ಡೆಹ್ರಾಡೂನ್: ಉತ್ತರಾಖಂಡದ ಬದರಿನಾಥ ಮತ್ತು ಮಾಣಾ ನಡುವೆ ಹಿಮಕುಸಿತವಾಗಿ 8 ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ಬದರಿನಾಥ ದೇಗುಲದಲ್ಲಿ ಶಂಖ ನಾದ ನಿಷೇಧಿಸಲಾಗಿದೆ. ಶಂಖ ನಾದವು ಕಂಪನ ಸೃಷ್ಟಿಸುವ ಕಾರಣ ಅದು ಹಿಮಕುಸಿತಕ್ಕೆ ಕಾರಣವಾಗುವ ಭೀತಿಯಿಂದ ದೇಗುಲದಲ್ಲಿ ಮತ್ತು ಬದರಿಪಟ್ಟಣದಲ್ಲಿ ಶಂಖ ಮೊಳಗಿಸುವುದನ್ನು ನಿಷೇಧಿಸಲಾಗಿದೆ.
ಶಂಖವು ವಿಷ್ಣವಿಗೆ ಪ್ರಿಯವಾದ ವಸ್ತುವಾಗಿದ್ದು, ಅಭಿಷೇಕ ಮತ್ತು ಮಂಗಳರಾತಿ ವೇಳೆ ದೇಗುಲದಲ್ಲಿ ಮೊಳಗಿಸಲಾಗುತ್ತಿತ್ತು.
ಹಿರಿಯ ವಿಜ್ಞಾನಿಯೊಬ್ಬರು ಮಾತನಾಡಿ, ಬದರಿನಾಥ ಪ್ರದೇಶವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಇಲ್ಲಿ ಮಾನವನ ಸಂಚಾರ ಹೆಚ್ಚಿದೆ. ಕಂಪನದ ಆತಂಕದಿಂದಾಗಿ ಶಂಖನಾದಕ್ಕೆ ನಿಷೇಧ ಹೇರಲಾಗಿದೆ. ಆದರೆ ಹೆಚ್ಚುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯೂ ಕಂಪನ ಸೃಷ್ಟಿಸಿ ಹಿಮಪಾತಕ್ಕೆ ಕಾರಣವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.