ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌

KannadaprabhaNewsNetwork |  
Published : Jan 12, 2026, 03:15 AM IST
ಅಜಿತ್‌ ದೋವಲ್   | Kannada Prabha

ಸಾರಾಂಶ

‘ಈಗಿನ ತಂತ್ರಜ್ಞಾನ ಯುಗದಲ್ಲಿಯೂ ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸುವುದಿಲ್ಲ’ ಎಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಹೇಳಿದ್ದಾರೆ.

ನವದೆಹಲಿ: ‘ಈಗಿನ ತಂತ್ರಜ್ಞಾನ ಯುಗದಲ್ಲಿಯೂ ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸುವುದಿಲ್ಲ’ ಎಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ವಿಕಸಿತ ಭಾರತ ಯುವನಾಯಕರ ಸಂವಾದದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದೋವಲ್‌ಗೆ ಯುವಕರೊಬ್ಬರು ಫೋನ್‌ ಬಳಕೆ ಬಗ್ಗೆ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ದೋವಲ್‌, ‘ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸುವುದಿಲ್ಲ ಎಂಬ ವಿಷಯ ನಿಮಗೆ ಹೇಗೆ ತಿಳಿಯಿತು ಎಂಬುದು ನನಗೆ ಗೊತ್ತಿಲ್ಲ. ಆದರೆ ಅದು ಸತ್ಯ. ನಾನು ಆದಷ್ಟು ಫೋನ್‌, ಇಂಟರ್ನೆಟ್‌ ಬಳಸುವುದು ಕಡಿಮೆ. ಕೆಲವೊಮ್ಮೆ ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ವಿದೇಶದಲ್ಲಿರುವವರ ಜೊತೆ ಸಂವಾದಕ್ಕೆ ಬೇಕಾಗುತ್ತದೆ. ಅದನ್ನು ಹೊರತುಪಡಿಸ ಸಂವಹನಕ್ಕೆ ನನಗೆ ಬೇರೆ ವ್ಯವಸ್ಥೆಗಳು ಇರುತ್ತವೆ. ಅದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

==

ಶೀಘ್ರ ಅಲ್‌ ಫಲಾಹ್‌ ವಿವಿ ಇ.ಡಿ.ಯಿಂದ ಜಪ್ತಿ?

ನವದೆಹಲಿ: ಇಲ್ಲಿನ ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರ ವೈದ್ಯರ ಕೇಂದ್ರ ಸ್ಥಾನವಾಗಿದ್ದ ಹರ್ಯಾಣದ ಫರೀದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ವಿಶ್ವ ವಿದ್ಯಾಲಯವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶೀಘ್ರ ಜಪ್ತಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಅಲ್‌ ಫಲಾಹ್‌ ವಿವಿ ಅಕ್ರಮವಾಗಿ ಪಡೆದ 415.10 ಕೋಟಿ ರು. ಹಣವನ್ನು ವಿವಿಧ ಕಾಲೇಜು ಮತ್ತು ಕಟ್ಟಡಗಳ ಸ್ಥಾಪನೆಗೆ ಬಳಸಿತ್ತು. ಈ ಸಂಬಂಧ ಇ.ಡಿ. ಅಧಿಕಾರಿಗಳು ಈಗಾಗಲೇ ದಾಖಲೆಗಳನ್ನು ಪರಿಶೀಲಿಸಿ ಮತ್ತು ಸ್ಥಳಗಳ ಮಾಹಿತಿಯನ್ನು ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಎಲ್ಲವನ್ನು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಆದರೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ತೊಂದರೆಯಾಗದು ಎಂದು ಮೂಲಗಳು ಹೇಳಿವೆ.

ದಿಲ್ಲಿ ಸ್ಫೋಟದ ಉಗ್ರರಾದ ಉಮರ್‌ ನಬಿ, ಮುಜಮ್ಮಿಲ್‌ ಶಕೀಲ್‌ ಗನೈ, ಆದುಕ್‌ ಅಹ್ಮದ್‌ ರಾಥರ್‌, ಮುಫ್ತಿ ಇರ್ಫಾನಿ ಸೇರಿ ಹಲವರು ಇಲ್ಲಿಯೇ ವೈದ್ಯರಾಗಿದ್ದರು.

==

ಭಾರತೀಯ ಮೂಲದ ನಳಿನಿ ಜೋಶಿಗೆ ಆಸೀಸ್‌ ವರ್ಷದ ವಿಜ್ಞಾನಿ ಗೌರವ

ಸಿಡ್ನಿ: ಭಾರತೀಯ ಮೂಲದ ಗಣಿತಜ್ಞೆ ನಳಿನಿ ಜೋಶಿ ಅವರಿಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ವರ್ಷದ ವಿಜ್ಞಾನಿ ಎಂಬ ಗೌರವ ಸಂದಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ರಾಜ್ಯದ ಅತ್ಯುನ್ನತ ವಿಜ್ಞಾನ ಗೌರವ ಪಡೆದ ಮೊದಲ ಗಣಿತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅನ್ವಯಿಕ ಗಣಿತಶಾಸ್ತ್ರದಲ್ಲಿ ಅವರ ಪ್ರವರ್ತಕ ಕೆಲಸಕ್ಕಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. ಜೋಶಿ ಅವರ ಸಂಶೋಧನೆಯು ಫೈಬರ್-ಆಪ್ಟಿಕ್ ತಂತ್ರಜ್ಞಾನ, ರೇಖಾತ್ಮಕವಲ್ಲದ ಭೌತಶಾಸ್ತ್ರ ಮತ್ತು ಉದಯೋನ್ಮುಖ ಕ್ವಾಂಟಮ್ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ರೂಪಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ನಳಿನಿ ಜೋಶಿ ಅವರು ವಿಶ್ವದ ಪ್ರಮುಖ ಅನ್ವಯಿಕ ಗಣಿತಜ್ಞರಾಗಿದ್ದು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ,

==

ಶಬರಿಮಲೆ ಚಿನ್ನ ಕೇಸು: ತಟಸ್ಥ ಸಂಸ್ಥೆ ತನಿಖೆಗೆ ಅಮಿತ್‌ ಶಾ ಆಗ್ರಹ

ಕೇರಳ ಎಸ್ಐಟಿ ತನಿಖೆ ನಿಷ್ಪಕ್ಷಪಾತವಾಗಿಲ್ಲ

ಘಟನೆ ಬಗ್ಗೆ ಅಮಿತ್‌ ಶಾ ಮೊದಲ ಮಾತು

ತಿರುವನಂತಪುರ: ಶಬರಿಮಲೆ ದ್ವಾರಪಾಲಕ ವಿಗ್ರಹ ಮತ್ತು ಗರ್ಭಗುಡಿ ಬಾಗಿಲಿನಲ್ಲಿನ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್‌ ಶಾ ಮೊದಲ ಬಾರಿಗೆ ಮಾತನಾಡಿದ್ದಾರೆ. ತನಿಖೆಯನ್ನು ಕೇರಳ ಎಸ್‌ಐಟಿ ಬದಲು ತಟಸ್ಥ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.ಭಾನುವಾರ ಅನಂತ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟು ನಂತರ ಬಿಜೆಪಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶಬರಿಮಲೆಯ ಆಸ್ತಿಯನ್ನು ರಕ್ಷಿಸಲಾಗದವರು ಭಕ್ತರ ನಂಬಿಕೆಯನ್ನು ಹೇಗೆ ರಕ್ಷಿಸುವರು’ ಎಂದು ಕೇರಳ ಎಡರಂಗ ಸರ್ಕಾರಕ್ಕೆ ಚಾಟಿ ಬೀಸಿದರು.

‘ಜನರ ನಂಬಿಕೆಗಳಿಗೆ ಗೌರವಿಸುವುದೆಂದರೆ ಅದುವೇ ಬಿಜೆಪಿ ಸರ್ಕಾರ. ಕೇರಳ ಸರ್ಕಾರದ ಎಫ್‌ಐಆರ್‌ ಓದಿದ್ದೇನೆ. ಅದರಲ್ಲಿ ತಮ್ಮವರನ್ನು ರಕ್ಷಿಸಿಕೊಳ್ಳುವ ಉದ್ದೇವಿದೆಯೇ ಹೊರತು, ಸತ್ಯ ಹೊರತರುವ ಉದ್ದೇಶವಿಲ್ಲ. ಶಬರಿಮಲೆಗೆ ನ್ಯಾಯ ಒದಗಿಸಬೇಕಾದರೆ, ತನಿಖೆಯನ್ನು ನಿಷ್ಪಕ್ಷಪಾತ ಸಂಸ್ಥೆಗೆ ಕೊಡಬೇಕು’ ಎಂದು ಸಿಎಂ ಪಿಣರಾಯಿ ವಿಜಯನ್‌ರನ್ನು ಆಗ್ರಹಿಸಿದರು.ಜೊತೆಗೆ ನ್ಯಾಯಕ್ಕಾಗಿ ಬಿಜೆಪಿಯು ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತದೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!
ಇರಾನ್‌ನಲ್ಲಿ ಶವಾಗಾರ ಭರ್ತಿ, ಶವ ಇಡಲೂ ಜಾಗವಿಲ್ಲ