ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅತಿ ಕನಿಷ್ಠಕ್ಕೆ : ಪೆಟ್ರೋಲ್‌ ಬೆಲೆ ಇಳಿಕೆ ಸಂಭವ

KannadaprabhaNewsNetwork |  
Published : Sep 06, 2024, 01:06 AM ISTUpdated : Sep 06, 2024, 04:25 AM IST
ಪೆಟ್ರೋಲ್‌ ದರ | Kannada Prabha

ಸಾರಾಂಶ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜನವರಿ ಬಳಿಕ ಅತಿ ಕಡಿಮೆ ಮಟ್ಟಕ್ಕೆ ಕುಸಿದಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.  

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜನವರಿ ತಿಂಗಳ ಬಳಿಕ ಅತಿ ಕನಿಷ್ಠಕ್ಕೆ ತಲುಪಿದೆ. ಹೀಗಾಗಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಯುವ ಸಾಧ್ಯತೆ ಇದೆ.

ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಬುಧವಾರ 6181.19 ರು (73.6 ಡಾಲರ್‌) ಕುಸಿದಿದೆ. ಇದು 9 ತಿಂಗಳ ಕನಿಷ್ಠ. ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ದೇಶದಲ್ಲಿನ ಪೆಟ್ರೋಲ್‌ ಡೀಸೆಲ್ ಬೆಲೆಯೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಲಿಬಿಯಾ ದೇಶದ ಇಂಧನ ಉತ್ಪಾದಕರು ಮರಳಿ ಮಾರುಕಟ್ಟೆಗೆ ಬಂದಿರುವುದು, ಜೊತೆಗೆ ಒಪೆಕ್‌ ಒಕ್ಕೂಟದ ಹೊರಗಿನವರು (ರಷ್ಯಾ ಸೇರಿದಂತೆ ಇತರೆ ದೇಶಗಳು) ಹೆಚ್ಚೆಚ್ಚು ತೈಲೋತ್ಪಾದನೆಯಲ್ಲಿ ತೊಡಗಿರುವುದು- ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ.

==

ವೈದ್ಯೆ ರೇಪ್ ಮರು ದಿನವೇ ಕಾಲೇಜು ನವೀಕರಣಕ್ಕೆ ಸೂಚಿಸಿದ್ದ ಘೋಷ್‌

ಕೋಲ್ಕತಾ: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲೆ ರೇಪ್ ನಡೆದ ಮರು ದಿನವೇ, ಆಗ ಪ್ರಾಂಶುಪಾಲರಾಗಿದ್ದ ಬಂಧಿತ ಡಾ। ಸಂದೀಪ್‌ ಘೋಷ್‌ ಕಾಲೇಜಿನ ನವೀಕರಣ ಕಾಮಗಾರಿಗೆ ಅನುಮತಿಸಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದರು ಎನ್ನುವ ಸಂಗತಿ ಬಯಲಾಗಿದೆ. ಹೀಗಾಗಿ ಘಟನೆ ಬಳಿಕ ಘೋಷ್‌ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದರೇ ಎನ್ನುವ ಅನುಮಾನ ವ್ಯಕ್ತವಾಗಿದೆ.ಘಟನೆಗೂ ಮುನ್ನವೇ ಕಾಲೇಜಿನಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು. ಆದರೆ ಅತ್ಯಾಚಾರ ನಡೆದ ಮರು ದಿನ ಅಂದರೆ ಆ.10 ರಂದು ಸಂದೀಪ್ ಘೋಷ್‌, ಪಿಡಬ್ಲ್ಯೂಡಿ ಇಲಾಖೆಗೆ ಕಾಲೇಜಿನ ಕೊಠಡಿ, ಶೌಚಾಲಯ ಜೊತೆಗೆ ರೇಪ್ ನಡೆದ ಸೆಮಿನಾರ್‌ ಹಾಲ್‌ನ್ನೂ ನವೀಕರಿಸಲು ಸೂಚಿಸಿ, ಸಹಿ ಹಾಕಿ ಪತ್ರ ಬರೆದಿದ್ದರು. ಇದು ಸಿಬಿಐ ತನಿಖೆಯಿಂದ ಹೊರ ಬಿದ್ದಿದ್ದು, ಚರ್ಚೆ ಹುಟ್ಟು ಹಾಕಿದೆ.

==

ಶಿವಾಜಿ ಪ್ರತಿಮೆ ಕುಸಿತ: ತಲೆ ಮರೆಸಿಕೊಂಡಿದ್ದ ಶಿಲ್ಪಿ ಜಯದೀಪ್‌ ಬಂಧನ

ಮುಂಬೈ: ಸಿಂಧುದುರ್ಗ ಜಿಲ್ಲೆಯಲ್ಲಿ ಮರಾಠಾ ರಾಜ ಛತ್ರಪತಿ ಶಿವಾಜಿ ಪ್ರತಿಮೆ ಕುಸಿತದ ನಂತರ ತಲೆ ಮರೆಸಿಕೊಂಡಿದ್ದ ಶಿಲ್ಪಿ ಜಯದೀಪ್‌ ಆಪ್ಟೆನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಎರಡನೇ ಬಂಧನವಾಗಿದೆ.ಪ್ರತಿಮೆ ಕುಸಿತ ನಂತರ ಎರಡು ವಾರಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಜಯದೀಪ್‌ನನ್ನು ಕಲ್ಯಾಣ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಈತನನ್ನು ಪತ್ತೆ ಹಚ್ಚಲು ಪೊಲೀಸರು 7 ತಂಡಗಳನ್ನು ರಚಿಸಿದ್ದರು. ಡಿಸಿಪಿ ಸಚಿನ್ ಗುಂಜಾಲ್ ನೇತೃತ್ವದ ತಂಡ ಜಯದೀಪ್‌ನನ್ನು ಬಂಧಿಸಿದೆ. ನಂತರ ಆತನನ್ನು ಸಿಂಧುದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಪ್ರತಿಮೆಯ ವಿನ್ಯಾಸ ಸಲಹೆಗಾರ ಚೇತನ್ ಪಾಟೀಲ್‌ನನ್ನು ಪೊಲೀಸರು ಬಂಧಿಸಿದ್ದರು.

==

ಹರ್ಯಾಣ: ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಹಲವರ ರಾಜೀನಾಮೆ

ಚಂಡೀಗಢ: ಅ.5ರಂದು ನಡೆಯಲಿರುವ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.25ರಷ್ಟು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದೆ. ಹೀಗಾಗಿ ಸಚಿವ ರಂಜಿತ್ ಸಿಂಗ್ ಚೌಟಾಲಾ, ಶಾಸಕ ಲಕ್ಷ್ಮಣ್‌ ದಾಸ್‌ ನಾಪಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಟಿಕೆಟ್‌ ಸಿಗದ ಕಾರಣ ಕುಸ್ತಿ ಪಟು ಯೋಗೇಶ್ವರ ದತ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆಸಚಿವ ರಂಜಿತ್ ಸಿಂಗ್ ಚೌಟಾಲಾ ಮಾತನಾಡಿ, ‘ನನ್ನ ಬೆಂಬಲಿಗರ ಸಲಹೆಯಂತೆ ರಾನಿಯಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ’ ಎಂದು ಘೋಷಿಸಿದ್ದಾರೆ.

ಫತೇಹಾಬಾದ್‌ ಜಿಲ್ಲೆಯ ರಾತಿಯಾ ಕ್ಷೇತ್ರದ ಶಾಸಕ ಲಕ್ಷ್ಮಣ್‌ ದಾಸ್‌ ನಾಪಾ ಕೂಡ ಪಕ್ಷ ತೊರೆದಿದ್ದು, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ಗೆ ಸೇರುವ ಘೋಷಣೆ ಮಾಡಿದ್ದಾರೆ.ಇತ್ತ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಿಂದ ಮಾಜಿ ಸಚಿವ ಕರಣ್‌ ದೇವ್‌ ಕಾಂಬೋಜ್‌ ಕೆಳಗಿಳಿದಿದ್ದು, ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸಚಿವರಾದ ಸಂಜಯ್‌ ಸಿಂಗ್‌, ಸಂದೀಪ್‌ ಸಿಂಗ್‌ ಅವರಿಗೂ ಟಿಕೆಟ್‌ ಕೈತಪ್ಪಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ