ಹ್ಯಾಟ್ರಿಕ್ ಅವಧಿಗೆ ದೇಶ ಮುನ್ನಡೆಸುವ ಅವಕಾಶ
==
ನವದೆಹಲಿ: ಎನ್‌ಡಿಎ, ಇಂಡಿಯಾ ಕೂಟದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದು ಪ್ರಧಾನಿ ಮೋದಿ ಸತತ ಮೂರನೇ ಬಾರಿ ಕೇಂದ್ರದ ಗದ್ದುಗೆ ಹಿಡಿದು ಭರ್ತಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಎ ಸರ್ಕಾರ ಹಾಗೂ ಕಮಲ ಪಾಳಯ 3.0 ಸರ್ಕಾರದ ಸಾಧನೆಗಳನ್ನು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನತೆಗೆ ತಲುಪಿಸಲು ಮುಂದಾಗಿದೆ. ಜೊತೆಗೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದು 11 ವರ್ಷ ಪೂರ್ಣಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ಮಹಾ ಜನಸಂಪರ್ಕ ಅಭಿಯಾನ ಆರಂಭಕ್ಕೆ ಬಿಜೆಪಿ ಮುಂದಾಗಿದೆ. ಈ ಪ್ರಕಾರ ಬಿಜೆಪಿ ಸಂಸದರು ವಾರದಲ್ಲಿ ಎರಡು ದಿನ ತಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
2024ರ ಲೋಕಸಭೆ ಚುನಾವಣೆ ಜಿದ್ದಾಜಿದ್ದಿನ ಕಣವಾಗಿತ್ತು. ಒಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವಾದರೆ , ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದಲ್ಲಿ ಹಲವು ವಿಪಕ್ಷಗಳನ್ನೊಳಗೊಂಡು ಇಂಡಿಯಾ ಮಹಾ ಮೈತ್ರಿ ರಚನೆಯಾಗಿತ್ತು. ಈ ಬಿಗು ಪೈಪೋಟಿಯಲ್ಲಿ ಇಂಡಿಯಾ 234 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಎನ್‌ಡಿಎ ಕೂಟ 292ರಲ್ಲಿ ಗೆದ್ದು ಅಧಿಕಾರಕ್ಕೇರಿತ್ತು.