ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ತವರಿಗೆ ಕರೆತರುವ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಅಡಿ 200 ಭಾರತೀಯರ ಮೊದಲ ಬ್ಯಾಚ್ ಶುಕ್ರವಾರ ಯಶಸ್ವಿಯಾಗಿ ಸ್ವದೇಶಕ್ಕೆ ಮರಳಿದೆ. ಶನಿವಾರ 2ನೇ ಬ್ಯಾಚ್ ಬರುವ ನಿರೀಕ್ಷೆಯಿದೆ. ವಿಶೇಷ ಏರ್ ಇಂಡಿಯಾ ಚಾರ್ಡ್ ವಿಮಾನದಲ್ಲಿ ದೆಹಲಿಗೆ ಬಂದಿಳಿದ ಭಾರತೀಯರನ್ನು ಸ್ವಾಗತಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಅನೇಕರಿಗೆ ಕೈ ಮುಗಿದು ಹಸ್ತಲಾಘವ ಮಾಡಿ, ‘ನಿಮ್ಮ ಮನೆಗೆ ಸ್ವಾಗತ’ ಎಂದು ಶುಭಾಶಯ ಕೋರಿದರು. ಇಸ್ರೇಲ್‌ನಲ್ಲಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸೇರಿದಂತೆ 200 ಜನರು ಮೊದಲ ಬ್ಯಾಚ್‌ನಲ್ಲಿ ಮರಳಿದ್ದು ಬಳಿಕ ಅವರೆಲ್ಲ ತಮ್ಮ ತಮ್ಮ ಊರುಗಳಿಗೆ ತೆರಳಿದರು. ಮೋದಿಗೆ ಧನ್ಯವಾದ: ಇನ್ನು ಮೊದಲ ಬ್ಯಾಚ್‌ನಲ್ಲಿ ಬಂದ ಜನರು ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಮಾತನನಾಡಿದ ಹಲವರು ‘ಅಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ. ಒಂದೆಡೆ ನಾವು ಸುರಕ್ಷಿತವಾಗಿ ತವರಿಗೆ ಮರಳಿದ್ದೇವೆ ಎಂಬ ಸಂತೋಷವಾದರೆ, ಇನ್ನೊಂದೆಡೆ ನಮ್ಮ ಹಲವು ಸ್ನೇಹಿತರು ಅಲ್ಲಿಯೇ ಇದ್ದಾರೆ ಎಂದು ನೋವಾಗುತ್ತಿದೆ. ಅಲ್ಲಿ ಪದೇ ಪದೇ ದಾಳಿ, ಸ್ಫೋಟಕಗಳ ಸದ್ದು ಕೇಳುತ್ತಲೇ ಇತ್ತು. ಇಸ್ರೇಲ್ ಸರ್ಕಾರ ಹಲವು ಆಶ್ರಯ ತಾಣಗಳನ್ನು ಮಾಡಿತ್ತು. ಹೀಗಾಗಿ ನಾವು ಸುರಕ್ಷಿತವಾಗಿದ್ದೆವು. ನಮ್ಮ ಸರ್ಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ’ ಎಂದಿದ್ದಾರೆ. ಸದ್ಯ ಇಸ್ರೇಲ್‌ನಲ್ಲಿ 18,000 ಭಾರತೀಯರಿದ್ದಾರೆ. ಇನ್ನು 4 ಜನರು ಭಾರೀ ಸಂಘರ್ಷದ ತಾಣವಾಗಿರುವ ಗಾಜಾದಲ್ಲಿ ಹಾಗೂ 12 ಜನ ವೆಸ್ಟ್‌ಬ್ಯಾಂಕ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.