ಒಡಿಶಾದ ಭುವನೇಶ್ವರದಲ್ಲಿ ಸೇನಾಧಿಕಾರಿಯ ಭಾವಿ ಪತ್ನಿಗೆ ಒಡಿಶಾ ಪೊಲೀಸರಿಂದಲೇ ಲೈಂಗಿಕ ಕಿರುಕುಳ!

KannadaprabhaNewsNetwork |  
Published : Sep 21, 2024, 01:50 AM ISTUpdated : Sep 21, 2024, 07:15 AM IST
ಒಡಿಶಾ | Kannada Prabha

ಸಾರಾಂಶ

ಭುವನೇಶ್ವರದಲ್ಲಿ ಸೇನಾಧಿಕಾರಿಯ ಭಾವಿ ಪತ್ನಿ ಮೇಲೆ ಪೊಲೀಸರು ಹಲ್ಲೆ ನಡೆಸಿ, ಠಾಣೆಯಲ್ಲೇ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಭುವನೇಶ್ವರ: ಸೇನಾಧಿಕಾರಿಯ ಭಾವಿ ಪತ್ನಿ ಮೇಲೆ ಪೊಲೀಸರು ಹಲ್ಲೆ ನಡೆಸಿ, ಠಾಣೆಯಲ್ಲೇ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಒಡಿಶಾ ಸರ್ಕಾರ ಐವರು ಪೊಲೀಸರನ್ನು ಅಮಾನತುಗೊಳಿಸಿದೆ.

ನಡೆದಿದ್ದು ಏನು?: ಕಳೆದ ಭಾನುವಾರ ತಡರಾತ್ರಿ ಸೇನಾಧಿಕಾರಿ ಮತ್ತು ಅವರ ಗೆಳತಿಗೆ ಗುಂಪೊಂದು ಕಿರುಕುಳ ನೀಡಿತ್ತು. ಈ ಹಿನ್ನೆಲೆ ಆಕೆ ದೂರು ನೀಡಲು ಭರತಪುರ ಪೊಲೀಸ್‌ ಠಾಣೆಗೆ ಹೋಗಿದ್ದ ವೇಳೆ ದೂರು ಸ್ವೀಕರಿಸದೇ ಮಹಿಳಾ ಪೇದೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ, ಸೇನಾಧಿಕಾರಿಯನ್ನು ಬಂಧಿಸಿದ್ದಾರೆ. ಒಬ್ಬ ಸೇನಾಧಿಕಾರಿಯನ್ನು ಬಂಧಿಸುವುದು ಕಾನೂನು ಬಾಹಿರ ಎಂದು ಹೇಳಿದ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಆಕೆಗೆ ತನ್ನ ಖಾಸಗಿ ಅಂಗವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಜತೆಗೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಆಕೆ ಮತ್ತು ಸೇನಾಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್‌ ಪಟ್ನಾಯಕ್‌, ಇದೊಂದು ಹೇಯ ಕೃತ್ಯ. ಸೇನಾಧಿಕಾರಿ ಹಾಗೂ ಆತನ ಭಾವಿ ಪತ್ನಿ ಮೇಲೆ ನಡೆದ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಯಲಿ. ಇದಕ್ಕಾಗಿ ಹೈಕೋರ್ಟ್‌ ಎಸ್‌ಐಟಿ ತಂಡ ರಚಿಸಲಿ ಎಂದು ಆಗ್ರಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಇಲ್ಲಿನ ರಾಜ್ಯ ಮಹಿಳಾ ಆಯೋಗ ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು