ಒಡಿಶಾದಲ್ಲಿ ಬ್ರಿಟನ್‌ ರೀತಿ ‘ವಿಪಕ್ಷದ ಸಚಿವ ಸಂಪುಟ’! ಕಣ್ಣಿಡಲು ‘ವಿಪಕ್ಷ ಸಚಿವರ’ ನೇಮಿಸಿದ ಪಟ್ನಾಯಕ್‌

ಸಾರಾಂಶ

ಒಡಿಶಾದಲ್ಲಿ ಸತತ 24 ವರ್ಷ ಅಧಿಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷವು ಆಡಳಿತಾರೂಢ ಬಿಜೆಪಿ ಸಚಿವರ ಮೇಲೆ ಕಣ್ಣಿಡಲು ‘ವಿಪಕ್ಷದ ಸಚಿವ ಸಂಪುಟ’ವನ್ನು ನೇಮಿಸಿದೆ.

ಭುವನೇಶ್ವರ: ಒಡಿಶಾದಲ್ಲಿ ಸತತ 24 ವರ್ಷ ಅಧಿಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷವು ಆಡಳಿತಾರೂಢ ಬಿಜೆಪಿ ಸಚಿವರ ಮೇಲೆ ಕಣ್ಣಿಡಲು ‘ವಿಪಕ್ಷದ ಸಚಿವ ಸಂಪುಟ’ವನ್ನು ನೇಮಿಸಿದೆ.

ಇದು ಬ್ರಿಟನ್ನಿನಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ತಿದ್ದಲು ಆಂತರಿಕವಾಗಿ ನೇಮಿಸಿಕೊಳ್ಳುವ ‘ಶಾಡೋ ಕ್ಯಾಬಿನೆಟ್‌’ ಮಾದರಿಯಲ್ಲಿದೆ. ಒಡಿಶಾಕ್ಕೆ ಮರಳಿ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ನವೀನ್‌ ಪಟ್ನಾಯಕ್‌ ಬ್ರಿಟನ್ನಿನಲ್ಲಿದ್ದರು. ಆಗ ಗಮನಿಸಿದ ಅಲ್ಲಿನ ವಿಪಕ್ಷಗಳ ಕಾರ್ಯವೈಖರಿಯನ್ನೇ ಅವರು ಒಡಿಶಾದಲ್ಲೂ ಅನುಸರಿಸಲು ಮುಂದಾಗಿದ್ದಾರೆ.

ಒಡಿಶಾದ ‘ಶಾಡೋ ಕ್ಯಾಬಿನೆಟ್‌’ನಲ್ಲಿ ಆಡಳಿತಾರೂಢ ಪಕ್ಷದ ಸಚಿವರಿಗೆ ಪ್ರತಿಯಾಗಿ ವಿಪಕ್ಷದಲ್ಲೂ ಒಬ್ಬೊಬ್ಬ ಮಾಜಿ ಸಚಿವರನ್ನು ನೇಮಿಸಲಾಗುತ್ತದೆ. ಇದು ಪಕ್ಷದ ಆಂತರಿಕ ವ್ಯವಸ್ಥೆಯಾಗಿರುತ್ತದೆ. ಇದಕ್ಕೆ ಸರ್ಕಾರದ ಮಾನ್ಯತೆ ಇರುವುದಿಲ್ಲ. ಆದರೂ ಈ ‘ವಿಪಕ್ಷ ಸಚಿವರು’ ಆಡಳಿತಾರೂಢ ಪಕ್ಷದ ಪ್ರತಿ ಸಚಿವರ ಕಾರ್ಯವೈಖರಿಯನ್ನೂ ಸಮೀಪದಿಂದ ಗಮನಿಸಿ, ಅವರು ವಿಫಲಗೊಂಡ ವಿಷಯಗಳಲ್ಲಿ ತಮ್ಮದೇ ಆದ ಪರಿಹಾರವನ್ನು ರೂಪಿಸಿ ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲೂ ಈ ‘ವಿಪಕ್ಷ ಸಚಿವರು’ ತಮಗೆ ಒಪ್ಪಿಸಿದ ಇಲಾಖೆಯ ವೈಫಲ್ಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

147 ಸದಸ್ಯಬಲದ ಒಡಿಶಾ ವಿಧಾನಸಭೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಬಿಜೆಪಿ 78 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ಬಿಜೆಡಿ 51 ಸ್ಥಾನಗಳನ್ನು ಗೆದ್ದಿದೆ. ಮಾಜಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೇ ವಿಪಕ್ಷದ ನಾಯಕರಾಗಿದ್ದಾರೆ.

Share this article