ಕರುಣಾನಿಧಿ, ಜಯಲಲಿತಾ ಮೊದಲಾದ ನಾಯಕರನ್ನು ಪೊಲೀಸರು ಮನೆಗೆ ನುಗ್ಗಿಸಿ ಬಂಧಿಸಿದ ಇತಿಹಾಸ ಹೊಂದಿರುವ ತಮಿಳುನಾಡಿನಲ್ಲಿ ಮತ್ತೆ ಅಂಥದ್ದೇ ಬಂಧನದ ಹೈಡ್ರಾಮಾ ನಡೆದಿದೆ.

- ಭಾರಿ ಹೈಡ್ರಾಮಾ ಮಧ್ಯೆ ತ,ನಾಡು ಮಾಜಿ ಡಿಸಿಎಂ ಸೆರೆ

- ಹೈಕೋರ್ಟ್‌ ಸೂಚನೆ ಬಳಕ ವಿಚಾರಣೆ ನಡೆಸಿ ಬಿಡುಗಡೆ

----

ಆಗಿದ್ದೇನು?

- ತಂಜಾವೂರು ಕಾವೇರಿ ಪ್ರತಿಭಟನೆ ವೇಳೆ ಡಿಎಂಕೆ ಕಾರ್ಯಕರ್ತರಿಂದ ತ್ರಿಶಾ ತ್ರಿಶಾ ಎಂದು ಘೋಷಣೆ

- ಸಿಎಂ ವಿಜಯ್‌ ಸ್ನೇಹಿತೆ ಆದ ಕಾರಣ ಘೋಷಣೆ. ಈ ವೇಳೆ ನಕ್ಕು ದ್ವಂದ್ವ ಹೇಳಿಕೆ ನೀಡಿದ್ದ ಉದಯನಿಧಿ

- ಇದರ ವಿರುದ್ಧ ಟಿವಿಕೆ ಕಾರ್ಯಕರ್ತರ ಆಕ್ರೋಶ. ಹೀಗಾಗಿ ನಿನ್ನೆ ಬೆಳಗ್ಗೆ ಉದಯ್ ಬಂಧಿಸಿದ ಪೊಲೀಸ್‌

- ಬಳಿಕ ಹೈಕೋರ್ಟ್‌ನಿಂದ ತಮಿಳುನಾಡು ಡಿಸಿಎಂ ಬಿಡುಗಡೆಗೆ ಸೂಚನೆ. ವಿಚಾರಣೆ ನಡೆಸಿ ರಾತ್ರಿ ರಿಲೀಸ್

==

ಚೆನ್ನೈ: ಕರುಣಾನಿಧಿ, ಜಯಲಲಿತಾ ಮೊದಲಾದ ನಾಯಕರನ್ನು ಪೊಲೀಸರು ಮನೆಗೆ ನುಗ್ಗಿಸಿ ಬಂಧಿಸಿದ ಇತಿಹಾಸ ಹೊಂದಿರುವ ತಮಿಳುನಾಡಿನಲ್ಲಿ ಮತ್ತೆ ಅಂಥದ್ದೇ ಬಂಧನದ ಹೈಡ್ರಾಮಾ ನಡೆದಿದೆ. ನಟಿ ತ್ರಿಶಾ ಕೃಷ್ಣನ್‌ ವಿರುದ್ಧ ‘ಡಬಲ್‌ ಮೀನಿಂಗ್‌’ (ದ್ವಂದ್ವಾರ್ಥ) ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿ, 9 ತಾಸುಗಳ ಬಳಿಕ ರಾತ್ರಿ 8.30ರ ವೇಳೆಗೆ ಬಿಡುಗಡೆ ಮಾಡಿದ್ದಾರೆ.

ಆ.5ರಿಂದ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಅದಕ್ಕೂ ಮುನ್ನಾ ದಿನ ನಡೆದ ಈ ಘಟನೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಒಂದೆಡೆ ವಿಪಕ್ಷ ನಾಯಕನ ಬಂಧನವನ್ನು ಡಿಎಂಕೆ, ಎಐಎಡಿಎಂಕೆ, ಡಿಎಂಡಿಂಕೆ ಖಂಡಿಸಿದ್ದರೆ, ಮತ್ತೊಂದೆಡೆ ಉದಯನಿಧಿ ಬಂಧನವನ್ನು ಟಿವಿಕೆ, ಬಿಜೆಪಿ ನಾಯಕರು, ಹಲವು ಚಲನಚಿತ್ರ ನಟನಟಿಯರು ಸ್ವಾಗತಿಸಿದ್ದಾರೆ. ಜೊತೆಗೆ ಡಿಎಂಕೆ ನಾಯಕನ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವಂದ್ವಾರ್ಥ ಹೇಳಿಕೆ:

ಕಾವೇರಿ ನೀರು ಬಿಡುಗಡೆ ಮತ್ತು ಮೇಕೆದಾಟು ವಿಷಯದಲ್ಲಿ ಡಿಎಂಕೆ ಸೋಮವಾರ ತಂಜಾವೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಉದಯನಿಧಿ ಭಾಷಣ ಮಾಡುವ ವೇಳೆ ಗುಂಪೊಂದು ತ್ರಿಶಾ....ತ್ರಿಶಾ.... ಎಂದು ಘೋಷಣೆ ಕೂಗಿತ್ತು. ಈ ವೇಳೆ ಉದಯನಿಧಿ ಅವರು ತ್ರಿಶಾ ಹೆಸರು ಹೇಳದೆಯೇ ಅವರನ್ನು ಗುರಿಯಾಗಿಸಿ ದ್ವಂದ್ವಾರ್ಥ ಮಾತುಗಳನ್ನು ಆಡಿದ್ದರು. ಜೊತೆಗೆ ತಮ್ಮ ಮಾತಿಗೆ ತಾವೇ ವ್ಯಂಗ್ಯವಾಗಿ ನಕ್ಕಿದ್ದರು. ಬಳಿಕ ತಾವು ಆ ಅರ್ಥದಲ್ಲಿ ಹೇಳಿಲ್ಲ ಎಂದು ಸಬೂಬು ನೀಡುವ ಯತ್ನವನ್ನು ಮಾಡಿದ್ದರು.

ಆಕ್ರೋಶ, ದೂರು:

ಈ ಹೇಳಿಕೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ತಂಜಾವೂರಿನಲ್ಲಿ ಡಿಎಂಕೆ ನಾಯಕನ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಂಜಾವೂರು ಪೊಲೀಸರು ಮಂಗಳವಾರ ಚೆನ್ನೈನಲ್ಲಿರುವ ಉದಯನಿಧಿ ವಿಚಾರಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸರನ್ನು ಒಂದು ತಾಸು ಕಾಯಿಸಿದ ಕುಟುಂಬ ಸದಸ್ಯರು ಬಳಿಕ ಪೊಲೀಸರನ್ನು ಒಳಗೆ ಬಿಟ್ಟರು. ಅಲ್ಲಿ ಸೋಮವಾರದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ ಮಾಹಿತಿ ಪಡೆದ ಪೊಲೀಸರು 11 ಗಂಟೆ ವೇಳೆ ಉದಯನಿಧಿ ಅವರನ್ನು ಬಂಧಿಸಿ ತಂಜಾವೂರಿನತ್ತ ಕರೆದೊಯ್ದರು.

ಟಿವಿಕೆ ಮೂರ್ಖರ ಗುಂಪು:

ತಂಜಾವೂರಿಗೆ ಪೊಲೀಸರು ಕರೆದೊಯ್ಯುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, ‘ಟಿವಿಕೆಯು ಮೂರ್ಖರ ಗುಂಪು. ರೈತರ ಸಮಸ್ಯೆ ಮತ್ತು ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ವಿಪಕ್ಷದ ಪ್ರಶ್ನೆಗಳಿಗೆ ಆಡಳಿತ ಪಕ್ಷದ ಬಳಿ ಯಾವುದೇ ಉತ್ತರವಿಲ್ಲ. ನಾನು ಎತ್ತಿದ ಪ್ರಶ್ನೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ನನ್ನನ್ನು ಬಂಧಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನಾದರೂ ಪ್ರಸ್ತಾಪಿಸಿದ್ದೇನೆ? ನ್ಯಾಯಾಲಯವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು.

ಹೈಕೋರ್ಟ್‌ಗೆ ಮೊರೆ:

ಈ ನಡುವೆ ಬಂಧನದ ಭೀತಿಯಲ್ಲಿದ್ದ ಉದಯನಿಧಿ ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಬೆಳಗ್ಗೆಯೇ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಅವರ ಬಂಧನ ಮಾಡಲಾಗಿತ್ತು. ಬಳಿಕ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರದ ವಕೀಲರು, ‘ನಮಗೆ ಉದಯನಿಧಿ ಅವರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಉದ್ದೇಶವಿಲ್ಲ. ಕೇವಲ ವಿಚಾರಣೆ ಬಳಿಕ ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು. ಹೀಗಾಗಿ ಹೈಕೋರ್ಟ್‌ ಕೂಡಾ ವಿಚಾರಣೆ ಬಳಿಕ ಡಿಎಂಕೆ ನಾಯಕನ ಬಿಡುಗಡೆಗೆ ಆದೇಶಿಸಿತು.

ಯೂಟರ್ನ್‌:

ಮೊದಲಿಗೆ ತಂಜಾವೂರಿನಲ್ಲಿ ವಿಚಾರಣೆಗೆ ಉದ್ದೇಶಿಸಿದ್ದ ಪೊಲೀಸರು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಿಎಂಕೆ ಕಾರ್ಯಕರ್ತರು ಸೇರುವ ಭಯದಿಂದ ದೇಗುಲ ನಗರಿಯಿಂದ 27 ಕಿ.ಮೀ ದೂರದ ಸೆಂಗಿಪೆಟ್ಟಿ ಪೊಲೀಸ್‌ ಠಾಣೆಗೆ ಕರೆತಂದು ಅಲ್ಲೇ ವಿಚಾರಣೆ ನಡೆಸಿ ರಾತ್ರಿ 8.30ರ ವೇಳೆಗೆ ಬಿಡುಗಡೆ ಮಾಡಿದರು.

9 ಸೆಕ್ಷನ್‌ಗಳಡಿ ಪ್ರಕರಣ:

ಅಸಭ್ಯ ಪದ ಬಳಕೆ, ಮಹಿಳೆಯರ ಗೌರವಕ್ಕೆ ಧಕ್ಕೆ, ಗಲಭೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಒಟ್ಟು 9 ಸೆಕ್ಷನ್‌ಗಳ ಅಡಿಯಲ್ಲಿ ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯಡಿ ಸಹ ಕ್ರಮ ಜರುಗಿಸಲಾಗಿದೆ.+++

ಕ್ಷಮೆಗೆ ಆಗ್ರಹ:

ಉದಯನಿಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಟಿವಿಕೆ ಪ್ರಮುಖರು, ಸ್ಥಳೀಯ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ನಟಿಗೆ ಮತ್ತು ಒಟ್ಟಾರೆ ಮಹಿಳಾ ಕುಲಕ್ಕೆ ಮಾನಸಿಕ ವೇದನೆ ಉಂಟುಮಾಡಿರುವ ಉದಯನಿಧಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಟಿವಿಕೆ ಆಗ್ರಹಿಸಿದೆ.

ಬಿಜೆಪಿ ಸ್ವಾಗತ:

ಉದಯನಿಧಿ ಬಂಧನವನ್ನು ಬಿಜೆಪಿ ಸ್ವಾಗತಿಸಿದ್ದು, ‘ಸನಾತನ ಧರ್ಮವನ್ನು ನಿಂದಿಸಿದ್ದ ವ್ಯಕ್ತಿಯನ್ನು, ಮಹಿಳೆಯೊಬ್ಬರ ಕುರಿತಾದ ಅಸಹ್ಯಕರ ಹಾಗೂ ಅವಹೇಳನಕಾರಿ ಹೇಳಿಕೆಗಾಗಿ ಬಂಧಿಸಲಾಗಿದೆ. ಅವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಮಯ ಬಂದಿದೆ’ ಎಂದು ಕುಟುಕಿದೆ. ಕಟು ಟೀಕೆ:

ಮಹಿಳೆಯರನ್ನು ಹೀಗೆ ರಾಜಕೀಯದ ಆಟಕ್ಕೆ ಬಳಸುವುದು ಸರಿಯಲ್ಲ. ಮಹಿಳೆಯರು ಆಟದ ದಾಳಗಳಲ್ಲ ಎಂದು ಗಾಯಕಿ ಚಿನ್ಮಯಿ ಶ್ರೀಪಾದ್‌ ಕಿಡಿಕಾರಿದ್ದರೆ, ಹೇಳಿಕೆ ಕುರಿತು ಉದಯನಿಧಿ ಕ್ಷಮೆಯಾಚಿಸಬೇಕು ಎಂದು ನಟಿ ಖುಷ್ಬೂ ಸುಂದರ್‌ ಆಗ್ರಹ ಮಾಡಿದ್ದಾರೆ.

ಇನ್ನು ಉದಯನಿಧಿ ತಮ್ಮ ಸ್ಥಾನದ ಘನತೆ ಮರೆತು ಮಹಿಳೆಯರ ಬಗ್ಗೆ ಕೀಳು ಮಾತುಗಳನ್ನು ಆಡಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಖಂಡಿಸಿದ್ದಾರೆ. ಜೊತೆಗೆ ಬಜೆಟ್ ಅಧಿವೇಶನಕ್ಕೂ ಮುನ್ನಾ ದಿನ ವಿಪಕ್ಷ ನಾಯಕರ ಬಂಧನದಲ್ಲಿ ಬೇರೋನೋ ಒಳಸಂಚಿದೆ ಎಂದು ಶಂಕಿಸಿದ್ದಾರೆ. ಇನ್ನು ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯ್‌ಕಾಂತ್‌ ಕೂಡಾ ವಿಪಕ್ಷ ನಾಯಕನ ಬಂಧನ ಖಂಡಿಸಿದ್ದಾರೆ.