ಕೃತಕ ಬುದ್ಧಿಮತ್ತೆಯನ್ನು ಭಾರತಕ್ಕೆ ತರಲು ಎನ್‌ ವಿಡಿಯಾ ಜತೆ ರಿಲಯನ್ಸ್ ಮುಕೇಶ್‌ ಅಂಬಾನಿ ಒಪ್ಪಂದ

KannadaprabhaNewsNetwork | Updated : Oct 25 2024, 04:51 AM IST

ಸಾರಾಂಶ

ಜಗತ್ತಿನಾದ್ಯಂತ ಹರಡಿಕೊಂಡಿರುವ ಕೃತಕ ಬುದ್ಧಿಮತ್ತೆಯನ್ನು ಭಾರತಕ್ಕೆ ತರಲು ಭಾರತದ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಮುಕೇಶ್‌ ಅಂಬಾನಿ ಅವರ ರಿಲಯೆನ್ಸ್‌ ಇಂಡಸ್ಟ್ರೀಸ್‌ ಕಂಪನಿ, ಎನ್ ವಿಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮುಂಬೈ: ಜಗತ್ತಿನಾದ್ಯಂತ ಹರಡಿಕೊಂಡಿರುವ ಕೃತಕ ಬುದ್ಧಿಮತ್ತೆಯನ್ನು ಭಾರತಕ್ಕೆ ತರಲು ಭಾರತದ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಮುಕೇಶ್‌ ಅಂಬಾನಿ ಅವರ ರಿಲಯೆನ್ಸ್‌ ಇಂಡಸ್ಟ್ರೀಸ್‌ ಕಂಪನಿ, ಎನ್ ವಿಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇಲ್ಲಿನ ಜಿಯೋ ವರ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಕೇಶ್‌ ಅಂಬಾನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಅತಿ ಹೆಚ್ಚು ಯುವಕರೇ ಇರುವ ಭಾರತವನ್ನು ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡಲಿದ್ದೇವೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಎನ್‌ ವಿಡಿಯಾ ಕಂಪಯೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ಬುಲ್ಡೋಜರ್‌ ಸಂತ್ರಸ್ತರು’ ನಮ್ಮ ಬಳಿ ಬರಬಹುದು: ಸುಪ್ರೀಂ ಕೋರ್ಟ್‌

ನವದೆಹಲಿ: ‘ಕೋರ್ಟ್‌ ನಿಷೇಧವಿದ್ದರೂ ಬುಲ್ಡೋಜರ್ ಬಳಸಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ ನಿರ್ದಿಷ್ಟ ಪ್ರಕರಣಗಳಲ್ಲಿ ಕಟ್ಟಡ ಕಳೆದುಕೊಂಡ ಸಂತ್ರಸ್ತರು ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.ಈ ಹಿಂದೆ ಉತ್ತರಪ್ರದೇಶದ ಬುಲ್ಡೋಜರ್‌ ಕ್ರಮಕ್ಕೆ ಸಿಡಿಮಿಡಿಗೊಂಡ ಸುಪ್ರೀಂ ಕೋರ್ಟ್‌ ಸುಖಾಸುಮ್ಮನೆ ಅಕ್ರಮ ನಿರ್ಮಾಣವೆಂದು ಕಟ್ಟಡಗಳನ್ನು ಧ್ವಂಸಗೊಳಿಸುವಂತಿಲ್ಲ ಎಂದು ಆದೇಶಿಸಿತ್ತು.

ಈ ಆದೇಶಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ, ಕೋರ್ಟ್‌ ಆದೇಶ ಮೀರಿಯೂ ಉತ್ತರಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ಥಾನದಲ್ಲಿ ಅಕ್ರಮ ನಿರ್ಮಾಣವೆಂದು ಹೇಳಿ ಅಧಿಕಾರಿಗಳು ಕಟ್ಟಡಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದ.ಆದರೆ, ‘ಅರ್ಜಿದಾರ ಕಟ್ಟಡ ಕಳೆದುಕೊಂಡ ಸಂತ್ರಸ್ತನಲ್ಲ’ ಎಂದು ಹೇಳಿ ಆತನ ಅರ್ಜಿ ವಜಾ ಮಾಡಿದ ಪೀಠ, ‘ಯಾರೆಲ್ಲಾ ಕಟ್ಟಡಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೋ ಅವರು ನೇರವಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು’ ಎಂದಿತು.

6 ರು. ಇದ್ದ ಝೊಮ್ಯಾಟೊ, ಸ್ವಿಗ್ಗಿ ಸೇವಾ ಶುಲ್ಕ 10 ರು.ಗೆ ಹೆಚ್ಚಳ

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪದಾರ್ಥಗಳನ್ನು ಆರ್ಡರ್‌ ತೆಗೆದುಕೊಂಡು ಗ್ರಾಹಕರಿಗೆ ವಿತರಣೆ ಮಾಡುವ ಝೊಮ್ಯಾಟೊ ಹಾಗೂ ಸ್ವಿಗ್ಗಿ ಕಂಪನಿಗಳು, ದೀಪಾವಳಿಗೂ ಮುನ್ನ ಆರ್ಡರ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತಮ್ಮ ಸೇವಾ ಶುಲ್ಕವನ್ನು ಏರಿಕೆ ಘೋಷಣೆ ಮಾಡಿವೆ,ಕಳದೆ ಏಪ್ರಿಲ್‌ ತಿಂಗಳಲ್ಲಿ ಇವು ತನ್ನ ಸೇವಾ ಶುಲ್ಕವನ್ನು 6 ರು.ಗೆ ಏರಿಕೆ ಮಾಡಿದ್ದವು. ಈಗ ‘ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೇವಾಶುಲ್ಕ 10 ರು.ಗೆ ಏರಿಕೆ ಮಾಡಿದ್ದೇವೆ. ಜತೆಗೆ ವಿವಿಧ ನಗರಗಳಲ್ಲೂ ಈ ಸೇವಾ ಶುಲ್ಕ ದರ ಏರಿಕೆ ಮಾಡಿದ್ದೇವೆ’ ಎಂದು ಝೊಮ್ಯಾಟೊ ಮತ್ತು ಸ್ವಿಗ್ಗಿ ಹೇಳಿವೆ. ಆದರೆ ಯಾವ ಇತರ ನಗರದಲ್ಲಿ ಎಷ್ಟು ಏರಿಕೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

ಸಾಯಿಬಾಬಾ ಮೂರ್ತಿಗೆ ವಿರೋಧ: ಸಮಾರಂಭಕ್ಕೆ ಶಂಕರಾಚಾರ್ಯ ಬಹಿಷ್ಕಾರ

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ರಾಮ ಮಂದಿರದಲ್ಲಿ ಗೋ ಧ್ವಜಾರೋಹಣದಲ್ಲಿ ಭಾಗಿಯಾಗಬೇಕಾಗಿದ್ದ ಬದರಿ ಶಂಕರಾಚಾರ್ಯ ಜ್ಯೋತಿಪೀಠಾಧೀಶ್ವರ ಅವಿಮುಕ್ತೇಶ್ವರಾನಂದ ಸ್ವಾಮೀಜಿ, ಅಲ್ಲಿ ಸಾಯಿ ಬಾಬಾ ಮೂರ್ತಿಯಿದ್ದ ಕಾರಣ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.‘ಹಿಂದೂ ದೇವಸ್ಥಾನಗಳಲ್ಲಿ ಸಾಯಿ ಬಾಬಾರಿಗೆ ಜಾಗವಿಲ್ಲ. ಕೇವಲ ಹಣ ಗಳಿಕೆಗಾಗಿ ಅರ್ಚಕರು ಹಾಗೂ ಟ್ರಸ್ಟಿಗಳು ಅವರ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದ ಸ್ವಾಮಿಗಳು, ರಾಮ ಮಂದಿರಕ್ಕೆ ತೆರಳಲು ನಿರಾಕರಿಸಿದ್ದಾರೆ. ಇತ್ತೀಚೆಗೆ ಇದೇ ರೀತಿಯ ವಿವಾದ ಕಾಶಿಯಲ್ಲೂ ಆಗಿತ್ತು.

ಅತ್ತ ದೇವಸ್ಥಾನದಲ್ಲಿದ್ದ ಸಾಯಿ ಬಾಬಾ ಮೂರ್ತಿ ತೆರವಿಗೆ ಆಗ್ರಹಿಸಿದ ಗೋ ರಕ್ಷಕ ದಳದ ರಾಜ್ಯ ಉಪಾಧ್ಯಕ್ಷ ಗೋಪುತ್ರ ರವಿ, ತೆರವಿನ ಬಳಿಕ ಸ್ವಾಮಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆಂದು ಭರವಸೆ ನೀಡಿದ್ದಾರೆ.

Share this article