ಬಿಲ್ಕಿಸ್‌ ಕೇಸು: ಬಿಜೆಪಿ ವಿರುದ್ಧ ವಿಪಕ್ಷ ವಾಗ್ದಾಳಿ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಬಿಜೆಪಿ ಕ್ರಿಮಿನಲ್‌ಗಳ ರಕ್ಷಕ ಎಂದು ಸುಪ್ರೀಂ ಕೋರ್ಟ್‌ ಸಾಬೀತು ಮಾಡಿದೆ ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಬಿಜೆಪಿ ಸರ್ಕಾರ ಕ್ಷಮೆಯಾಚಿಸುವಂತೆ ಒವೈಸಿ ಆಗ್ರಹ ಮಾಡಿದ್ದಾರೆ. ಈ ತೀರ್ಪು ಎಲ್ಲ ಅತ್ಯಾಚಾರಿಗಳಿಗೆ ಮುನ್ನುಡಿ ಎಂದು ಗುಜರಾತ್‌ ಮಾನವ ಹಕ್ಕುಗಳ ವಕೀಲ ಯಾಗ್ನಿಕ್‌ ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಅತ್ಯಾಚಾರಿಗಳಿಗೆ ಹೂಮಾಲೆ ಹಾಕಿದವರಿಗೆ ತೀರ್ಪಿನಿಂದ ಕಪಾಳಮೋಕ್ಷವಾದ ಅನುಭವವಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ. ಅಲ್ಲದೆ ಪ್ರಧಾನಿಯ ನಾರಿ ಶಕ್ತಿ ಸಬಲೀಕರಣ ಕಾರ್ಯಕ್ರಮ ಕೇವಲ ಬೂಟಾಟಿಕೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ‘ಬಿಲ್ಕಿಸ್‌ ಬಾನೊ ಪ್ರಕರಣದ ಅತ್ಯಾಚಾರಿಗಳ ಬಿಡುಗಡೆಗೆ ಗುಜರಾತ್‌ ಸರ್ಕಾರ ನೀಡಿದ್ದ ಅನುಮತಿ ಅಕ್ರಮ’ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಕಾಂಗ್ರೆಸ್‌ ಪಕ್ಷವೂ ಸೇರಿದಂತೆ ಹಲವು ಪ್ರತಿಪಕ್ಷದ ನಾಯಕರು ಸ್ವಾಗತಿಸಿದ್ದಾರೆ. ಸೋಮವಾರ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಬಿಜೆಪಿಯು ಕ್ರಿಮಿನಲ್‌ಗಳ ರಕ್ಷಕ ಎಂಬುದಾಗಿ ದೇಶದ ಅತ್ಯುನ್ನತ ನ್ಯಾಯದೇಗುಲವೇ ತೀರ್ಪು ನೀಡಿದೆ. ಈ ರೀತಿ ಅತ್ಯಾಚಾರಿಗಳಿಗೆ ರಕ್ಷಣೆ ನೀಡುವ ಬಿಜೆಪಿ ಸರ್ಕಾರ ಮಹಿಳೆಯರನ್ನು ಉದ್ಧರಿಸುವುದಾಗಿ ಕೇವಲ ಬಾಯಿಮಾತಿನಲ್ಲಿ ಹೇಳುತ್ತಿದೆ ಎಂಬುದು ಸ್ಫಟಿಕದಷ್ಟು ಸತ್ಯ’ ಎಂದು ಕಿಡಿಕಾರಿದ್ದಾರೆ.ಅಲ್ಲದೆ ಈ ಕುರಿತು ಕಾಂಗ್ರೆಸ್‌ನ ಇತರ ನಾಯಕರೂ ಪ್ರತಿಕ್ರಿಯಿಸಿದ್ದು, ಅತ್ಯಾಚಾರಿಗಳಿಗೆ ಹೂಮಾಲೆ ಹಾಕಿದವರಿಗೆ ಸುಪ್ರೀಂ ಕೋರ್ಟ್‌ ತೀರ್ಪು ಕಪಾಳಮೋಕ್ಷವಾದಂತಾಗಿದೆ ಎಂದು ಕಾಂಗ್ರೆಸ್‌ ಮಾಧ್ಯಮ ಕಾರ್ಯದರ್ಶಿ ಪವನ್‌ ಖೇರಾ ಟೀಕಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಮಾತನಾಡಿ, ‘ಪ್ರಧಾನಿ ಮೋದಿ ಒಂದು ಕಡೆ ನಾರಿ ಶಕ್ತಿಯ ಹೆಸರಿನಲ್ಲಿ ನಾರಿ ಶಕ್ತಿಯ ಮಂತ್ರ ಜಪಿಸಿ ಅವರನ್ನು ಉದ್ಧರಿಸಿ ಮತ್ತೊಂದು ಕಡೆಯಿಂದ ಅವರ ಮೇಲೆ ಅತ್ಯಾಚಾರ ಮಾಡಿದವರಿಗೆ ರಕ್ಷಣೆ ಕೊಡುವ ಮೂಲಕ ಬೂಟಾಟಿಕೆ ನಡೆಸುತ್ತಿದ್ದಾರೆ’ ಎಂದು ತಿವಿದಿದ್ದಾರೆ.

ಈ ನಡುವೆ ಎಂಐಎಂ ಪಕ್ಷದ ಸ್ಥಾಪಕ ಅಸಾದುದ್ದೀನ್‌ ಒವೈಸಿ, ಅತ್ಯಾಚಾರಿಗಳ ಬಿಡುಗಡೆ ಮಾಡಿದ್ದ ಗುಜರಾತ್‌ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಪ್ಪು ನಿರ್ಧಾರ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಐತಿಹಾಸಿಕ ತೀರ್ಪು:ಇದರ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್‌ ಮಾನವ ಹಕ್ಕುಗಳ ಕುರಿತ ವಕೀಲ ಆನಂದ್‌ ಯಾಗ್ನಿಕ್‌, ‘ಸುಪ್ರೀಂ ಕೋರ್ಟ್‌ ನಿಡಿರುವ ಈ ಐತಿಹಾಸಿಕ ತೀರ್ಪು ಅತ್ಯಂತ ಹೀನಾಯ ಕೃತ್ಯಗಳಲ್ಲಿ ತೊಡಗಿದ ಅಪರಾಧಿಗಳಿಗೆ ಶಿಕ್ಷೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇದರಿಂದಾಗಿ ಮುಂದೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂಬ ಸಂದೇಶ ರವಾನೆಯಾಗಲು ಮುನ್ನುಡಿಯಾಗಲಿದೆ. ಗುಜರಾತ್‌ ಸರ್ಕಾರ ರಾಜಕೀಯ, ಸಾಮಾಜಿಕ ಒತ್ತಡದಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿರುವುದು ಸರಿಯಾಗಿದೆ’ ಎಂಬುದಾಗಿ ತಿಳಿಸಿದ್ದಾರೆ.

Share this article