ದರ್ಗಾದ ಆಸ್ತಿ ಎಂದು ನೋಟಿಸ್ । ದಾಖಲೆಗಳಿದ್ದರೂ ತಕರಾರು
ಸೂರು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ಕುಟುಂಬಗಳು==
ಚೆನ್ನೈ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ಅಪಸ್ವರ ಎತ್ತಿದ್ದ ತಮಿಳುನಾಡಿನಲ್ಲಿ ಇದೀಗ ಒಂದೇ ಗ್ರಾಮದ 150 ಕುಟುಂಬಗಳಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದ್ದು, ಇಡೀ ಗ್ರಾಮದ ಆಸ್ತಿ ದರ್ಗಾದ ಆಸ್ತಿ ಎಂದಿದ್ದು, ಬಾಡಿಗೆ ಕಟ್ಟಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದಿದೆ.ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಟುಕೊಳ್ಳೈ ಗ್ರಾಮದ 150 ಕುಟುಂಬಗಳಿಗೆ ಇತ್ತೀಚೆಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ಎಫ್. ಸೈಯದ್ ಸತ್ತಮ್ ಎಂಬುವವರು ನೋಟಿಸ್ ನೀಡಿದ್ದಾರೆ. ಅದರಲ್ಲಿ ಸ್ಥಳೀಯ ಇಡೀ ಗ್ರಾಮ ದರ್ಗಾಗೆ ಸೇರಿದ ಜಾಗವಾಗಿದೆ. ಇಲ್ಲಿ ನಿರ್ಮಾಣವಾಗಿರುವ ಮನೆಗಳು ಅತಿಕ್ರಮಣವಾಗಿದೆ. ಹೀಗಾಗಿ ಗ್ರಾಮಸ್ಥರು ವಕ್ಫ್ ನಿಯಮಗಳನ್ನು ಪಾಲಿಸಬೇಕು. ಜಾಗಕ್ಕೆ ಬಾಡಿಗೆ ಕಟ್ಟಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡಬೇಕು. ಇನ್ನು ಎರಡು ನೋಟಿಸ್ ನೀಡುತ್ತೇವೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಸೈಯದ್ ಆ ದರ್ಗಾವನ್ನು ನೋಡಿಕೊಳ್ಳುತ್ತಿದ್ದು ಅವರ ಪ್ರಕಾರ 1954ರಿಂದಲೂ ಆ ಜಾಗ ವಕ್ಫ್ ಮಂಡಳಿಯದ್ದಾಗಿತ್ತು. ಅಲ್ಲದೇ ಇದನ್ನು ಸಾಬೀತು ಪಡಿಸಲು ತಮ್ಮ ಬಳಿ ದಾಖಲೆ ಇರುವುದಾಗಿ ಹೇಳಿದ್ದಾರೆ. ಹಿಂದೆ ತಂದೆ ಈ ಜಾಗ ನೋಡಿಕೊಳ್ಳುತ್ತಿದ್ದರು. ಅವರಿಗೆ ಶಿಕ್ಷಣವಿಲ್ಲದ ಕಾರಣ ಬಾಡಿಗೆ ಪಡೆಯುತ್ತಿರಲಿಲ್ಲ. ಆದರೆ ಇದೀಗ ಬಾಡಿಗೆ ಸಂಗ್ರಹಕ್ಕೆ ನೋಟಿಸ್ ನೀಡುತ್ತಿರುವುದಾಗಿ ಹೇಳಿದ್ದಾರೆ.ಈ ನೋಟಿಸ್‌ನಿಂದ ಕಟ್ಟುಕೊಳ್ಳೈ ಗ್ರಾಮದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಇದೇ ಜಾಗದಲ್ಲಿ ನಾಲ್ಕು ತಲೆಮಾರುಗಳಿಂದ ಕುಟುಂಬಗಳು ವಾಸಿಸುತ್ತಿವೆ. ಈ ಭೂಮಿಯನ್ನು ನಮ್ಮದೇ ಎಂದು ಭಾವಿಸಿದ್ದೇವೆ. ಆದರೆ ಇದೀಗ ಜಾಗಕ್ಕೆ ಬಾಡಿಗೆ ಕೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ದಾಖಲೆಗಳನ್ನು ಹೊಂದಿದ್ದರೂ, ಪಂಚಾಯತ್ ತೆರಿಗೆಗಳನ್ನು ಪಾವತಿಸಿದ್ದರೂ ಸಹ ನೋಟಿಸ್ ನೀಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದರಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಕುಟುಂಬಗಳಿದ್ದು, ಅಧಿಕೃತ ಹಕ್ಕು ಪತ್ರ ನೀಡುವಂತೆ ಜಿಲ್ಲಾಧಿಕಾರಿ ಆಗ್ರಹಿಸಿದ್ದಾರೆ.
ತೆರವುಗೊಳಿಸಲ್ಲ: ಶಾಸಕಇನ್ನು ಈ ಸಂಬಂಧ ಕಾಂಗ್ರೆಸ್ ಶಾಸಕ ಹಸನ್ ಮೌಲಾನಾ ಪ್ರತಿಕ್ರಿಯಿಸಿದ್ದು, ಈ ಗ್ರಾಮದಲ್ಲಿ ವಾಸಿಸುತ್ತಿರುವ ಯಾರೊಬ್ಬರನ್ನು ತೆರವುಗೊಳಿಸುವುದಿಲ್ಲ. ವಕ್ಫ್ ಮಂಡಳಿಯು ಅಗತ್ಯ ದಾಖಲೆಗಳನ್ನು ನೀಡಿ ವಕ್ಫ್ ಆಸ್ತಿ ಎಂದು ಸಾಬೀತು ಪಡಿಸಿದರೆ ಗ್ರಾಮಸ್ಥರು ವಕ್ಫ್ ಮಂಡಳಿಗೆ ಬಾಡಿಗೆ ಕಟ್ಟಬೇಕು. ಒಮ್ಮೆ ವಕ್ಫ್ ಆಸ್ತಿ ಆದರೆ ಯಾವಾಗಲೂ ವಕ್ಫ್ ಆಸ್ತಿ ಆಗಿ ಉಳಿಯುತ್ತದೆ ಎಂದಿದ್ದಾರೆ.
==ಬಂಗಾಳ ಹಿಂಸೆಯಲ್ಲಿ ಬಾಂಗ್ಲಾ ಒಳನುಸುಳುಕೋರರ ಕೈವಾಡ
ಪ್ರಾಥಮಿಕ ತನಿಖೆ ವೇಳೆ ಬಹಿರಂಗ । ಕೇಂದ್ರಕ್ಕೆ ಮಾಹಿತಿ
ಕೋಲ್ಕತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲ ದಿನಗಳಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಾಂಗ್ಲಾದೇಶದ ನುಸುಳುಕೋರರು ಕಾರಣ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬಂಗಾಳದಲ್ಲಿನ ಹಿಂಸಾಚಾರದ ಕುರಿತು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ‘ಹಿಂಸಾಚಾರಕ್ಕೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿರುವವರ ಕೈವಾಡವಿದೆ. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿರುವ ಮುರ್ಷಿದಾಬಾದ್‌ನಲ್ಲಿ ನುಸುಳುಕೋರರಿಗೆ ಸ್ಥಳೀಯ ಟಿಎಂಸಿ ನಾಯಕರು ಬೆಂಬಲ ಕೊಟ್ಟಿದ್ದಾರೆ. ಅದರಿಂದ ಹಿಂಸೆ ಪ್ರತಿಕೂಲಕ್ಕೆ ತಿರುಗಿದೆ. ಒಳನಸುಳುವಿಕೆ ತಡೆಯುವಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೂರ್ಣ ವಿಫಲವಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿವೆ.ಏ.12ರಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಒಟ್ಟು 3 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. 210 ಉದ್ರಿಕ್ತರನ್ನು ಪೊಲೀಸರು ಬಂಧಿಸಿದ್ದಾರೆ. ದೇಶದಲ್ಲಿ ಉತ್ತರ ಪ್ರದೇಶ ಹೊರತುಪಡಿಸಿದರೆ ಅತಿ ಹೆಚ್ಚು ವಕ್ಫ್ ಆಸ್ತಿ ಇರುವ ರಾಜ್ಯ ಬಂಗಾಳ. ಯುಪಿಯಲ್ಲಿ 2.2 ಲಕ್ಷ ವಕ್ಫ್ ಆಸ್ತಿ ಇದ್ದರೆ, ಬಂಗಾಳದಲ್ಲಿ 80480 ವಕ್ಫ್ ಆಸ್ತಿಗಳಿವೆ.