ಚೆನ್ನೈ : ತಮಿಳುನಾಡಿನ ಶ್ರೀಶನ್ ಫಾರ್ಮಾಸ್ಯುಟಿಕಲ್ ಕಂಪನಿ ತಯಾರಿಸಿದ ಮಾರಕ ಕೋಲ್ಡ್ರಿಫ್ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ 22 ಹಾಗೂ ರಾಜಸ್ಥಾನದ 2 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಕಂಪನಿಯ ಮಾಲೀಕನನ್ನು ಮಧ್ಯಪ್ರದೇಶ ಮತ್ತು ಚೆನ್ನೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ತಡರಾತ್ರಿ ಬಂಧಿಸಿದ್ದಾರೆ.
‘ಅ.7ರಿಂದಲೂ ಪೊಲೀಸರು ಕಂಪನಿ ಮಾಲೀಕ ಜಿ. ರಂಗನಾಥನ್‌ಗಾಗಿ ಹುಡುಕಾಡುತ್ತಿದ್ದರು. ಬುಧವಾರ ತಡರಾತ್ರಿ 1.30ಕ್ಕೆ ಬಂಧಿಸಲಾಯಿತು. ಆತನನ್ನು ವಿಚಾರಣೆಗಾಗಿ ಸುಂಗುವರ್ಛತ್ರಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಹಲವು ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಚೆನ್ನೈನಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ ನಂತರ ಮಧ್ಯಪ್ರದೇಶದ ಛಿಂದ್ವಾಡಕ್ಕೆ ಕರೆದುಕೊಂಡು ಹೋಗಿ ತನಿಖೆ ನಡೆಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಶನ್ ಕಂಪನಿ ತಯಾರಿಸಿದ ಕೋಲ್ಡ್ರಿಫ್ ಔಷಧದಲ್ಲಿ ಕಲಬೆರಕೆಯಾಗಿದೆ ಎಂದು ಅ.4ರಂದು ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದೃಢಪಡಿಸಿತ್ತು. ಮಂಗಳವಾರ ಕಂಪನಿಯ ಕಾರ್ಖಾನೆಗೆ ಬೀಗಮುದ್ರೆ ಹಾಕಲಾಗಿತ್ತು.
ಇಬ್ಬರ ಅಮಾನತು:
ಶ್ರೀಶನ್ ಕಂಪನಿಯ ವಿಷಕಾರಿ ಕೋಲ್ಡ್ರಿಫ್ ಸಿರಪ್ ಸೇವಿಸಿ 24 ಮಕ್ಕಳು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ, ಇಬ್ಬರು ಹಿರಿಯ ಔಷಧ ನಿಯಂತ್ರಕರನ್ನು ಅಮಾನತುಗೊಳಿಸಿದೆ. ವಿಷಕಾರಿ ಔಷಧ ತಯಾರಿಸಿದ ಕಾರ್ಖಾನೆಯನ್ನು ಕಳೆದ ಎರಡು ವರ್ಷಗಳಿಂದ ತಪಾಸಣೆ ಮಾಡದ್ದಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಇಬ್ಬರನ್ನೂ ಅಮಾನತು ಮಾಡಲಾಗಿದೆ.