ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌ ಇನ್ನು ಮತ್ತಷ್ಟು ದುಬಾರಿ

KannadaprabhaNewsNetwork |  
Published : Jul 02, 2025, 11:49 PM ISTUpdated : Jul 03, 2025, 05:22 AM IST
OLA

ಸಾರಾಂಶ

ತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ.  

ನವದೆಹಲಿತೀವ್ರ ಬೇಡಿಕೆ ಇರುವ ಅವಧಿ ಅಂದರೆ ಪೀಕ್‌ ಅವರ್‌ನಲ್ಲಿ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ ದರ ಇನ್ನು ಮುಂದೆ ದುಬಾರಿಯಾಗಲಿದೆ. ಓಲಾ, ಉಬರ್‌ ಮತ್ತು ರ್‍ಯಾಪಿಡೋದಂಥ ಕ್ಯಾಬ್‌ ಅಗ್ರಿಗೇಟರ್‌ಗಳು ಪೀಕ್‌ ಅವರ್‌ನಲ್ಲಿ ಮೂಲದರ ಅಥವಾ ಬೇಸ್‌ ದರದ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇದೀಗ ಅವಕಾಶ ನೀಡಿದೆ. 

ಸಚಿವಾಲಯ ಬಿಡುಗಡೆ ಮಾಡಿರುವ ಪರಿಷ್ಕೃತ ಮೋಟಾರ್‌ ವೆಹಿಕಲ್ಸ್‌ ಅಗ್ರಿಗೇಟ್‌ ಗೈಡ್‌ಲೈನ್ಸ್‌-2025 ನಲ್ಲಿ ಈ ಬದಲಾವಣೆ ಮಾಡಲಾಗಿದೆ. 3 ತಿಂಗಳೊಳಗೆ ಈ ಪರಿಷ್ಕೃತ ಗೈಡ್‌ಲೈನ್ಸ್‌ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. 

ಈ ಹಿಂದೆ ಪೀಕ್‌ ಅವರ್‌ನಲ್ಲಿ 1.5ರಷ್ಟು ದರ ವಿಧಿಸಲು ಅವಕಾಶ ಇತ್ತು. ಇದೀಗ ದುಪ್ಪಟ್ಟು ದರ ವಸೂಲಿಗೆ ಅವಕಾಶ ನೀಡಿರುವುದರಿಂದ ಇನ್ನು ಮುಂದೆ ಓಲಾ, ಉಬರ್‌, ರ್‍ಯಾಪಿಡೋ ಕ್ಯಾಬ್‌/ಆಟೋ ಸವಾರಿ ದುಬಾರಿಯಾಗಲಿದೆ. ಇದರ ಜತೆಗೆ, ಕಡಿಮೆ ಬೇಡಿಕೆಯ ಅವಧಿಯಲ್ಲಿ ಮೂಲದರದ ಕನಿಷ್ಠ 50ರಷ್ಟು ದರ ವಿಧಿಸಲು ಪರಿಷ್ಕೃತ ನಿಯಮದಲ್ಲಿ ಅವಕಾಶ ನೀಡಲಾಗಿದೆ.

ರೈಡ್‌ ಕ್ಯಾನ್ಸಲ್‌ ಮಾಡಿದ್ರೆ ದಂಡ:ಬುಕ್‌ ಮಾಡಿದ ಕ್ಯಾಬ್‌ ಸವಾರಿಯನ್ನು ಸಕಾರಣವಿಲ್ಲದೆ ಚಾಲಕ ರದ್ದು ಮಾಡಿದರೆ ಒಟ್ಟು ದರದ ಶೇ.10ರಷ್ಟು ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಈ ರೀತಿ ಗರಿಷ್ಠ 100 ರು. ವರೆಗೆ ದಂಡ ವಿಧಿಸಬಹುದಾಗಿದೆ. ಈ ದಂಡ ಶುಲ್ಕವನ್ನು ಚಾಲಕ ಮತ್ತು ಅಗ್ರಿಗೇಟರ್‌ ಕಂಪನಿ ಹಂಚಿಕೊಳ್ಳಬೇಕಿದೆ. ಅದೇ ರೀತಿ ಗ್ರಾಹಕ ಕೂಡ ಒಪ್ಪಿಕೊಂಡ ರೈಡ್‌ ರದ್ದು ಮಾಡಿದರೆ ಆತನ ಮೇಲೂ ಶೇ.10ರಷ್ಟು ದಂಡ ವಿಧಿಸಲು ಅವಕಾಶವಿದೆ.

ಚಾಲಕರಿಗೆ ವಿಮೆ ಕಡ್ಡಾಯ:ಇದೇ ವೇಳೆ ಕ್ಯಾಬ್‌ ಅಗ್ರಿಗೇಟರ್‌ಗಳು ತಮ್ಮ ಚಾಲಕರಿಗೆ ಕನಿಷ್ಠ 5 ಲಕ್ಷ ರು. ವರೆಗೆ ಆರೋಗ್ಯ ವಿಮೆ ಮತ್ತು 10 ಲಕ್ಷ ವರೆಗೆ ಟರ್ಮ್‌ ವಿಮೆ ಮಾಡಿಸುವುದು ಕಡ್ಡಾಯ. ಇದರಿಂದ ವಾಹನ ಚಾಲನೆ ವೇಳೆ ಅಪಘಾತಗಳು ಸಂಭವಿಸಿದರೆ ಚಾಲಕರಿಗೆ ಆರ್ಥಿಕ ನೆರವು ಸಿಗಲಿದೆ.

ರಾಜ್ಯಕ್ಕೆ ಅಧಿಕಾರ : ಕಾರು, ಆಟೋ ಮತ್ತು ಬೈಕ್‌ ಟ್ಯಾಕ್ಸಿಯಂಥ ಸೇವೆಯ ಮೂಲದರ ಅಥವಾ ಬೇಸ್‌ ದರವನ್ನು ರಾಜ್ಯ ಸರ್ಕಾರಗಳೇ ಇನ್ನು ಮುಂದೆ ನಿರ್ಧಾರ ಮಾಡಬೇಕಿದೆ. ಒಂದು ವೇಳೆ ಸರ್ಕಾರಗಳು ಮೂಲ ದರ ನಿಗದಿ ಮಾಡಿಲ್ಲದಿದ್ದರೆ ಅಗ್ರಿಗೇಟರ್‌ ಕಂಪನಿಗಳೇ ಈ ದರ ನಿಗದಿಪಡಿಸಿ ಸರ್ಕಾರಕ್ಕೆ ಮಾಹಿತಿ ನೀಡಬೇಕಿದೆ.

ಡೆಡ್‌ ಮೈಲೇಜ್‌ ಶುಲ್ಕ ಇಲ್ಲ : ಟ್ಯಾಕ್ಸಿಗಳು ಗ್ರಾಹಕರನ್ನು ಪಿಕ್‌ ಅಪ್‌ಗೆ ಮಾಡಬೇಕಿರುವ ಪ್ರಯಾಣ 3 ಕಿ.ಮೀ.ಗಿಂತ ಕಡಿಮೆ ಇರದ ಹೊರತು ಡೆಡ್‌ ಮೈಲೇಜ್‌ ಶುಲ್ಕ (ಪಿಕ್‌ ಮಾಡುವರೆಗಿನ ಪ್ರಯಾಣ) ವಿಧಿಸುವಂತಿಲ್ಲ. ಗ್ರಾಹಕರನ್ನು ಪಿಕ್‌ ಮಾಡುವ ಮತ್ತು ಅವರನ್ನು ಇಳಿಸುವ ಸ್ಥಳದ ವರೆಗಷ್ಟೇ ಪ್ರಯಾಣ ಶುಲ್ಕ ವಿಧಿಸಬೇಕು.

ತರಬೇತಿ ಕಡ್ಡಾಯ : ಚಾಲನೆ ಗುಣಮಟ್ಟ ಸುಧಾರಣೆಗೆ ಚಾಲಕರು ಪ್ರತಿವರ್ಷ ಒಂದು ಬಾರಿ ರಿಪ್ರೆಷರ್‌ ಟ್ರೈನಿಂಗ್‌ ಪಡೆಯುವುದು ಕಡ್ಡಾಯ. ಚಾಲಕನ ರೇಟಿಂಗ್‌ ಶೇ.5ಕ್ಕಿಂತ ಕಡಿಮೆ ಇದ್ದರೆ ಮೂರು ತಿಂಗಳಿಗೊಮ್ಮೆ ಇಂಥ ತರಬೇತಿ ಕಡ್ಡಾಯ. ಇಲ್ಲದಿದ್ದರೆ ಆತನ ಸೇವೆಗೆ ತಡೆ ಹಾಕಬಹುದು.

ಇತರೆ ನಿಯಮಗಳು- ಎಲ್ಲ ಟ್ಯಾಕ್ಸಿಗಳಿಗೆ ವಿಎಲ್‌ಟಿಡಿ ಟ್ರ್ಯಾಕಿಂಗ್‌ ಉಪಕರಣ ಅಳವಡಿಕೆ ಕಡ್ಡಾಯ.- ಕ್ಯಾಬ್‌ ಅಗ್ರಿಗೇಟರ್‌ಗಳು 24x7 ಕಾಲ್‌ ಸೆಂಟರ್‌ ಆರಂಭಿಸಬೇಕು. ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್‌ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಬೇಕು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ