ಇಂದು 10ನೇ ಸಲ ನಿತೀಶ್ ಬಿಹಾರ ಸಿಎಂ

KannadaprabhaNewsNetwork |  
Published : Nov 20, 2025, 12:30 AM IST
ನಿತೀಶ | Kannada Prabha

ಸಾರಾಂಶ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್‌ಡಿಎ ಕೂಟದ ನಾಯಕರಾಗಿ ಜೆಡಿಯು ಪಕ್ಷಾಧ್ಯಕ್ಷ ನಿತೀಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 10ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

- ಎನ್‌ಡಿಎ ಕೂಟದ ನಾಯಕನಾಗಿ ಜೆಡಿಯು ನೇತಾರ ಆಯ್ಕೆ

- ಇಂದು ಪಟನಾ ಗಾಂಧಿ ಮೈದಾನದಲ್ಲಿ ಪದಗ್ರಹಣ- ಮೋದಿ, ಶಾ, ನಡ್ಡಾ, ಬಿಜೆಪಿ ಸಿಎಂಗಳು, ನಾಯಕರು ಭಾಗಿಪಿಟಿಐ ಪಟನಾ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್‌ಡಿಎ ಕೂಟದ ನಾಯಕರಾಗಿ ಜೆಡಿಯು ಪಕ್ಷಾಧ್ಯಕ್ಷ ನಿತೀಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 10ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಟನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಇತರ ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸರ್ವಾನುಮತದಿಮದ ಆಯ್ಕೆ:ನಿತೀಶ್‌ರನ್ನು ಕೂಟದ ನಾಯಕರನ್ನಾಗಿಸುವ ಪ್ರಸ್ತಾಪವನ್ನು ಜೆಡಿಯುನ ವಿಜಯ್‌ ಚೌಧರಿ ಸಲ್ಲಿಸಿದ್ದು, ಬಿಜೆಪಿ ನಾಯಕರಾದ ಸಾಮ್ರಾಟ್‌ ಚೌಧರಿ ಮತ್ತು ವಿಜಯ್‌ ಸಿನ್ಹಾ ಬೆಂಬಲಿಸಿದರು. ಬಳಿಕ ಔಪಚಾರಿಕವಾಗಿ ನಿತೀಶ್‌ರನ್ನು ತಮ್ಮ ನಾಯಕ ಎಂದು ಎನ್‌ಡಿಎ ಘೋಷಿಸಿತು.

ಎನ್‌ಡಿಎ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ನಿತೀಶ್‌, ರಾಜ್ಯಪಾಲ ಆರಿಫ್‌ ಮೊಹೊಮ್ಮದ್‌ ಖಾನ್‌ ಅವರನ್ನು ಭೇಟಿಯಾಗಿ ಹಾಲಿ ಇರುವ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದನ್ನು ರಾಜ್ಯಪಾಲರು ಅಂಗೀಕರಿಸಿದರು. ಈ ವೇಳೆ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ, ಉತ್ತರಪ್ರದೇಶ ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಕೂಡ ಅವರ ಜತೆಗಿದ್ದರು. ನಿತೀಶ್‌, ಎಲ್ಲಾ ಎನ್‌ಡಿಎ ಕ್ಷೇತ್ರಗಳಿಂದ ಗೆದ್ದ ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳ ಬೆಂಬಲ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟ 243ರಲ್ಲಿ 202 ಸೀಟುಗಳನ್ನು ಗೆದ್ದಿತ್ತು.

==

ರಾಹುಲ್ ಆರೋಪ ಆಧಾರರಹಿತ, ವಿಷಪೂರಿತ: 286 ಗಣ್ಯರ ಕಿಡಿ

- ರಾಹುಲ್‌ ಮತಗಳ್ಳತನ ಆರೋಪದ ವಿರುದ್ಧ ಬಹಿರಂಗ ಪತ್ರ

-ಸೈನಿಕರ ಶೌರ್ಯ ಪ್ರಶ್ನಿಸಿದವರಿಂದ ಆಯೋಗದ ಮೇಲೆ ದಾಳಿ

ನವದೆಹಲಿ: ಬಿಜೆಪಿ ಜೊತೆ ಸೇರಿಕೊಂಡು ಚುನಾವಣಾ ಆಯೋಗ ಮತಗಳ್ಳತನ ನಡೆಸುತ್ತಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ಆರೋಪದ ವಿರುದ್ಧ ಸಮಾಜದ ವಿವಿಧ ಕ್ಷೇತ್ರಗಳ 286 ಮಂದಿ ಗಣ್ಯರು ಬಹಿರಂಗ ಪತ್ರ ಬರೆದಿದ್ದಾರೆ.

16 ನ್ಯಾಯಾಧೀಶರು, 123 ನಿವೃತ್ತ ಅಧಿಕಾರಿಗಳು, 14 ಮಾಜಿ ರಾಯಭಾರಿಗಳು ಹಾಗೂ 133 ನಿವೃತ್ತ ಸೇನಾಧಿಕಾರಿಗಳು ಸೇರಿ ರಾಹುಲ್‌ ಗಾಂಧಿಯವರಿಗೆ ಬರೆದ ಪತ್ರಕ್ಕೆ ‘ರಾಷ್ಟ್ರೀಯ ಸಾಂವಿಧಾನಿಕ ಸಂಸ್ಥೆಯ ಮೇಲಿನ ದಾಳಿ’ ಎಂಬ ಶೀರ್ಷಿಕೆ ನೀಡಲಾಗಿದೆ.‘ವಿರೋಧ ಪಕ್ಷದ ನಾಯಕರು ವಿಷಪೂರಿತ, ಪ್ರಚೋದನಕಾರಿ ಮತ್ತು ಆಧಾರರಹಿತ ಆರೋಪಗಳ ಮೂಲಕ ಸಾಂವಿಧಾನಿಕ ಸಂಸ್ಥೆಗೆ ಹಾನಿಯುಂಟುಮಾಡಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಾಧನೆಗಳನ್ನು ಪ್ರಶ್ನಿಸಿದ್ದರು. ಈಗ ಚುನಾವಣಾ ಆಯೋಗದ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದ್ದಾರೆ. ಇದು ಪುನರಾವರ್ತಿತ ಚುನಾವಣಾ ವೈಫಲ್ಯ ಮತ್ತು ಹತಾಶೆಯಿಂದ ಹುಟ್ಟಿಕೊಂಡ ನಡವಳಿಕೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

==

ಮತಪಟ್ಟಿ ಪರಿಷ್ಕರಣೆ ಒತ್ತಡ?: ಬಂಗಾಳದಲ್ಲಿ ಮತ್ತೆರಡು ಆತ್ಮಹತ್ಯೆ

-ಬಿಜೆಪಿ ನಾಯಕರ ಪ್ರಚೋದನೆ: ಸಿಎಂ ದೀದಿ ಆರೋಪ

ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಹಾಗೂ ಜಲಪೈಗುರಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚುನಾವಣಾ ಆಯೋಗದ ಮತಪಟ್ಟಿ ತೀವ್ರ ಪರಿಷ್ಕರಣೆಯೇ ಇವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದು ರಾಜ್ಯದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.ಉತ್ತರ 24 ಪರಗಣ ಜಿಲ್ಲೆಯ ಸೋಫಿಕುಲ್ ಮಂಡಲ್ (58) ಬುಧವಾರ ವಿಷ ಸೇವಿಸಿ ಸಾವನ್ನಪ್ಪಿದ್ದರು. ಮತಪಟ್ಟಿಯಲ್ಲಿ ಮೊಂಡಲ್‌ ಹೆಸರು ಇತ್ತಾದರೂ, ಕುಟುಂಬಸ್ಥರ ಹೆಸರು ನಾಪತ್ತೆಯಾಗಿತ್ತು. ಹೀಗಾಗಿ ತಮ್ಮನ್ನು ಸ್ಥಳಾಂತರಿಸುತ್ತಾರೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು, ಜಲಪೈಗುರಿ ಜಿಲ್ಲೆಯ ಶಾಂತಿಮುನಿ ಒರಾವೊ (48) ಎಂಬ ಅಂಗನವಾಡಿ ಕಾರ್ಯಕರ್ತೆ ನೇಣಿಗೆ ಶರಣಾಗಿದ್ದರು. ಪರಿಷ್ಕರಣೆ ಕಾರ್ಯದ ಒತ್ತಡ ತಾಳಲಾರದೆ ನೇಣಿಗೆ ಶರಣಾದರು ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.

ಘಟನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದು, ಬಿಜೆಪಿ ನಾಯಕರನ್ನು ಸಂತುಷ್ಟಗೊಳಿಸಲು ಆಯೋಗ ಜನರ ಬಲಿ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದೆ.

PREV

Recommended Stories

ಸತ್ಯ ಸಾಯಿಬಾಬಾ ಬೋಧನೆ ಕೋಟ್ಯಂತರ ಭಕ್ತರಿಗೆ ದಾರಿದೀಪ: ಮೋದಿ
ಫ್ರೀ ಬಸ್‌ ಆಯ್ತು, ಈಗ ತೆಲಂಗಾಣದಲ್ಲಿ 1 ಕೋಟಿ ಫ್ರೀ ಸೀರೆ!