ಮುಂದಿನ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಮಾಡುವ ಕೇಂದ್ರ ಸರ್ಕಾರ ನಿರ್ಧಾರವನ್ನು ವಿಪಕ್ಷಗಳು ಸ್ವಾಗತಿಸಿವೆ.
ನವದೆಹಲಿ: ಮುಂದಿನ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಮಾಡುವ ಕೇಂದ್ರ ಸರ್ಕಾರ ನಿರ್ಧಾರವನ್ನು ವಿಪಕ್ಷಗಳು ಸ್ವಾಗತಿಸಿವೆ. ಜೊತೆಗೆ ‘ಇದು ತಮ್ಮ ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಜಯ. ಬಹುಮತದ ಇಚ್ಛೆಗೆ ಬಿಜೆಪಿ ಕೊನೆಗೂ ಮಣಿಯಬೇಕಾಯಿತು’ ಎಂದಿವೆ.
ವಿಪಕ್ಷ ಕಾಂಗ್ರೆಸ್ ಈ ಬಗ್ಗೆ ಮಾತನಾಡಿದ್ದು ‘ಮಾಡದೇ ಇರುವುದಕ್ಕಿಂತ ತಡವಾಗಿರುವುದು ಉತ್ತಮ. ಪಾರದರ್ಶಕವಾಗಿ ನಡೆಯಬೇಕು. ಸಾಮಾಜಿಕ ನ್ಯಾಯದ ಈ ನೀತಿಯನ್ನು ಜಾರಿಗೆ ತರಲು ಮೋದಿ ಹಿಂಜರಿಯುತ್ತಿದ್ದಾರೆ’ ಎಂದಿದೆ.
ಆರ್‌ಜೆಡಿಯು ಜಾತಿಗಣತಿ ಬಗ್ಗೆ ಪ್ರತಿಕ್ರಿಯಿಸಿದ್ದು‘ ಜಾತಿ ಆಧಾರಿತ ಜನಗಣತಿಗಾಗಿ ಒತ್ತಾಯಿಸಿದ್ದಕ್ಕೆ ನಮ್ಮನ್ನು ಜಾತಿವಾದಿಗಳು ಎಂದು ಕರೆದವರಿಗೆ ಸೂಕ್ತ ಉತ್ತರ ದೊರೆತಿದೆ. ಈ ಸಂಘಿಗಳು ತಮ್ಮ ಕಾರ್ಯಸೂಚಿಗೆ ತಕ್ಕಂತೆ ಕುಣಿಯುವಂತೆ ನಾವು ಮಾಡುತ್ತಲೇ ಇರುತ್ತೇವೆ. ಸರ್ಕಾರ ಜಾತಿಗಣತಿ ಘೋಷಿಸಿರುವುದು ಬಹುಜನರ ಜಯ’ ಎಂದಿದ್ದಾರೆ.
ಸಿಪಿಎಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು‘ ಬಿಹಾರದ ಚುನಾವಣೆ ನೋಡಿದರೆ ಜಾತಿಗಣತಿ ತಿರುವು ಮುರುವು ಎನಿಸಿದರೂ ಸ್ವಾಗತ. ಪ್ರಧಾನಿ ನರೇಂದ್ರ ಮೋದಿಯವರು ಬಡವರು, ಯುವಕರು, ಮಹಿಳೆಯರು, ರೈತರು ಎನ್ನುವ ನಾಲ್ಕು ಜಾತಿಗಳನ್ನು ಮಾತ್ರವೇ ಗುರುತಿಸುವುದಾಗಿ ಹೇಳಿದ್ದರು. ಜಾತಿಗಣತಿ ಸ್ವಾಗತಾರ್ಹ. ಆದರೆ ಅದರ ಸಮಯವನ್ನು ಘೋಷಿಸಲು ವಿಫಲವಾಗಿರುವುದು ವಿಷಾದಕರ’ ಎಂದಿದೆ.
ಜಾತಿ ಗಣತಿ ನಿರ್ಣಯ ಸ್ವಾಗತಾರ್ಹ: ರಾಹುಲ್
ನವದೆಹಲಿ: ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ಕೇಂದ್ರ ಸರ್ಕಾರದ ಘೋಷಣೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದು, ಸರ್ಕಾರ ಅದರ ಅನುಷ್ಠಾನಕ್ಕೆ ಸಮಯಸೂಚಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘11 ವರ್ಷಗಳ ಕಾಲ ವಿರೋಧದ ನಂತರ ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಹಠಾತ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ನಮಗೆ ಒಂದು ಕಾಲಮಿತಿ ಬೇಕು. ನಿರ್ದಿಷ್ಟ ಸಮಯ ನಿಗದಿಪಡಿಸಿ ಶೀಘ್ರವೇ ಕಾರ್ಯ ಆರಂಭವಾಗಬೇಕು. ತೆಲಂಗಾಣ ಜಾತಿ ಗಣತಿಯಲ್ಲಿ ಒಂದು ಮಾದರಿಯಾಗಿದ್ದು, ದೇಶಕ್ಕೆ ನೀಲನಕ್ಷೆಯಾಗಬಹುದು. ನಮಗೆ ಜನರ ಜನಗಣತಿ ಬೇಕೇ ಹೊರತು ಅಧಿಕಾರಿಗಳ ಜನಗಣತಿಯಲ್ಲ’ ಎಂದಿದ್ದಾರೆ.
ಜಾತಿಗಣತಿ ನಿರ್ಧಾರಕ್ಕೆ ಬಿಜೆಪಿ ಮಿತ್ರಪಕ್ಷಗಳ ಹರ್ಷ
ನವದೆಹಲಿ: ಜನ ಗಣತಿಯೊಂದಿಗೆ ಜಾತಿ ಗಣತಿಯನ್ನೂ ಕೈಗೊಳ್ಳುವ ಕೇಂದ್ರ ಸರ್ಕಾರದ ಘೋಷಣೆಗೆ ಬಿಜೆಪಿಯ ಮಿತ್ರಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.ಈ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ ಬಿಹಾರದ ಜೆಡಿಯು ಈ ಘೋಷಣೆಯನ್ನು ಶ್ಲಾಘಿಸಿದ್ದು, ‘ಇದು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಐತಿಹಾಸಿಕ ಹೆಜ್ಜೆ. ಜಾತಿ ಗಣತಿಯು ನ್ಯಾಯಯುತ ಸಮಾಜಕ್ಕೆ ನಾಂದಿ ಹಾಡುತ್ತದೆ. ಸಮಾಜದ ವಂಚಿತ ವರ್ಗಗಳತ್ತ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ’ ಎಂದಿದೆ.
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ, ಸಂಸದ ಚಿರಾಗ್ ಪಾಸ್ವಾನ್ ಸಂತಸ ವ್ಯಕ್ತಪಡಿಸಿದ್ದು, ‘ಇದು ದೇಶದ ಸಮಾನ ಅಭಿವೃದ್ಧಿಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ. ಜಾತಿ ಗಣತಿ ವಿಷಯವಾಗಿ ನನ್ನ ಮತ್ತು ಕೇಂದ್ರ ಸರ್ಕಾರದ ನಡುವೆ ವೈಮನಸ್ಯ ಉಂಟಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ಕೊಟ್ಟಿದೆ’ ಎಂದಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ‘ಕೇಂದ್ರ ಸರ್ಕಾರದ ಈ ನಿರ್ಧಾರವು ಸಾಮಾಜಿಕ ನ್ಯಾಯದತ್ತ ದೇಶದ ಪ್ರಯಾಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. ಇದು ಸಾಮಾಜಿಕ ನ್ಯಾಯದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಸ್ವಾತಂತ್ರ್ಯದ ನಂತರ ಸರ್ಕಾರ ತೆಗೆದುಕೊಂಡ ಅತ್ಯಂತ ಧೈರ್ಯಶಾಲಿ ನಿರ್ಧಾರಗಳಲ್ಲಿ ಇದು ಒಂದು’ ಎಂದು ಬಣ್ಣಿಸಿದ್ದಾರೆ.