ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು ಕಳಿಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಭಾನುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು ಕಳಿಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಭಾನುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಮತ್ತೆ ಹಳೆ ಚಾಳಿಗೆ ಇಳಿದು ಬಿಟ್ಟಿದೆ. ಸರ್ಕಾರದ ಆಡಳಿತ ಲೋಪದ ಬಗ್ಗೆ ವಿರೋಧ ಪಕ್ಷದ ನಾಯಕರು ಪ್ರಶ್ನೆ ಕೇಳಿದರೆ ಅವರ ಮೇಲೆ ದಾಳಿ ಮಾಡುವುದು, ಬಡಿಯುವುದು, ಘೇರಾವ್ ಮಾಡಿಸುವುದು, ಮನೆಗೆ ಚಾಕು-ಚೂರಿ ಕಳುಹಿಸುವುದು ಅವರ ಸಂಸ್ಕೃತಿ ಎಂದು ಅವರು ಆರೋಪಿಸಿದರು.ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುವ ರಾಹುಲ್ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಅರಾಜಕತೆ ಸೃಷ್ಟಿಸುವುದರಿಂದ ಅಧಿಕಾರ ಹಿಡಿಯಬಹುದು ಎಂದುಕೊಂಡಿದ್ದಾರೆ. ಜನ ಅವರನ್ನು ತಿರಸ್ಕರಿಸುತ್ತಿರುವುದರಿಂದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿ ಮಾಡಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಧೂಳಿಪಟ ಆಗುವುದು ಸತ್ಯ. ಬಿಜೆಪಿ, ಜೆಡಿಎಸ್‌ನ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಗೂಂಡಾ ಪ್ರವೃತ್ತಿ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನ ಕಿತ್ತೊಗೆಯುತ್ತಾರೆ ಎಂದು ಜ್ಯೋತಿಗಣೇಶ್ ಹೇಳಿದರು.ಬಿಜೆಪಿಯ ಹಿರಿಯ ಮುಖಂಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾತನಾಡಿ, ವಿರೋಧ ಪಕ್ಷ ಇರುವುದೇ ಸರ್ಕಾರದ ತಪ್ಪು, ಅವ್ಯವಸ್ಥೆಯನ್ನು ಎತ್ತಿ ತೋರಿಸಲು. ಅದನ್ನು ಕೇಳುವ ಬದಲು ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡುವುದು ನಾಚಿಕೆಗೇಡಿನ ಸಂಗತಿ. ಹಿಂದಿನಿಂದಲೂ ಕಾಂಗ್ರೆಸ್ ಗೂಂಡಾ ಸಂಸ್ಕೃತಿಯನ್ನೇ ಮುಂದುವರಿಸಿಕೊಂಡು ಬಂದಿದೆ. ಹಿಂದೆ ದೇವರಾಜ ಅರಸು ಅವರ ರಾಜೀನಾಮೆ ನಂತರ ಎಚ್.ಸಿ. ಶ್ರೀಕಂಠಯ್ಯ ಅವರಿಗೆ ಶಾಸಕರ ಬೆಂಬಲ ಇದ್ದರೂ, ಗುಂಡೂರಾವ್ ಅವರು ಮುಖ್ಯಮಂತ್ರಿಯಾದ ಇತಿಹಾಸವನ್ನು ಅವರು ನೆನಪಿಸಿದರು.ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಮಾತನಾಡಿದ ಅವರು, ಮಧುಗಿರಿಯಲ್ಲಿ ಹುಡುಗನ ಕೊಲೆ ಆದರೂ, ರಾಯಚೂರಿನಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ-ಕೊಲೆ ಆದರೂ ಸ್ಥಳಕ್ಕೆ ಹೋಗಿ ನೋಡಲಿಲ್ಲ. ಗೃಹ ಖಾತೆ ಕೊಟ್ಟಿರುವುದು ಜನರ ಕಷ್ಟ-ಸುಖ ನೋಡಲು, ಶಾಂತಿ-ಸುವ್ಯವಸ್ಥೆ ಕಾಪಾಡಲು, ಮಜಾ ಮಾಡಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾನು ಪ್ರಧಾನಿ ನರೇಂದ್ರ ಮೋದಿಗಿಂತ ಕಡಿಮೆ ಇಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಟೀಕಿಸಿದ ವೈ.ಎಚ್. ಹುಚ್ಚಯ್ಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು 32 ಡಿಗ್ರಿ ಪಡೆದರೂ ತಾವು ದೊಡ್ಡವರು ಎಂದು ಎಂದೂ ಹೇಳಿಕೊಳ್ಳಲಿಲ್ಲ. ಜನ ಅಧಿಕಾರ ನೀಡಿರುವುದು ಬಡವರ ಕೆಲಸ ಮಾಡಲು. ನಿಮ್ಮ ವೈಫಲ್ಯವನ್ನು ಪ್ರಶ್ನೆ ಮಾಡಿದವರ ಮೇಲೆ ದಾಳಿ ಮಾಡಲು ಅಲ್ಲ. ಛಲವಾದಿ ನಾರಾಯಣ ಸ್ವಾಮಿ ಅವರ ಜೀವಕ್ಕೆ ಏನಾದರೂ ತೊಂದರೆಯಾದರೆ ಗೃಹ ಸಚಿವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ವೈ.ಎಚ್. ರವಿಚಂದ್ರ ಮಾತನಾಡಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಖಜಾಂಚಿ ಗಣೇಶ್‌ಪ್ರಸಾದ್, ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಂಜನಮೂರ್ತಿ, ಅಶೋಕ್, ನಗರ ಅಧ್ಯಕ್ಷ ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಮುಖಂಡರಾದ ನವಚೇತನ್, ವಸಂತ, ಹೊಳಕಲ್ಲು ಆಂಜನಪ್ಪ, ಪ್ರತಾಪ್, ನಾಗರಾಜ್, ನರಸಿಂಹಮೂರ್ತಿ, ವೆಂಕಟೇಶ್, ಸಿದ್ಧಗಂಗಯ್ಯ, ಗಂಗಾಧರ್, ಹನುಮಂತರಾಯಪ್ಪ, ಜಯಪುರ ಮಂಜುನಾಥ್, ನವೀನ್‌ಕುಮಾರ್, ಗಂಗೇಶ್, ಶಿವರಾಜ್, ಬಂಬೂ ಮೋಹನ್, ಗಿರೀಶ್, ರಾಜಶೇಖರ್, ಶ್ರೀನಾಥ್ ಮೊದಲಾದವರು ಭಾಗವಹಿಸಿದ್ದರು.