ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆಗೆ ವೇದಿಕೆಯಾಗಿರುವ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಕ್ಷೇತ್ರಗಳ ಪುನರ್‌ವಿಂಗಡಣೆಯಿಂದ ದಕ್ಷಿಣ ಸೇರಿದಂತೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ’ ಎಂಬ ಭರವಸೆ ನೀಡಿದ್ದಾರೆ. ಅತ್ತ ಪ್ರತಿಪಕ್ಷ ಕಾಂಗ್ರೆಸ್, ‘ಮೋದಿ ಉದ್ದೇಶಪೂರ್ವಕವಾಗಿ ಕ್ಷೇತ್ರ ಮರುವಿಂಗಡಣೆ ವಿಷಯದ ಬಗ್ಗೆ ಮಾತನಾಡಲಿಲ್ಲ’ ಎಂದು ಆರೋಪಿಸಿದೆ.
ಮಹಿಳಾ ಮೀಸಲು ತಿದ್ದುಪಡಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಆಯೋಗ ರಚನೆಗೆ ಸಂಬಂಧಿಸಿದ ಮಸೂದೆ ಮಂಡನೆಯಾದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಈ ಪ್ರಕ್ರಿಯೆಯಲ್ಲಿ ಉತ್ತರದಿಂದ ದಕ್ಷಿಣದ ವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ. ಯಾವುದೇ ರಾಜ್ಯದ ಲೋಕಸಭಾ ಸೀಟುಗಳ ಅನುಪಾತದಲ್ಲಿ ಇಳಿಕೆ ಆಗದು. ಹೆಚ್ಚಳವಾದರೂ ಅದು ಎಲ್ಲರಿಗೂ ಸಮಾನವಾಗಿರುತ್ತದೆ ಎಂದು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ’ ಎಂದರು.
ಸದನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ಕೊಡುವ ಬಗ್ಗೆ ಮಾತನಾಡುತ್ತಾ, ‘ಮೀಸಲಾತಿ ಮಹಿಳೆಯರ ಹಕ್ಕು. ನಾವು ಅವರಿಗೆ ಏನೋ ಕೊಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ಇದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರವಾಗಿದೆ. ದೇಶ-ವಿದೇಶಗಳಲ್ಲಿರುವ ಮಹಿಳೆಯರು ನಮ್ಮನ್ನು ನೋಡುತ್ತಿದ್ದಾರೆ ಹಾಗೂ ನಮ್ಮ ಉದ್ದೇಶವನ್ನು ಅಳೆಯುತ್ತಿದ್ದಾರೆ. 2023ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದ್ದಾಗ ಅವಸರಿಸಲಾಯಿತು. ಆದರೆ ಈಗ ಅದಕ್ಕಾಗಿ ಸಮಯ ತೆಗೆದುಕೊಂಡು ಮಾಡುತ್ತಿದ್ದೇವೆ. ಈ ಕೆಲಸಕ್ಕಿದು ಸಕಾಲ’ ಎಂದು ಪ್ರತಿಪಾದಿಸಿದರು.
ಜತೆಗೆ, ‘ಮಹಿಳಾ ಮೀಸಲನ್ನು ವಿರೋಧಿಸಿದವರನ್ನು ಈ ದೇಶದ ಸ್ತ್ರೀಯರು ಮರೆತಿಲ್ಲ. ಈಗಲೂ ನೀವದನ್ನು ವಿರೋಧಿಸಿದರೆ ರಾಜಕೀಯವಾಗಿ ನನಗೇ ಲಾಭವಾಗುತ್ತದೆ. ಆದರೆ ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ನನಗಿದರ ಶ್ರೇಯ ಬೇಡ. ಇದನ್ನು ಗ್ಯಾರೆಂಟಿ ಎನ್ನಬಹುದು ಇಲ್ಲವೇ ಭರವಸೆ ಎನ್ನಲೂಬಹುದು. ಉದ್ದೇಶ ಸ್ಪಷ್ಟವಾಗಿದ್ದರೆ ಪದಗಳೊಂದಿಗೆ ಆಟವಾಡುವ ಅಗತ್ಯ ಇರುವುದಿಲ್ಲ ’ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
‘ಕಳೆದ 25-30 ವರ್ಷಗಳಲ್ಲಿ ಪಂಚಾಯಿತಿ ಚುನಾವಣೆಗಳಲ್ಲಿ ಗೆದ್ದ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಇದೆ. ಮೊದಲಾದರೆ ಎಲ್ಲಾ ತಿಳಿದಿದ್ದರೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರು ಅನ್ನಿಸಿದ್ದನ್ನು ಹೇಳುತ್ತಾರೆ. ಇನ್ನು ಸಂಕೀರ್ಣ ಕಾರ್ಯವಿಧಾನದ ನೆಪವೊಡ್ಡಿ ಅವರನ್ನು ಕಾಯಿಸಿದರೆ, ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ’ ಎಂದ ಮೋದಿ, ‘ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೇವಲ ಸಂಖ್ಯೆಯಲ್ಲ, ಬದಲಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿ ಇರುವ ಬದ್ಧತೆಯಾಗಿದೆ’ ಎಂದು ಹೇಳಿದರು.
ನಾರಿಶಕ್ತಿಯನ್ನು ಬಣ್ಣಿಸುತ್ತಾ, ‘ಎಲ್ಲಾ ವಯೋಮಾನದ ಸ್ತ್ರೀಯರು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ. ದೇಶದ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರು ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ದೇಶದ ಸಾಮರ್ಥ್ಯ ಹೆಚ್ಚಲಿದೆ. ತಳಮಟ್ಟದಲ್ಲಿ ನಾಯಕಿಯರು ಹುಟ್ಟಿಕೊಂಡು ನಿರ್ಧಾರ ಕೈಗೊಳ್ಳುವಲ್ಲಿ ತೊಡಗಿದರೆ, ಇದು ವಿಕಸಿತ ಭಾರತ ನಿರ್ಮಾಣಕ್ಕಿದು ಪ್ರಮುಖವಾಗಲಿದೆ’ ಎಂದರು.
ಉದ್ದೇಶಪೂರ್ವಕ ಕುರುಡು-ಕೈ:
ಪ್ರಧಾನಿಯವರ ಭಾಷಣವನ್ನು ಟೀಕಿಸಿರುವ ಕಾಂಗ್ರೆಸ್, ‘ಕ್ಷೇತ್ರ ಮರುವಿಂಗಡಣೆ ಬಿಟ್ಟು ಬೇರೆಲ್ಲಾ ವಿಷಯಗಳ ಬಗ್ಗೆ ಮೋದಿ ಮಾತನಾಡಿದರು. ಇದು, ಆ ವಿಷಯದ ಬಗ್ಗೆ ಅವರ ಉದ್ದೇಶಪೂರ್ವಕ ಕುರುಡುತನವನ್ನು ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಮೋದಿಯನ್ನು ‘ಗೃಹಸ್ಥರಲ್ಲದ ಪ್ರಧಾನಿ’ ಎಂದು ಸಂಬೋಧಿಸುತ್ತಾ, ‘ಮಸೂದೆ ಬಗ್ಗೆ ಎದ್ದಿರುವ ಯಾವೊಂದೂ ಕಳವಳದ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ. ಎಲ್ಲಾ ಪಕ್ಷಗಳೂ ಸರ್ವಾನುಮತದಿಂದ ಮಸೂದೆಗಳನ್ನು ಅಂಗೀಕರಿಸಬೇಕೆಂದು ಅವರು ಕರೆ ನೀಡಿರುವರಾದರೂ, ಅಂತಹ ವಿಶ್ವಾಸ ಗಳಿಸುವ ಕೆಲಸವನ್ನು ಅವರ ಸರ್ಕಾರ ಮಾಡಿಯೇ ಇಲ್ಲ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳು ಮುಗಿದಮೇಲೆ ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರೂ ಅದನ್ನು ತಿರಸ್ಕರಿಸಲಾಯಿತು. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿಲ್ಲ. ಅವರ ಆತಂಕಗಳನ್ನೂ ಕಠೋರವಾಗಿ ತಿರಸ್ಕರಿಸಲಾಯಿತು. ಆ ಪ್ರಕ್ರಿಯೆಯ ಬಗ್ಗೆ ಲಿಖಿತರೂಪದಲ್ಲೂ ಸ್ಪಷ್ಟ ಮಾಹಿತಿ ನೀಡಿಲ್ಲ’ ಎಂದು ಆರೋಪಗಳ ಸುರಿಮಳೆಗೈದರು.
ಜತೆಗೆ, ‘ಮಹಿಳೆಯರಿಗೆ ನೀಡಲಾಗುವ ಶೇ.33ರಷ್ಟು ಮೀಸಲಾತಿಯ ಒಳಗೆ ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದವರಿಗೆ ಮೀಸಲಾತಿಯನ್ನು ನೀಡಬೇಕು. ಈ ಆಗ್ರಹವನ್ನೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದೂ ಆಪಾದಿಸಿದರು.
ದಕ್ಷಿಣಕ್ಕೆ ಅನ್ಯಾಯ ಆಗಲ್ಲ: ಅಮಿತ್ ಶಾ
ನವದೆಹಲಿ: ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನ ಮತ್ತು ಸಂಸತ್ತಿನ ಒಟ್ಟು ಸ್ಥಾನದಲ್ಲಿ ಶೇಕಡವಾರು ಪ್ರಮಾಣ ಇಳಿಕೆಯಾಗುತ್ತದೆ ಎಂಬ ಅಸಮಾಧಾನದ ನಡುವೆಯೇ, ಈ ವಾದವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲಗಳೆದಿದ್ದು, ‘ಸುಳ್ಳು ನಿರೂಪಣೆಯನ್ನು ಹರಡಲಾಗುತ್ತಿದೆ’ ಎಂದಿದ್ದಾರೆ.
ಅಲ್ಲದೆ ಅಂಕಿ ಅಂಶಗಳ ಸಮೇತ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಸ್ಥಾನ, ಪಾಲು ಹೇಗೆ ಏರಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪರ ಮಾತನಾಡಿದ ಅಮಿತ್ ಶಾ ‘ಸದ್ಯ 129 ಲೋಕಸಭಾ ಸ್ಥಾನ ಹೊಂದಿರುವ ದಕ್ಷಿಣದ 5 ರಾಜ್ಯಗಳ ಬಲವು, ಕ್ಷೇತ್ರ ಮರುವಿಂಗಡಣೆಯ ಬಳಿಕ 195ಕ್ಕೆ ಏರಲಿದೆ. ಶೇಕಡವಾರು ನೋಡುವುದಾದರೆ ದಕ್ಷಿಣದ ಪಾಲು ಶೇ.23.76ರಿಂದ ಶೇ.23.87 ಅಥವಾ ಶೇ.24ಕ್ಕೆ ತಲುಪಲಿದೆ.
ಇದು ಸೀಟು ಮತ್ತು ಪಾಲು ಎರಡೂ ಏರಿಕೆಗೆ ಸಾಕ್ಷಿ ಎಂದು ಹೇಳಿದರುಜೊತೆಗೆ ದಕ್ಷಿಣದ ರಾಜ್ಯವಾರು ಮಾಹಿತಿ ಹಂಚಿಕೊಂಡ ಶಾ, ‘ಕರ್ನಾಟಕದಲ್ಲಿ ಈಗಿರುವ 28 ಸೀಟುಗಳು ಪ್ರಮಾಣ 42ಕ್ಕೇರಲಿದೆ. ಅಂತೆಯೇ ಆಂಧ್ರದಲ್ಲಿ 25ರಿಂದ 38ಕ್ಕೆ, ತೆಲಂಗಾಣದಲ್ಲಿ 17ರಿಂದ 26ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59ಕ್ಕೆ, ಕೇರಳದಲ್ಲಿ 20ರಿಂದ 30ಕ್ಕೆ ಏರಿಕೆ ಆಗಲಿದೆ’ ಎಂದು ಶಾ ಮಾಹಿತಿ ನೀಡಿದರು. ಈ ಮೂಲಕ, ಶೇ.50ರಷ್ಟು ಏರಿಕೆಯಾಗಲಿದೆ ಎಂಬ ಸುಳಿವು ನೀಡಿದರು.
ಇದೇ ವೇಳೆ, ‘ಕಾಂಗ್ರೆಸ್ ಸರ್ಕಾರ ತಂದ ಕ್ಷೇತ್ರ ಮರುವಿಂಗಡಣೆ ಕಾನೂನಲ್ಲಿ ಎನ್‌ಡಿಎ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ಪೂರ್ಣವಿರಾಮ, ಅಲ್ಪವಿರಾಮ ಕೂಡ ಬದಲಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.ಜೊತೆಗೆ 2029ರ ಲೋಕಸಭಾ ಚುನಾವಣೆವರೆಗೆ ನಡೆಯುವ ಎಲ್ಲಾ ಚುನಾವಣೆಗಳು ಹಾಲಿ ಇರುವ ಸ್ವರೂಪದಲ್ಲೇ ಮುಂದುವರೆಯಲಿದೆ ಎಂದು ಹೇಳಿದರು.
ರಾಜ್ಯಗಳ ಲೋಕಸಭಾ ಸ್ಥಾನ ಶೇ.50ರಷ್ಟು ಏರಿಕೆ: ಕೇಂದ್ರ
ನವದೆಹಲಿ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವೇಳೆ ಅನುಸರಿಸುವ ಮಾನದಂಡಗಳ ಕುರಿತು ಇದ್ದ ಅನುಮಾನಗಳಗೆ ತೆರೆ ಎಳೆದಿರುವ ಕೇಂದ್ರ ಸರ್ಕಾರ, ಪ್ರಸಕ್ತ ಪ್ರತಿ ರಾಜ್ಯಗಳು ಹೊಂದಿರುವ ಲೋಕಸಭಾ ಸ್ಥಾನದ ಶೇ.50ರಷ್ಟು ಸ್ಥಾನವನ್ನು ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದೆ.
ಅಲ್ಲದೆ ಲೋಕಸಭೆಯ ಒಟ್ಟು ಸ್ಥಾನವನ್ನು ಗರಿಷ್ಠ 850ಕ್ಕೆ ಹೆಚ್ಚಿಸಲಾಗುವುದು. ಇದರಲ್ಲಿ 272 ಸ್ಥಾನಗಳ ಮಹಿಳೆಯರಿಗೆ ಮೀಸಲಿರಲಿದೆ. ಮಹಿಳಾ ಮೀಸಲು ಜಾರಿಯಿಂದಾಗಿ ಯಾವುದೇ ಪುರುಷರು ಅಥವಾ ರಾಜ್ಯಗಳಿಗೆ ಅನ್ಯಾಯವಾಗದು ಎಂದು ಭರವಸೆ ನೀಡಿದೆ.
ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ಕಲ್ಪಿಸುವ ಮಸೂದೆ ಮಂಡಿಸಿ ಮಾತನಾಡಿದ ಕಾನೂನು ಖಾತೆ ಸಚಿವ ಅರ್ಜುನ್ ರಾಂ ಮೇಘ್ವಾಲ್, ‘ನಾರಿಶಕ್ತಿ ವಂದನಾ ಅಧಿನಿಯ, 2023 ಅನ್ನು ಪ್ರಸಕ್ತ ಸ್ವರೂಪದಲ್ಲೇ ಮುಂದುವರೆಸಿದರೆ, ಅದು 2029ರ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸಲು ಅವಕಾಶ ಮಾಡಿಕೊಡುವುದಿಲ್ಲ. ಕಾರಣ ಈಗಾಗಲೇ ಅಂಗೀಕಾರವಾಗಿರುವ ಮಸೂದೆಯನ್ನು 2026ರ ಜನಗಣತಿ ಆಧಾರದಲ್ಲಿ ಮಾಡಬೇಕಾಗುತ್ತದೆ. ಆದರೆ ಅದರ ಅಂಕಿ ಅಂಶಗಳು ತಕ್ಷಣಕ್ಕೆ ಲಭ್ಯವಿಲ್ಲದ ಕಾರಣ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ ತರಲಾಗಿದೆ. ಮಸೂದೆಯ ಪ್ರಮುಖ ಉದ್ದೇಶವೇ ಅವರಿಗೆ ಅವರ ಹಕ್ಕುಗಳನ್ನು ದೊರಕಿಸಿಕೊಡುವುದೇ ಆಗಿದೆ’ ಎಂದು ಹೇಳಿದರು.
ಒಳಮೀಸಲು:ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಿನಲ್ಲೇ ಎಸ್‌ಸಿ ಮತ್ತು ಎಸ್ಟಿ ಸಮುದಾಯದ ಮಹಿಳೆಯರಿಗೆ ಒಳ ಮೀಸಲು ನೀಡಲಾಗುವುದು ಎಂದು ಮೇಘ್ವಾಲ್ ತಿಳಿಸಿದ್ದಾರೆ.ಅಮೆರಿಕದಲ್ಲಿ ಪುರುಷರಿಗೆ ಮತದಾನದ ಹಕ್ಕು ಸಿಕ್ಕ 144 ವರ್ಷಗಳ ಬಳಿಕ ಮಹಿಳೆಯರಿಗೆ ಮತದಾನ ಹಕ್ಕು ನೀಡಲಾಗಿತ್ತು. ಬ್ರಿಟನ್‌ನಲ್ಲಿ ಪುರುಷರಿಗೆ 1918ರಲ್ಲಿ ಮತ್ತು ಮಹಿಳೆಯರಿಗೆ 2028ರಲ್ಲಿ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಭಾರತದಲ್ಲಿ ಮೊದಲ ಚುನಾವಣೆಯಿಂದಲೇ ಪುರುಷರ ಜೊತೆಗೆ ಮಹಿಳೆಯರಿಗೂ ಮತದಾನದ ಹಕ್ಕು ಕಲ್ಪಿಸಲಾಗಿತ್ತು ಎಂದು ಮೇಘ್ವಾಲ್ ಹೇಳಿದರು.