ಆಪರೇಷನ್‌ ಸಿಂದೂರವನ್ನು ಯಾರದ್ದೋಒತ್ತಡದಿಂದ ನಿಲ್ಲಿಸಿಲ್ಲ: ರಾಜನಾಥ್‌ ಸಿಂಗ್‌

KannadaprabhaNewsNetwork |  
Published : Jul 29, 2025, 01:01 AM ISTUpdated : Jul 29, 2025, 01:49 AM IST
ಸಿಂಗ್  | Kannada Prabha

ಸಾರಾಂಶ

ನಮ್ಮ ಉದ್ದೇಶಿತ ರಾಜಕೀಯ-ಮಿಲಿಟರಿ ಗುರಿ ಈಡೇರಿದ ಬಳಿಕ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಆರಂಭಿಸಿದ್ದ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತೇ ಹೊರತು ಯಾವುದೇ ಒತ್ತಡದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

  ನವದೆಹಲಿ :  ನಮ್ಮ ಉದ್ದೇಶಿತ ರಾಜಕೀಯ-ಮಿಲಿಟರಿ ಗುರಿ ಈಡೇರಿದ ಬಳಿಕ ಪಹಲ್ಗಾಂ ದಾಳಿಗೆ ಪ್ರತಿಯಾಗಿ ಆರಂಭಿಸಿದ್ದ ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತೇ ಹೊರತು ಯಾವುದೇ ಒತ್ತಡದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಒಂದು ವೇಳೆ ಪಾಕ್‌ ಮತ್ತೆ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಈ ಕಾರ್ಯಾಚರಣೆ ಪುನಾರಂಭವಾಗಲಿದೆ ಎಂದೂ ಹೇಳಿದ್ದಾರೆ.

ಈ ಮೂಲಕ ಅಮೆರಿಕದ ಒತ್ತಡದಿಂದಾಗಿ ಕದನ ವಿರಾಮ ಘೋಷಿಸಲಾಯಿತು ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಆಪರೇಷನ್‌ ಸಿಂದೂರ ವಿಚಾರವಾಗಿ ನಡೆದ ಚರ್ಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳ ಮೇಲಿನ ಮಿಲಿಟರಿ ದಾಳಿ ಪರಿಣಾಮಕಾರಿಯಾಗಿತ್ತು ಮತ್ತು ಸಮನ್ವಯದಿಂದ ಕೂಡಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಪರೇಷನ್‌ ಸಿಂದೂರದಲ್ಲಿ 9 ಉಗ್ರ ನೆಲೆಗಳು ಸಂಪೂರ್ಣವಾಗಿ ನಾಶವಾದವು ಮತ್ತು ಪಾಕ್‌ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಮ್ಮ ದಾಳಿಯಿಂದಾದ ಹಾನಿಗಳ ಕುರಿತು ಸೂಕ್ತ ಸಾಕ್ಷ್ಯವೂ ಇದೆ’ ಎಂದು ಸಿಂಗ್‌ ತಿಳಿಸಿದರು.

‘ಇಡೀ ಕಾರ್ಯಾಚರಣೆ 22 ನಿಮಿಷಕ್ಕೂ ಹೆಚ್ಚುಕಾಲದ್ದಾಗಿತ್ತು ಮತ್ತು ಈ ಕಾರ್ಯಾಚರಣೆ ಮೂಲಕ ಪಹಲ್ಗಾಂ ದಾಳಿಗೆ ಸೂಕ್ತ ಪ್ರತೀಕಾರ ತೀರಿಸಲಾಯಿತು. ಕಾರ್ಯಾಚರಣೆ ಕಾರ್ಯಗತಗೊಳಿಸುವ ಮುನ್ನ ನಮ್ಮ ಸೇನಾಪಡೆಗಳು ಅಮಾಯಕ ನಾಗರಿಕರಿಗೆ ಯಾವುದೇ ತೊಂದರೆಯಾಗದೆ, ಕೇವಲ ಉಗ್ರರಿಗಷ್ಟೇ ಗರಿಷ್ಠ ಹಾನಿಯಾಗುವ ರೀತಿಯಲ್ಲಿ ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದವು‘ ಎಂದರು.

‘ಈ ಕಾರ್ಯಾಚರಣೆಯನ್ನು ಯಾರದ್ದೋ ಒತ್ತಡದಿಂದ ಸ್ಥಗಿತಗೊಳಿಸಲಾಯಿತು ಎಂಬುದು ಆಧಾರರಹಿತ. ಪಾಕ್‌ ಮಿಲಿಟಿರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಸೇನೆ ಕಾರ್ಯಾಚರಣೆ ನಿಲ್ಲಿಸಿತು’ ಎಂದರು. ಈ ಮೂಲಕ ಭಾರತ-ಪಾಕ್‌ ಕದನ ವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಯನ್ನು ಪರೋಕ್ಷವಾಗಿ ತಳ್ಳಿಹಾಕಿದರು.

ನಮ್ಮ ಆಸ್ತಿಗೆ ಹಾನಿಯಾಗಿಲ್ಲ:

‘ಈ ಕಾರ್ಯಾಚರಣೆ ವೇಳೆ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ, ಪಾಕಿಸ್ತಾನಕ್ಕೆ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ ಎಂದ ಅವರು, ಆಪರೇಷನ್‌ ಸಿಂದೂರ ಎಂಬುದು ನಮ್ಮ ಸಾಮರ್ಥ್ಯದ ಸಂಕೇತ. ನಮ್ಮ ನಾಗರಿಕರಿಗೆ ಯಾರೇ ಹಾನಿ ಮಾಡಿದರೂ ನಾವು ಸುಮ್ಮನಿರಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿತು’ ಎಂದು ಹೇಳಿದರು.- 

ಪಾಕಿಸ್ತಾನದ ಎಷ್ಟು ವಿಮಾನ ನಾಶ ಮಾಡಲಾಗಿದೆ ಎಂದು ನೀವು ಕೇಳಿಲ್ಲ!

ಆಪರೇಷನ್‌ ಸಿಂದೂರ ಕಾರ್ಯಾಚರಣೆ ಚರ್ಚೆ ವೇಳೆ ಭಾರತದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂಬ ಪ್ರತಿಪಕ್ಷಗಳ ಕೆಲ ಸಂಸದರ ಪ್ರಶ್ನೆಗೆ ರಾಜನಾಥ್‌ ಸಿಂಗ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೆಲ ಸಂಸದರು ಭಾರತದ ಎಷ್ಟು ವಿಮಾನಗಳು ನಷ್ಟವಾಗಿವೆ ಎಂದು ಕೇಳುತ್ತಿದ್ದಾರೆ. ಆದರೆ ಅವರ ಈ ಪ್ರಶ್ನೆಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿನಿಧಿಸುಂತೆ ಕಾಣುತ್ತಿಲ್ಲ. ಅದರ ಬದಲು ಅವರು, ನಮ್ಮ ಸೇನಾಪಡೆಗಳು ವೈರಿದೇಶದ ಎಷ್ಟು ವಿಮಾನಗಳನ್ನು ಹೊಡೆದುರುಳಿಸಿವೆ ಎಂದು ಕೇಳಬೇಕಿತ್ತು’ ಎಂದರು.

‘ಭಾರತವು ಭಯೋತ್ಪಾದಕರ ಶಿಬಿರ ನಾಶಪಡಿಸಿದೆಯೇ ಎಂದು ಸಂಸದರು ಕೇಳಿದ್ದರೆ, ನನ್ನ ಉತ್ತರ ಹೌದು ಎಂದಾಗಿರುತ್ತಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ವೀರಯೋಧರು ಸಾವಿಗೀಡಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರೆ, ಅದಕ್ಕೆ ನನ್ನ ಉತ್ತರ ‘ಇಲ್ಲ’ ಎಂಬುದಾಗಿದೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ