ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಹೇಳಿಕೆಗೆ ಭಾರತ ಗರಂ

KannadaprabhaNewsNetwork |  
Published : Aug 12, 2025, 12:30 AM ISTUpdated : Aug 12, 2025, 05:35 AM IST
ಮುನೀರ್ | Kannada Prabha

ಸಾರಾಂಶ

ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಅವರು ಭಾರತ ಹಾಗೂ ವಿಶ್ವದ ವಿರುದ್ಧ ಪರಮಾಣು ಯುದ್ಧ ಮಾಡುವುದಾಗಿ ಹಾಕಿರುವ ಬೆದರಿಕೆಯನ್ನು ಭಾರತ ಸರ್ಕಾರ ಸೋಮವಾರ ಖಂಡಿಸಿದೆ.

  ನವದೆಹಲಿ :  ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಅವರು ಭಾರತ ಹಾಗೂ ವಿಶ್ವದ ವಿರುದ್ಧ ಪರಮಾಣು ಯುದ್ಧ ಮಾಡುವುದಾಗಿ ಹಾಕಿರುವ ಬೆದರಿಕೆಯನ್ನು ಭಾರತ ಸರ್ಕಾರ ಸೋಮವಾರ ಖಂಡಿಸಿದೆ. ‘ವಿದೇಶಿ ನೆಲದಿಂದ ಅವರು ಬೆದರಿಕೆ ಹಾಕಿರುವುದು ವಿಷಾದಕರ. ಇದು ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬೇಜವಾಬ್ದಾರಿ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಕಿಡಿಕಾರಿದೆ.

ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ‘ಪಾಕಿಸ್ತಾನದಲ್ಲಿ ಪರಮಾಣು ಮೇಲೆ ಇರುವ ನಿಯಂತ್ರಣ ಹಾಗೂ ಸುರಕ್ಷತೆ ಕುರಿತ ಅನುಮಾನಗಳನ್ನು ಮುನೀರ್ ಅವರ ಹೇಳಿಕೆಗಳು ಬಲಪಡಿಸಿವೆ. ಅಲ್ಲಿ ಸೇನೆಯು ಭಯೋತ್ಪಾದಕ ಗುಂಪುಗಳೊಂದಿಗೆ ಕೈಜೋಡಿಸಿದೆ. ಭಾರತವು ಇಂಥ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ‘ಪಾಕಿಸ್ತಾನವು ತನ್ನ ಪರಮಾಣು ಅಸ್ತ್ರಗಳನ್ನು ಝಳಪಿಸುತ್ತಿರುವುದು ವ್ಯಾಪಾರ ಉದ್ದೇಶದಿಂದ’ ಎಂದು ಅಮೆರಿಕ ನೆಲದಿಂದ ಬೆದರಿಕೆ ಹಾಕಿದ್ದನ್ನು ಭಾರತ ಟೀಕಿಸಿದೆ.

ಈ ನಡುವೆ ಭಾರತ ಸರ್ಕಾರದ ಮೂಲಗಳೂ ಪ್ರತಿಕ್ರಿಯಿಸಿ, ‘ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆಯು ಒಂದು ಮಾದರಿಯ ಭಾಗವಾಗಿದೆ. ಅಮೆರಿಕವು ಪಾಕಿಸ್ತಾನ ಸೇನೆಯನ್ನು ಬೆಂಬಲಿಸಿದಾಗಲೆಲ್ಲ ಅವರು ಯಾವಾಗಲೂ ತಮ್ಮ ನಿಜವಾದ ಬಣ್ಣವನ್ನು ತೋರಿಸುತ್ತಾರೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ ಮತ್ತು ದೇಶವನ್ನು ನಿಯಂತ್ರಿಸುವುದು ಅವರ ಸೇನೆಯೇ ಎಂಬುದರ ಲಕ್ಷಣ ಇದು’ ಎಂದು ಹೇಳಿವೆ.

ಮುಂದಿನ ಅಧ್ಯಕ್ಷ ಎಂಬ ಗುಸುಗುಸು:

‘ಅಮೆರಿಕಕ್ಕೆ ಜ। ಮುನೀರ್‌ 2 ತಿಂಗಳಲ್ಲಿ 2ನೇ ಭೇಟಿ ನೀಡಿದ್ದಾರೆ. ಅಮೆರಿಕದಲ್ಲಿ ಸಿಕ್ಕ ಸ್ವಾಗತದ ಪರಿಣಾಮ ಪಾಕಿಸ್ತಾನದಲ್ಲಿ ಮೌನ ಅಥವಾ ಬಹಿರಂಗ ದಂಗೆಯಾಗಬಹುದು. ಮುಂದೆ ಅವರು ಅಧ್ಯಕ್ಷರೂ ಆಗಬಹುದು’ ಎಂದು ಮೂಲವೊಂದು ತಿಳಿಸಿದೆ.

ಮುನೀರ್‌ ಹೇಳಿದ್ದೇನು?

ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸಿಗರನ್ನುದ್ದೇಶಿಸಿ ಮಾತನಾಡಿದ ಮುನೀರ್ ‘ನಾವು ಪರಮಾಣು ರಾಷ್ಟ್ರ, ನಾವು ಪತನಗೊಳ್ಳುವ ಸ್ಥಿತಿ ಬಂದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನೂ ನಾಶಪಡಿಸುತ್ತೇವೆ’ ಎಂದಿದ್ದರು,ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಸಿಂಧು ಒಪ್ಪಂದವನ್ನು ಸ್ಥಗಿತಗೊಳಿಸಿರುವುದನ್ನು ಕೂಡ ಉಲ್ಲೇಖಿಸಿದ್ದ ಮುನೀರ್‌, ‘ಭಾರತ ಅಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ತನಕ ಕಾಯುತ್ತೇವೆ. ಅದು ಪೂರ್ಣಗೊಳ್ಳುತ್ತಿದ್ದಂತೆ 10 ಕ್ಷಿಪಣಿ ಬಳಸಿ ಉಡಾಯಿಸುತ್ತೇವೆ’ ಎಂದಿದ್ದರು.

PREV
Read more Articles on

Recommended Stories

ಅಕ್ರಮ ಪತ್ತೆಯಾದರೆ ಬಿಹಾರ ಮತಪಟ್ಟಿಗೆ ತೆಡೆ: ಸುಪ್ರೀಂ
ಭಾರತ ವಿರುದ್ಧ ಯುದ್ಧ: ಬಿಲಾವಲ್‌ ಬೆದರಿಕೆ