ಮುಂಬೈ : ಉದ್ಧವ್ ಠಾಕ್ರೆ ಬಣದ ಶಿವಸೇನೆಯಿಂದ ಬಂಡಾಯವೆದ್ದಿದ್ದ 6 ಸಂಸದರು ಸೋಮವಾರ ಅಧಿಕೃತವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ 2022ರಲ್ಲಿ ಏಕನಾಥ್ ಶಿಂಧೆ ಬಂಡಾಯದಿಂದ ಹೋಳಾಗಿದ್ದ ಠಾಕ್ರೆ ಪಕ್ಷ 2ನೇ ಬಾರಿ ವಿಭಜನೆ ಆದಂತಾಗಿದೆ. ಪರಿಣಾಮ ಅದರ ಬಳಿಕ ಇದೀಗ ಕೇವಲ 3 ಸಂಸದರು ಉಳಿದುಕೊಂಡಿದ್ದಾರೆ.
ಸೋಮವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅತೃಪ್ತ ಸಂಸದರಾದ ಸಂಜಯ್ ದೇಶಮುಖ್, ಸಂಜಯ್ ಜಾಧವ್, ಸಂಜಯ್ ದೀನ ಪಾಟೀಲ್, ನಾಗೇಶ್ ಅಷ್ಟಿಕರ್ ಹಾಗೂ ಓಂಪ್ರಕಾಶ್ ರಾಜೇನಿಂಬಾಳ್ಕರ್ ಶಿವಸೇನೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಆಪರೇಷನ್ ಟೈಗರ್ ಯಶಸ್ವಿಯಾಗಿದೆ. ಈ ಸಂಸದರು ದಿ. ಬಾಳಾಸಾಹೇಬ್ ಠಾಕ್ರೆ ಅವರ ಬೋಧನೆ ಅನುಸರಿಸುವ ಮೂಲ ಶಿವಸೇನೆಗೆ ಸೇರಿದ್ದಾರೆ. ಠಾಕ್ರೆಯವರ ತತ್ವಗಳನ್ನು ಮತ್ತು ಶಿವಸೇನೆಯನ್ನು ಉಳಿಸಲು ನಾನು ಇದನ್ನು ಮೊದಲೇ ಮಾಡಿದ್ದೆ. ಈಗ, ಸಿಕ್ಸರ್ ಹೊಡೆದಿದ್ದೇನೆ. ಈ ನಡೆ ಶಿವಸೇನೆ ವಿಸ್ತರಣೆಯ 2ನೇ ಹಂತವಾಗಿದೆ. ನಾವೆಲ್ಲ 2029ರ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯ ಮೂಲಕ ಗೆಲುವು ಸಾಧಿಸಲಿದ್ದೇವೆ’ ಎಂದು ಘೋಷಿಸಿದರು.
ಇತ್ತೀಚೆಗೆ ಟಿಎಂಸಿಯ 20 ಸಂಸದರು ಬಂಡಾಯ ಎದ್ದು ಎನ್‌ಡಿಎ ಬೆಂಬಲಿಸಿದ್ದಾರೆ. ಈಗ ಶಿವಸೇನೆಯ (ಯುಬಿಟಿ) 6 ಸಂಸದರೂ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಲೋಕಸಭೆಯಲ್ಲಿ ಎನ್‌ಡಿಎ ಬಲ 298ರಿಂದ 324ಕ್ಕೆ ಏರಿದೆ. 543 ಸದಸ್ಯಬಲದ ಸದನದಲ್ಲಿ 2/3ರಷ್ಟು ಬಹುಮತಕ್ಕೆ 362 ಸೀಟು ಬೇಕು. ಹೀಗಾಗಿ ಇನ್ನೂ 38 ಸದಸ್ಯರ ಕೊರತೆ ಬೀಳಲಿದೆ. 2/3ರಷ್ಟು ಬಹುಮತವು ಮಹಿಳಾ ಮೀಸಲು ಸೇರಿದಂತೆ ಸಾಂವಿಧಾನಿಕ ಮಸೂದೆಗಳ ಅಂಗೀಕಾರಕ್ಕೆ ಅಗತ್ಯ.