** ಪಾಕ್‌ ವಿರುದ್ಧದ ಆಪರೇಷನ್‌ ಸಿಂದೂರಕ್ಕೆ ವರ್ಷ

KannadaprabhaNewsNetwork |  
Published : May 07, 2026, 02:00 AM IST
ಸಿಂದೂರ | Kannada Prabha

ಸಾರಾಂಶ

ಏ.22ರಂದು ಪಾಕಿಸ್ತಾನದ ಲಷ್ಕರ್‌ ಸಂಘಟನೆಯ ಭಾಗವಾದ ಟಿಆರ್‌ಎಫ್‌ನ ಉಗ್ರರು ಪಹಲ್ಗಾಂನಲ್ಲಿ 26 ಅಮಾಯಕರನ್ನು ಹತ್ಯೆಗೈದದ್ದಕ್ಕೆ ಪ್ರತೀಕಾರವಾಗಿ ಭಾರತ ಮೇ 6ರ ನಡುರಾತ್ರಿ ಹಾಗೂ ಮೇ 7ರ ನಸುಕಿನಲ್ಲಿ ನಡೆಸಿದ ಆಪರೇಷನ್‌ ಸಿಂದೂರಕ್ಕೆ 1 ವರ್ಷ ಪೂರ್ಣವಾಗಿದೆ. ಇದು ಭಾರತದ ಸೇನಾ ಶಕ್ತಿಯನ್ನು ವಿಶ್ವದೆದುರು ಪ್ರದರ್ಶಿಸಿದ ಹೆಮ್ಮೆಯ ದಿನವೂ ಆಗಿದೆ.

- ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆ- ಪಾಕ್‌ ಉಗ್ರರ 9 ನೆಲೆ, ಪಾಕ್‌ನ ಕೆಲವು ವಾಯುನೆಲೆ ನಾಶ

- ಆ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಪಾಕಿಸ್ತಾನ ಏ.22ರಂದು ಪಾಕಿಸ್ತಾನದ ಲಷ್ಕರ್‌ ಸಂಘಟನೆಯ ಭಾಗವಾದ ಟಿಆರ್‌ಎಫ್‌ನ ಉಗ್ರರು ಪಹಲ್ಗಾಂನಲ್ಲಿ 26 ಅಮಾಯಕರನ್ನು ಹತ್ಯೆಗೈದದ್ದಕ್ಕೆ ಪ್ರತೀಕಾರವಾಗಿ ಭಾರತ ಮೇ 6ರ ನಡುರಾತ್ರಿ ಹಾಗೂ ಮೇ 7ರ ನಸುಕಿನಲ್ಲಿ ನಡೆಸಿದ ಆಪರೇಷನ್‌ ಸಿಂದೂರಕ್ಕೆ 1 ವರ್ಷ ಪೂರ್ಣವಾಗಿದೆ. ಇದು ಭಾರತದ ಸೇನಾ ಶಕ್ತಿಯನ್ನು ವಿಶ್ವದೆದುರು ಪ್ರದರ್ಶಿಸಿದ ಹೆಮ್ಮೆಯ ದಿನವೂ ಆಗಿದೆ.

--

ಪಾಕಿಗಳಿಂದ ಪಹಲ್ಗಾಂ ದಾಳಿಯ ಕ್ರೂರ ಕೃತ್ಯಏ.22ರ ಮಧ್ಯಾಹ್ನ ಅನಂತನಾಗ್‌ ಜಿಲ್ಲೆಯ ಬೈಸರನ್‌ ಕಣಿವೆಯಲ್ಲಿ ಪ್ರಕೃತಿಯ ಮಡಿಲಲ್ಲಿ ಪರಿವಾರದೊಂದಿಗೆ ಆನಂದಿಸುತ್ತಿದ್ದ ಪ್ರವಾಸಿಗರತ್ತ ನುಗ್ಗಿದ 7 ಉಗ್ರರು, ಗಂಡಸರನ್ನೇ ಗುರಿಯಾಗಿಸಿಕೊಂಡು ಗುಂಡಿಟ್ಟು ಕೊಂದಿದ್ದರು. ಮೃತರಲ್ಲಿ ಇಬ್ಬರು ಕನ್ನಡಿಗರಿದ್ದರು. ಇದಕ್ಕೂ ಮೊದಲು ಅವರೆಲ್ಲರ ಧರ್ಮ ಕೇಳಿ, ಬಳಿಕ ಕಲ್ಮಾ ಪಠಿಸುವಂತೆ ಹೇಳುವಂತೆಯೂ ಒತ್ತಾಯಿಸಿದ್ದರು.

ಪಾಕ್‌ ಕುಕೃತ್ಯಕ್ಕೆ ಮೊದಲು ರಾಜತಾಂತ್ರಿಕ ಸೇಡು

ಪಾಕ್‌ ಉಗ್ರರು ನಡೆಸಿದ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಮೊದಲು ಭಾರತ ರಾಜತಾಂತ್ರಿಕ ಸೇಡಿನ ಕ್ರಮ ಆರಂಭಿಸಿತ್ತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತ, ಉಭಯ ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಮುಚ್ಚುವಿಕೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದರೆ ಈ ಕ್ರಮಗಳು ಸಾಲದು ಎಂಬ ಕೂಗು ಭಾರತದಲ್ಲಿ ಎದ್ದಿತ್ತು. ಆಗ ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ್ದೇ, ಕಂಡು ಕೇಳರಿಯದಂಥ ಅಚ್ಚರಿಯ ಕಾರ್ಯಾಚರಣೆಯೇ ‘ಆಪರೇಷನ್‌ ಸಿಂದೂರ.’

ಮೇ 6ರ ರಾತ್ರಿ ಭಯಾನಕ ದಾಳಿ

ಶಸ್ತ್ರಕ್ಕೆ ಶಸ್ತ್ರದ ಮೂಲಕವೇ ಪಾಠ ಕಲಿಸಬೇಕು ಎಂದು, ಕಳೆದ ವರ್ಷ ಮೇ 6ರ ಮಧ್ಯರಾತ್ರಿ ತನ್ನ ಬತ್ತಳಿಕೆಯಲ್ಲಿದ್ದ ಬಲಿಷ್ಠ ಆಯುಧಗಳನ್ನು ಭಾರತೀಯ ವಾಯುಪಡೆ ಪಾಕಿಸ್ತಾನದತ್ತ ತಿರುಗಿಸಿತು. ಕೇವಲ 25 ನಿಮಿಷದ ಕಾರ್ಯಾಚರಣೆಯಲ್ಲಿ ಮುರೀದ್‌ಕೆ, ಬಹಾವಲ್ಪುರ, ಸಿಯಾಲ್‌ಕೋಟ್‌, ಮುಜಫ್ಫರಾಬಾದ್‌, ಕೋಟ್ಲಿ, ಕೋಟ್ಲಿಯಲ್ಲಿದ್ದ ಪಾಕ್‌ ಉಗ್ರರ 9 ನೆಲೆಗಳನ್ನು ಧ್ವಂಸ ಮಾಡಿತು. ಈ ದಾಳಿಗೆ ಪಾಕಿಸ್ತಾನ ಬೆಚ್ಚಿಬಿತ್ತು.

ಪ್ರತಿದಾಳಿಗೂ ತಕ್ಕ ಉತ್ತರ

ಮೇ 6ರ ನಂತರ ಪಾಕಿಸ್ತಾನ ಭಾರತಕ್ಕೆ ತಿರುಗೇಟು ನೀಡಲು ವಿಫಲ ಯತ್ನ ಆರಂಭಿಸಿತ್ತು. ಆದರೆ ಪಾಕ್‌ ಬಿಟ್ಟ ಡ್ರೋನ್‌ಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತ್ತು. ಭಾರತದ ಸುದರ್ಶನ ಚಕ್ರದಂತಹ (ಎಸ್‌- 400) ದೈತ್ಯ ಕ್ಷಿಪಣಿ ನಿರೋಧಕಗಳೆದುರು ಅದರ ಆಟ ನಡೆದಿರಲಿಲ್ಲ. ಇದರ ನಡುವೆ ಭಾರತ ಮತ್ತಷ್ಟು ದಾಳಿ ತೀಕ್ಷ್ಣಗೊಳಿಸಿ 7ರಿಂದ 4 ದಿನಗಳ ಕಾಲ ಪಾಕ್‌ ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಆ ಕಾರ್ಯಾಚರಣೆಯಲ್ಲಿ ಕೆಲವು ಪಾಕ್‌ ವಾಯುನೆಲೆ ಕೂಡ ಧ್ವಂಸವಾಗಿದ್ದವು. ಬಳಿಕ ಪಾಕಿಸ್ತಾನದ ಡಿಜಿಎಂಒ ಕೋರಿಕೆ ಮೇರೆಗೆ ಮೇ 10ಕ್ಕೆ ಕದನವಿರಾಮ ಸಾರಲಾಗಿತ್ತು.

ಉಗ್ರ ಮಸೂದ್‌ ಪರಿವಾರ ಪುಡಿ:

ಬಹಾವಲ್ಪುರದ ಮೇಲೆ ನಡೆದ ದಾಳಿಯಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಮಸೂದ್‌ ಅಜರ್‌ನ ಪರಿವಾರ ಛಿದ್ರವಾಗಿತ್ತು. ಪುಲ್ವಾಮಾ ಮತ್ತು ಉರಿ ದಾಳಿಯ ಹಿಂದಿದ್ದ ಅಜರ್‌ ಸಹೋದರ ಯೂಸುಫ್‌ ಸೇರಿದಂತೆ 10 ಜನ ಮೃತಪಟ್ಟಿದ್ದರು.

--

ರಾಜತಾಂತ್ರಿಕ ರಣತಂತ್ರ

ಪಾಕಿಸ್ತಾನದ ಉಗ್ರ ಮುಖವನ್ನು ಜಗತ್ತಿಗೇ ಸಾರಬೇಕು ಎಂದು ಭಾರತ ವಿಶ್ವದ ಅನೇಕ ದೇಶಗಳಿಗೆ ತನ್ನ ತಂಡಗಳನ್ನು ಕಳಿಸಿ ವಿವರಣೆ ನೀಡಿತ್ತು. ಇದು ಭಾರತಕ್ಕೆ ಉಗ್ರವಾದದ ವಿರುದ್ಧದ ಹೋರಾಟಕ್ಕೆ ನೈತಿಕ ಬಲ ನೀಡಿತು. ಪಾಕಿಸ್ತಾನವನ್ನು ಏಕಾಂಗಿ ಮಾಡಿತು.

--

ಇನ್ನೂ ಚೇತರಿಸಿಕೊಳ್ಳದ ಪಾಕ್‌ಅಂದು ಭಾರತ ನೀಡಿದ್ದ ಏಟಿಗೆ ಇನ್ನೂ ಮುಲಾಮು ಸವರಿಕೊಳ್ಳುತ್ತಿರುವ ಪಕಿಸ್ತಾನ, ಕೆಲ ವಾಯುನೆಲೆಗಳ ಆಸೆಯನ್ನೇ ಕೈಬಿಟ್ಟಿದೆ. ಆದಾಗ್ಯೂ ಕೆಲವು ಉಗ್ರ ನೆಲೆಗಳ ಮರುನಿರ್ಮಾಣದಲ್ಲಿ ತೊಡಗಿದೆ ಎಂಬ ಸುದ್ದಿಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಟಿವಿಕೆಗೆ ಬೆಂಬಲ: ಕಾಂಗ್ರೆಸ್ ಘೋಷಣೆ
ಪಂಜಾಬ್‌: ಸೇನಾ ಕಚೇರಿಗಳ ಬಳಿ ಒಂದೇ ರಾತ್ರಿ 2 ಸ್ಫೋಟ