, ದ್ರೋಹ ಎಸಗುವುದರಲ್ಲಿ ತಜ್ಞ ಎಂದೆಲ್ಲಾ ಕಿಡಿಕಾರಿವೆ.ಭಾನುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ‘ನಿತೀಶ್‌ ಕುಮಾರ್‌ ಇಂಡಿಯಾ ಮೈತ್ರಿಕೂಟ ಬಿಡುವ ಬಗ್ಗೆ ನನಗೆ ಲಾಲು ಮತ್ತು ತೇಜಸ್ವಿ ಮೊದಲೇ ಮಾಹಿತಿ ನೀಡಿದ್ದರು. 

ಅದೀಗ ನಿಜವಾಗಿದೆ. ನಾವು ಮೈತ್ರಿಕೂಟವನ್ನು ಕಾಪಾಡುವ ನಿಟ್ಟಿನಲ್ಲಿ ಮೊದಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಲಿರಲ್ಲ’ ಎಂದರು.ಮತ್ತೊಂದೆಡೆ ‘ಪದೇ ಪದೇ ಬಣ್ಣ ಬದಲಾಯಿಸುವ ಮೂಲಕ ನಿತೀಶ್‌ ಕುಮಾರ್‌ ಗೋಸುಂಬೆಗಳಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ. 

ದ್ರೋಹದ ತಜ್ಞನನ್ನು ಮತ್ತು ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವವರನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸಲಾರರು. 

ರಾಹುಲ್‌ ಗಾಂಧಿ ಅವರ ಭಾರತ್‌ ನ್ಯಾಯ್‌ ಜೋಡೋ ಯಾತ್ರೆಯ ಕಡೆಗಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂಥ ಯತ್ನ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಟೀಕಿಸಿದ್ದಾರೆ.

ನಮಗೆ ಲಾಭ: ನಿತೀಶ್‌ ನಮ್ಮಿಂದ ದೂರವಾಗಿದ್ದು ಇಂಡಿಯಾ ಮೈತ್ರಿಕೂಟಕ್ಕೆ ಆದ ಲಾಭ ಮತ್ತು ಬಿಜೆಪಿಗೆ ಆದ ನಷ್ಟ. ನಿತೀಶ್‌ ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಅವರಿಗೆ ಯಾವುದೇ ನಿಷ್ಠೆ ಇಲ್ಲ ಎಂದು ಡಿಎಂಕೆ ವಕ್ತಾರ ಜೆ.ಸಿ.ರವೀಂದ್ರನ್‌ ಹೇಳಿದ್ದಾರೆ.

ಕಸವು ಕಸ ತೊಟ್ಟಿಗೇ ಹೋಗುತ್ತೆ: ಲಾಲು ಪುತ್ರಿ
ಬಿಹಾರ ಮುಖ್ಯುಮಂತ್ರಿ ನಿತೀಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರಿ ರೋಹಿಣಿ ಆಚಾರ್ಯ, ‘ಕಸವು ಜಸದ ತೊಟ್ಟಿಗೇ ಹೋಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಿತೀಶ್‌ ಹಾಗೂ ಬಿಜೆಪಿಯನ್ನು ಕಸ ಹಾಗೂ ಕಸದ ತೊಟ್ಟಿಗೆ ಹೋಲಿಸಿದ್ದಾರೆ.

ಮತ್ತೊಂದೆಡೆ, ‘2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಸಂಪೂರ್ಣ ನಿರ್ನಾಮವಾಗಲಿದೆ. ನಿತೀಶ್‌ ಒಬ್ಬ ಒಳ್ಳೇ ವ್ಯಕ್ತಿ ನಿಜ. ಆದರೆ ಕೆಲಸದ ಶ್ರೇಯಸ್ಸು ಇನ್ನೊಬ್ಬರಿಗೆ ಹೋಗುವುದನ್ನು ಅವರು ಸಹಿಸಲ್ಲ. 

ನನಗೂ ಅವರು ಇದನ್ನೇ ಮಾಡುತ್ತಿದ್ದರು. ಈ ಬಗ್ಗೆ ಬಿಜೆಪಿ ಎಚ್ಚರದಿಂದ ಇರಬೇಕು’ ಎಂದು ಲಾಲು ಕಿರಿಯ ಪುತ್ರ, ನಿರ್ಗಮಿತ ಡಿಸಿಎಂ ತೇಜಸ್ವಿ ಯಾದವ್‌ ಹೇಳಿದ್ದಾರೆ.

ನಿತೀಶ್‌ಗೆ ‘ಊಸರವಳ್ಳಿ ರತ್ನ’ ಕೊಡಬೇಕು ಎಂದು ಲಾಲು ಹಿರಿಮಗ, ನಿರ್ಗಮಿತ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

ಪಲ್ಟಿ ರಾಮ್‌- ಟಎಂಸಿ: ನಿತೀಶ್‌ ಕುಮಾರ್‌ ಅವರಂಥ ಅವಕಾಶವಾದಿಗಳಿಗೆ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ನಿತೀಶ್‌ ಮತ್ತೆ ರಾಜಕೀಯ ಪಲ್ಟಿ ಹೊಡೆದಿದ್ದಾರೆ ಎಂದು ಟಿಎಂಸಿ ಸಂಸದ ಸೌಗತಾ ರಾಯ್‌ ಟೀಕಿಸಿದ್ದಾರೆ.

ನಿತೀಶ್‌ ಜನರ ಆಶೋತ್ತರ ಈಡೇರಿಸುತ್ತಾರೆ: ಮೋದಿ
ಬಿಹಾರದಲ್ಲಿ 9ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

‘ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌ ಅವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ, ರಾಜ್ಯದ ಅಭಿವೃದ್ಧಿ ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಅತ್ಯಂತ ಪ್ರಮಾಣಿಕವಾಗಿ ಮಾಡಲಿದೆ ಎಂಬ ವಿಶ್ವಾಸ ನನಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಬೆಳಗ್ಗೆಯೇ ನಿತೀಶ್‌ ರಾಜೀನಾಮೆ ನೀಡಿದ ನಂತರವೂ ಮೋದಿ ಅವರು ನಿತೀಶ್‌ಗೆ ಫೋನ್‌ ಮಾಡಿ ಅಭಿನಂದನೆ ಸಲ್ಲಿಸಿದ್ದರು ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು