ನೊಬೆಲ್‌ ಶಾಂತಿ ಪ್ರಶಸ್ತಿಗೆ ‘ಪ್ಯಾಡ್‌ಮ್ಯಾನ್‌’ ಅರುಣಾಚಲಂ ನಾಮಾಂಕಿತ?

KannadaprabhaNewsNetwork |  
Published : May 04, 2026, 01:15 AM IST
ಅರುಣಾಚಲಂ ಮುರುಗನಾಥಂ | Kannada Prabha

ಸಾರಾಂಶ

‘ಪ್ಯಾಡ್‌ಮ್ಯಾನ್’ ಎಂದೇ ಪ್ರಸಿದ್ಧರಾಗಿರುವ ಹಾಗೂ ಅಕ್ಷಯ ಕುಮಾರ್‌ ಅವರ ‘ಪ್ಯಾಡ್‌ಮ್ಯಾನ್‌’ ಚಿತ್ರಕ್ಕೆ ಸ್ಫೂರ್ತಿ ಆಗಿರುವ ಸಮಾಜಸೇವಕ ಅರುಣಾಚಲಂ ಮುರುಗನಾಥಂ, ತಾನು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದೇನೆ ಎಂದು ಭಾನುವಾರ ಹೇಳಿದ್ದಾರೆ.

ಚೆನ್ನೈ: ‘ಪ್ಯಾಡ್‌ಮ್ಯಾನ್’ ಎಂದೇ ಪ್ರಸಿದ್ಧರಾಗಿರುವ ಹಾಗೂ ಅಕ್ಷಯ ಕುಮಾರ್‌ ಅವರ ‘ಪ್ಯಾಡ್‌ಮ್ಯಾನ್‌’ ಚಿತ್ರಕ್ಕೆ ಸ್ಫೂರ್ತಿ ಆಗಿರುವ ಸಮಾಜಸೇವಕ ಅರುಣಾಚಲಂ ಮುರುಗನಾಥಂ, ತಾನು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದೇನೆ ಎಂದು ಭಾನುವಾರ ಹೇಳಿದ್ದಾರೆ. 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ 287 ಅಭ್ಯರ್ಥಿಗಳು ನಾಮನಿರ್ದೇಶನಗೊಂಡಿದ್ದಾರೆ. ಅದರಲ್ಲಿ 208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳಿವೆ ಎಂದು ನೊಬೆಲ್ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಮುರುಗನಾಥಂ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ವಿತರಿಸಿ ಪ್ರಸಿದ್ಧಿ ಪಡೆದಿದ್ದರು.

==

ಹಜ್‌ ವಿಮಾನ ಪ್ರಯಾಣ ದರ 10,000 ರು. ಏರಿಕೆ: ಕಾಂಗ್ರೆಸ್‌ ಕಿಡಿ

ನವದೆಹಲಿ: ಹಜ್‌ ಯಾತ್ರೆಯ ವಿಮಾನ ದರವನ್ನು 10 ಸಾವಿರ ರು.ನಷ್ಟು ಹೆಚ್ಚಿಸಿ ಭಾರತೀಯ ಹಜ್‌ ಕಮಿಟಿ ಹೊರಡಿಸಿದ ಸುತ್ತೋಲೆಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಈ ಸುತ್ತೋಲೆ ಹಿಂಪಡೆಯುವಂತೆ ಒತ್ತಾಯಿಸಿದೆ.ಮೋದಿ ಸರ್ಕಾರವು ಹಜ್‌ ಧಾರ್ಮಿಕ ಪ್ರವಾಸದ ವೆಚ್ಚವನ್ನು ಜನಸಾಮಾನ್ಯ ಮುಸ್ಲಿಂ ಕುಟುಂಬಗಳ ಕೈಗೆಟಕದ ರೀತಿಯಲ್ಲಿ ಹೆಚ್ಚಿಸಿದೆ ಎಂದು ಆರೋಪಿಸಿದೆ.

ವೈಮಾನಿಕ ಇಂಧನ ದರದಲ್ಲಿ ಭಾರೀ ಏರಿಕೆಯಿಂದಾಗಿ ಭಾರತೀಯ ಹಜ್‌ ಕಮಿಟಿಯು ಹಜ್‌ ವಿಮಾನ ಪ್ರಯಾಣ ದರವನ್ನು 10 ಸಾವಿರ ರು.ನಷ್ಟು ಹೆಚ್ಚಿಸಿದೆ. ಸಾಕಷ್ಟು ಸಮಾಲೋಚನೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಜ್‌ ಕಮಿಟಿ ಸ್ಪಷ್ಟನೆ ನೀಡಿದೆ.ಈ ನಡುವೆ, ಕೇಂದ್ರ ಸಚಿವ ಕಿರಣ್‌ ರಿಜಿಜು ಸ್ಪಷ್ಟನೆ ನೀಡಿ, ‘ಏರ್‌ಲೈನ್ಸ್‌ಗಳು 40 ಸಾವಿರ ರು. ಹೆಚ್ಚಿಸಲು ಕೋರಿದ್ದವು. ಆದರೆ ಸರ್ಕಾರ ಚೌಕಾಶಿ ಮಾಡಿ 10 ಸಾವಿರ ರು.ಗೆ ತಂದಿತು. ಈ ಮೂಲಕ ಯಾತ್ರಿಕರಿಗೆ ಆಗುವ ಹೊರೆ ತಪ್ಪಿಸಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ದರ ಹೆಚ್ಚಳ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ನಾಸೀರ್‌ ಹುಸೇನ್‌ ಅವರು, ಏ.28ರಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಪ್ರತಿಯೊಬ್ಬ ಹಜ್‌ ಪ್ರವಾಸಿಗರು ಮೇ 15ರೊಳಗೆ ಹೆಚ್ಚುವರಿ 10 ಸಾವಿರ ರುಪಾಯಿ ಪಾವತಿಸಬೇಕು ಎಂದು ಸೂಚಿಸಿದೆ. ಹೆಚ್ಚುವರಿ ಹಣದ ಬೇಡಿಕೆಯನ್ನು ಯಾವುದೇ ಮುನ್ಸೂಚನೆ, ಸಮಾಲೋಚನೆ ಇಲ್ಲದೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಯಾತ್ರಾರ್ಥಿಗಳು ಈಗಾಗಲೇ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಈಗಾಗಲೇ ಪಾವತಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ವಯಸ್ಕರು. ಕೆಲ ಯಾತ್ರಾರ್ಥಿಗಳಂತು ಈಗಾಗಲೇ ಸೌದಿ ಅರೇಬಿಯಾದಲ್ಲಿದ್ದಾರೆ. ಈಗ ಏಕಾಏಕಿ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

==

ಬಿಹಾರದಲ್ಲಿ ಸದ್ಭಾವ ಯಾತ್ರೆಗೆ ನಿತೀಶ್‌ ಪುತ್ರ ನಿಶಾಂತ್‌ ಚಾಲನೆ

ಪಟನಾ: ಬಿಹಾರದ ನಿರ್ಗಮಿತ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಅವರ ಪುತ್ರ ನಿಶಾಂತ್‌ ಕುಮಾರ್‌ ಅವರು ಪಶ್ಚಿಮ ಚಂಪಾರಣ್ಯ ಜಿಲ್ಲೆಯ ವಾಲ್ಮೀಕಿ ನಗರದಿಂದ ಭಾನುವಾರ ಸದ್ಭಾವ ಯಾತ್ರೆ ಆರಂಭಿಸಿದ್ದಾರೆ.ನಿಶಾಂತ್‌ಗೆ ಮುಂದೆ ಡಿಸಿಎಂ ಪಟ್ಟ ಸಿಗಬಹುದು ಎಂಬ ಗುಸುಗುಸು ನಡುವೆಯೇ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ತಲುಪುವ ಭಾಗವಾಗಿ ಅವರು ಈ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಇದು ನನ್ನ ಮೊದಲ ರಾಜಕೀಯ ಪಯಣವಾಗಿದೆ. ಸದ್ಭಾವ್‌ ಎಂಬುದು ಪ್ರೀತಿ ಮತ್ತು ಧನಾತ್ಮಕ ಭಾವನೆಯನ್ನು ತೋರಿಸುತ್ತದೆ. ನಾನು ಎಲ್ಲರನ್ನೂ ಜತೆಗೆ ಕರೆದೊಯ್ಯಲಿದ್ದೇನೆ, ಯಾರನ್ನೂ ಬಿಟ್ಟು ಹೋಗುವುದಿಲ್ಲ’ ಎಂದರು.ನಿತೀಶ್‌ ಕೂಡ ಚಂಪಾರಣ್ಯ ಜಿಲ್ಲೆಯಿಂದಲೇ ತಮ್ಮ ಮಹತ್ವದ ಯಾತ್ರೆಗಳನ್ನು ಆರಂಭಿಸಿದ್ದರು. ಇದೀಗ ನಿಶಾಂತ್‌ ಕೂಡ ತಂದೆಯ ರೀತಿ ಇಲ್ಲಿಂದಲೇ ಯಾತ್ರೆ ಆರಂಭಿಸಿ, ರಾಜ್ಯಾದ್ಯಂತ ಕಾರ್ಯಕರ್ತರು, ಸಾರ್ವಜನಿಕರನ್ನು ತಲುಪುವ ಪ್ರಯತ್ನ ನಡೆಸಲಿದ್ದಾರೆ. ಈ ಯಾತ್ರೆ ಹಂತ ಹಂತಗಳಾಗಿ ರಾಜ್ಯಾದ್ಯಂತ ಸಂಚರಿಸಲಿದೆ.

==

ಪಾಕ್ ಕೇಂದ್ರ ನಾಗರಿಕ ಸೇವೆ 2 ಹಿಂದುಗಳ ನೇಮಕ

ಇಸ್ಲಾಮಾಬಾದ್‌: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವಕರಿಬ್ಬರು ಪಾಕ್‌ನ ಕೇಂದ್ರ ನಾಗರಿಕ ಸೇವಾ ಆಯೋಗದ (ಎಫ್‌ಪಿಎಸ್‌ಸಿ) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.ಸಿಂಧ್‌ ಪ್ರಾಂತ್ಯದ ಜೀವನ್‌ ರೆಬಾರಿ ಮತ್ತು ಖೇಮ್‌ ಚಂದ್‌ ಜಂದೋರಾ ಇತ್ತೀಚೆಗೆ ಸೆಂಟ್ರಲ್‌ ಸುಪೀರಿಯರ್‌ ಸರ್ವೀಸಸ್‌ಗೆ (ಸಿಎಸ್‌ಎಸ್‌) ಆಯ್ಕೆಯಾದವರು. ಇಬ್ಬರೂ ಬಡ ಹಿನ್ನೆಲೆಯಲ್ಲಿ ಬಂದವರಾಗಿದ್ದು, ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾರೆ.

ಭಾರತದ ಐಎಎಸ್‌ ಹುದ್ದೆಗಳ ಮಾದರಿಯ ಪಾಕ್‌ ನಾಗರಿಕ ಸೇವೆಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ತೀರಾ ಕಡಿಮೆ. ಇದರ ನಡುವೆಯೂ ಬಡ ಹಿನ್ನೆಲೆಯಲ್ಲಿ ಬಂದ ಈ ಯುವಕರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ.ಖೇಮ್ ಚಂದಾ ಪೋಷಕರು ಹೆಚ್ಚಿನ ಬಡ್ಡಿಗೆ ಸಾಲ ಪಡೆದು, ಒಡವೆ ಮಾರಿ ಪುತ್ರನ ಶಿಕ್ಷಣಕ್ಕೆ ನೆರವು ನೀಡಿದರೆ, ಜೀವನ್‌ ಊಟ-ಉಪಹಾರಕ್ಕಾಗಿ ಗುರುದ್ವಾರದ ಆಶ್ರಯ ಪಡೆದು ವಿದ್ಯಾಭ್ಯಾಸ ಪೂರೈಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಈಗ ಕೇವಲ 38.8 ಲಕ್ಷ ಮಂದಿಯಷ್ಟೇ ಹಿಂದೂಗಳಷ್ಟೇ ಉಳಿದಿದ್ದಾರೆ. ಹಿಂದೂಗಳೇ ಪಾಕಿಸ್ತಾನದಲ್ಲಿರುವ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಬಹುತೇಕ ಇವರು ಸಿಂಧ್‌ ಪ್ರಾಂತ್ಯದಲ್ಲೇ ನೆಲೆಸಿದ್ದಾರೆ.

==

6 ವರ್ಷವರೆಗಿನ ಮಕ್ಕಳಿಗಷ್ಟೇ ಹೊಸ ಆಧಾರ್‌: ಸುಪ್ರೀಂ ಕೋರ್ಟ್‌ಗೆ ಅರ್ಜಿ

ನವದೆಹಲಿ: 6 ವರ್ಷವರೆಗಿನ ಮಕ್ಕಳಿಗಷ್ಟೇ ಹೊಸದಾಗಿ ಆಧಾರ್‌ ಕಾರ್ಡ್‌ ನೀಡಬೇಕು, ಒಳನುಸುಳುಕೋರರು ಭಾರತೀಯ ಪ್ರಜೆಗಳಾಗಿ ಬಿಂಬಿಸಿಕೊಳ್ಳುವುದನ್ನು ತಡೆಯಲು ಹದಿಹರೆಯದವರು ಮತ್ತು ವಯಸ್ಕರಿಗೆ ಆಧಾರ್‌ ಕಾರ್ಡ್‌ ವಿತರಣೆ ವೇಳೆ ಕಠಿಣ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಮಹತ್ವದ ಅರ್ಜಿ ಸೋಮವಾರ ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣೆಗೆ ಬರಲಿದೆ.ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಈ ಅರ್ಜಿ ಮುಖ್ಯ ನ್ಯಾ। ಸೂರ್ಯಕಾಂತ್‌ ಮತ್ತು ನ್ಯಾ. ಜಯಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ.

12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಕೇವಲ ಗುರುತು ಪತ್ರವಷ್ಟೇ ಹೊರತು ನಾಗರಿಕತ್ವ, ವಿಳಾಸ ಅಥವಾ ಹುಟ್ಟಿದ ದಿನಾಂಕದ ದಾಖಲೆ ಅಲ್ಲ ಎಂದು ಸಾಮಾನ್ಯ ಸೇವಾ ಕೇಂದ್ರಗಳ ಮುಂದೆ ಬೋರ್ಡ್‌ ಹಾಕಬೇಕು. ಆಧಾರ್‌ ದುರುಪಯೋಗ ತಡೆಯಲು ಕಠಿಣ ನಿಯಮಾವಳಿ ರೂಪಿಸಬೇಕು ಎಂದೂ ಕೋರಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲಿಪುಲೇಖ್‌ ಮೂಲಕ ಕೈಲಾಸ ಯಾತ್ರೆಗೆ ನೇಪಾಳ ವಿರೋಧ
ದೆಹಲಿಯ 30 ವರ್ಷದ ಜಡ್ಜ್‌ ಶವ ಪತ್ತೆ, ಆತ್ಮ*ತ್ಯೆ ಶಂಕೆ