;Resize=(412,232))
ನವದೆಹಲಿ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗಾಗಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಇದೀಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇತರೆ ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಸೋಮವಾರ ಸಂಜೆ ಸುಪ್ರೀಂಗೆ ಭೇಟಿ ನೀಡಿ ಸಿಇಸಿ ವಿರುದ್ಧ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯಲ್ಲಿ ಭಾರತೀಯ ಚುನಾವಣಾ ಆಯೋಗ, ಸಿಇಸಿ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಟಿಎಂಸಿ, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ (ಶರದ್ ಬಣ), ಶಿವಸೇನೆ (ಯುಬಿಟಿ), ಸಿಪಿಐ, ಜೆಎಂಎಂ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಅರ್ಜಿಯನ್ನು ಬೆಂಬಲಸಿ ಸಹಿ ಹಾಕಿವೆ. ==
1.2025ರ ಜೂ.24ರಿಂದ ಆರಂಭವಾದ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಕಡತ, ಸಭೆಯ ನಡವಳಿ, ಆಕ್ಷೇಪ, ಇಸಿನೆಟ್ ಹಾಗೂ ಇರೊನೆಟ್ ಪ್ರವೇಶ ಲಾಗ್‌ಗಳನ್ನು ಕೋರ್ಟ್ ಮುಂದೆ ಮಂಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು.
2. ಎಸ್‌ಐಆರ್ ಕುರಿತಾದ ವಿವಾದಿತ ನಿರ್ಧಾರಗಳು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕ ಸುಪ್ರೀಂನ ಹಿಂದಿನ ತೀರ್ಪುಗಳ ಪ್ರಕಾರ ಜರುಗಿವೆಯೇ ಎಂಬುದನ್ನು ಪರಿಶೀಲಿಸಬೇಕು.
3. ಮತಪಟ್ಟಿ ತಯಾರಿಕೆ ಮತ್ತು ತಿದ್ದುಪಡಿಗೆ ಸಂಬಂಧಿಸಿದ ಕಾನೂನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಬೇಕು.
4. ಆಯೋಗದ ಪ್ರತಿ ನಿರ್ಧಾರವೂ 2023ರ ಕಾಯ್ದೆಯ ಸೆಕ್ಷನ್ 18ಕ್ಕೆ ಅನುಗುಣವಾಗಿ ಮತ್ತು ಸರಿಯಾದ ದಾಖಲಾತಿಯೊಂದಿಗೆ ನಡೆಯುವುದನ್ನು ಆಯೋಗವು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಬೇಕು.
5. ಆನ್ಲೈನ್‌ನಲ್ಲಿ ಬಳಸಲಾಗುವ ಫಾರ್ಮ್-6 ನಮೂನೆಯು 1960ರ ಮತದಾರರ ನೋಂದಣಿ ನಿಯಮಗಳಿಗೆ ಅನುಗುಣವಾಗಿರಬೇಕು ಮತ್ತು ಯಾವುದೇ ಅನಧಿಕೃತ ಬದಲಾವಣೆ ಮಾಡಬಾರದು.
6. ಸುಪ್ರೀಂನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸ್ವತಂತ್ರ ಸಮಿತಿ ರಚಿಸಬೇಕು. ಈ ಸಮಿತಿಯು ಎಸ್‌ಐಆರ್ ಕುರಿತು ವಿಚಾರಣೆ, ಲೆಕ್ಕಪರಿಶೋಧನೆ ನಡೆಸಬೇಕು. ಇಸಿನೆಟ್, ಇರೊನೆಟ್ ವ್ಯವಸ್ಥೆಗಳು ಮತ್ತು ಅದರಲ್ಲಿ ಮಾಡಲಾದ ಎಲ್ಲ ತಾಂತ್ರಿಕ ಬದಲಾವಣೆಗಳ ಪರಿಶೀಲನೆ ನಡೆಸಬೇಕು.
7. ಎಸ್‌ಐಆರ್ ಅವಧಿಯಲ್ಲಿ ಮತಪಟ್ಟಿಯಿಂದ ಕೈಬಿಡಲಾದ ಎಲ್ಲಾ ಮತದಾರರ ಹೆಸರುಗಳನ್ನು ಮತಗಟ್ಟೆವಾರು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಪ್ರತಿಯೊಬ್ಬ ಮತದಾರರ ಹೆಸರನ್ನು ಕೈಬಿಡಲು ಕಾರಣವನ್ನು ತಿಳಿಸಬೇಕು.
8. ಕಾನೂನಿನ ಪ್ರಕಾರ ನೋಟಿಸ್ ನೀಡದೆ ಮತ್ತು ವಿಚಾರಣೆಗೆ ಸರಿಯಾದ ಅವಕಾಶವನ್ನು ಕಲ್ಪಿಸದೆ, ಮತಪಟ್ಟಿಯಿಂದ ಯಾವುದೇ ಹೆಸರನ್ನು ಅಳಿಸದಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು.
9. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವವರೆಗೆ ಮತ್ತು ಅಂತಿಮ ತೀರ್ಪು ಬರುವವರೆಗೆ, ಪ್ರಸ್ತುತ ಜಾರಿಯಲ್ಲಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
10. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು, ಕೋರ್ಟ್ ಅಗತ್ಯವೆಂದು ಭಾವಿಸುವ ಯಾವುದೇ ಹೆಚ್ಚುವರಿ ಆದೇಶಗಳನ್ನು ಹೊರಡಿಸಬೇಕು.
- ಎಸ್‌ಐಆರ್, ಸಿಇಸಿ ವಿರುದ್ಧ ಬೃಹತ್ ಪ್ರತಿಭಟನೆ । ಪೊಲೀಸರ ತಡೆ, ಬ್ಯಾರಿಕೇಡ್ ಹಾರಿದ ರಾಹುಲ್, ಪ್ರಿಯಾಂಕಾ
- ಖರ್ಗೆ, ಮಮತಾ, ಅಖಿಲೇಶ್, ತೇಜಸ್ವಿ, ಕರ್ನಾಟಕ ಸಿಎಂ ಡಿಕೆ, ಕರ್ನಾಟಕದ ಹಲವು ಸಚಿವರು, ಶಾಸಕರು ಭಾಗಿ
ನವದೆಹಲಿ: ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಇಂಡಿಯಾ ಕೂಟದ ನಾಯಕರು ಸೋಮವಾರ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಮತ್ತು ಸುಪ್ರೀಂಕೋರ್ಟ್ ಜಾಥಾ ನಡೆಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದರು.
ಸೋಮವಾರ ಮಧ್ಯಾಹ್ನ ಕನ್ಹಾಟ್‌ಪ್ಲೇಸ್‌ನಲ್ಲಿರುವ ಬಾರಾಕಂಬ ರೋಡ್ ಜಂಕ್ಷನ್‌ನಿಂದ ಆರಂಭವಾದ ಬೃಹತ್ ಜಾಥಾ, ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಹಾಗೂ ಮಂಡಿ ಹೌಸ್‌ನಿಂದ ಭಗವಾನ್ ದಾಸ್ ರಸ್ತೆಯ ಮೂಲಕ ಸುಪ್ರೀಂ ಕೋರ್ಟ್ ಕಡೆಗೆ ಹೆಜ್ಜೆ ಹಾಕಿತು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಸ್ಪಿ ನಾಯಕ ಅಖಿಲೇಶ್ ಯಾದವ್, ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿಪಿ (ಪವಾರ್ ಬಣ)ಯ ಸುಪ್ರಿಯಾ ಸುಳೆ ಸೇರಿದಂತೆ ಇಂಡಿಯಾ ಕೂಟದ ಹಲವರು ಭಾಗಿಯಾಗಿದ್ದರು.
ಇದಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಚಿವ ಸಂಪುಟದ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಆಡಳಿತದ ಇತರೆ ರಾಜ್ಯಗಳ ಸಿಎಂಗಳು, ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಹಿರಿಯ ನಾಯಕರು ಭಾಗಿಯಾಗಿದ್ದರು.
ಪೊಲೀಸರ ತಡೆ:
ಆದರೆ ಇಂಡಿಯಾ ಕೂಟದ ನಾಯಕರನ್ನು ಭಗವಾನ್ ದಾಸ್ ರೋಡ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಅಡ್ಡಗಟ್ಟಿದರು. ಈ ವೇಳೆ ರಾಹುಲ್, ಪ್ರಿಯಾಂಕಾ ಗಾಂಧಿ, ತೇಜಸ್ವಿ ಯಾದವ್ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ವಾಹನವೊಂದರ ಮೇಲೆ ಹತ್ತಿ ಬ್ಯಾರಿಕೇಡ್ ದಾಟಿ ಮುಂದೆ ಸಾಗಿದರು.
ಇಷ್ಟೆಲ್ಲಾ ಹೈಡ್ರಾಮಗಳ ನಡುವೆ ರಾಹುಲ್, ಖರ್ಗೆ ಸೇರಿದಂತೆ ಇಂಡಿಯಾ ಕೂಟದ ಪ್ರಮುಖರನ್ನು ಸುಪ್ರೀಂ ಕೋರ್ಟ್‌ನ ನಿಷೇಧಿತ ಆವರಣದೊಳಗೆ ಬಿಡಲಾಗಿತ್ತು. ಅಲ್ಲಿ ನಾಯಕರು ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಕೆ ಮಾಡಿದರು.