ಪ್ರಸಾರ ಭಾರತಿ ಮುಖ್ಯಸ್ಥ ಹುದ್ದೆಗೆ ಪ್ರಸೂನ್‌ ಜೋಶಿ

KannadaprabhaNewsNetwork |  
Published : May 03, 2026, 01:45 AM IST
ಪ್ರಸೂನ್‌ | Kannada Prabha

ಸಾರಾಂಶ

ಖ್ಯಾತ ಗೀತರಚನಕಾರ, ಲೇಖಕ, ಸಂವಹನ ತಜ್ಞ, ಪದ್ಮಶ್ರೀ ಪುರಸ್ಕೃತ ಪ್ರಸೂನ್‌ ಜೋಶಿ ಅವರನ್ನು ಭಾರತದ ಸಾರ್ವಜನಿಕ ಸೇವಾ ಪ್ರಸಾರಕ ‘ಪ್ರಸಾರ ಭಾರತಿ’ಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ನವದೆಹಲಿ: ಖ್ಯಾತ ಗೀತರಚನಕಾರ, ಲೇಖಕ, ಸಂವಹನ ತಜ್ಞ, ಪದ್ಮಶ್ರೀ ಪುರಸ್ಕೃತ ಪ್ರಸೂನ್‌ ಜೋಶಿ ಅವರನ್ನು ಭಾರತದ ಸಾರ್ವಜನಿಕ ಸೇವಾ ಪ್ರಸಾರಕ ‘ಪ್ರಸಾರ ಭಾರತಿ’ಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 2017ರಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಅಧ್ಯಕ್ಷರ ಹುದ್ದೆಗೇರಿದ್ದ ಜೋಶಿ, ಅದಕ್ಕೂ ಮೊದಲು ಜಾಹೀರಾತು ಮತ್ತು ಮಾರ್ಕೆಟಿಂಗ್ ಏಜೆನ್ಸಿಯಾಗಿರುವ ಮೆಕ್‌ಕ್ಯಾನ್ ವರ್ಲ್ಡ್ ಗ್ರೂಪ್ ಇಂಡಿಯಾದ ಸಿಇಒ ಆಗಿದ್ದರು. ತಮ್ಮ ಪ್ರಭಾವಶಾಲಿ ಬರವಣಿಗೆಗೇ ಹೆಸರಾಗಿರುವ ಇವರು, ಸಾಹಿತ್ಯ, ಜಾಹೀರಾತು, ಸಿನಿಮಾ ಮತ್ತು ಸಾರ್ವಜನಿಕ ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ.

==

ತಿರುಪತಿಗೆ 70 ಲಕ್ಷ ಕೆಜಿ ಕಲಬೆರಕೆ ತುಪ್ಪ ಪೂರೈಕೆ: ಏಕಸದಸ್ಯ ಸಮಿತಿ ವರದಿ

ಹೈದರಾಬಾದ್: ಹಿಂದಿನ ಸಿಎಂ ಜಗನ್‌ ಅವಧಿಯಲ್ಲಿ ತಿರುಪತಿ ದೇವಾಲಯದ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಪೂರೈಸಲಾಗಿತ್ತು ಎಂಬ ಆರೋಪದ ತನಿಖೆಗೆ ಆಂಧ್ರ ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಡಿ. ದಿನೇಶ್ ಕುಮಾರ್ ಅಧ್ಯಕ್ಷತೆಯ ಏಕ ಸದಸ್ಯ ಸಮಿತಿಯು ಆಡಳಿತ ವೈಫಲ್ಯ ಪರಿಶೀಲಿಸಿ ವರದಿ ಸಲ್ಲಿಸಿದೆ. ಈ ವರದಿಯಲ್ಲಿ, 2019ರಿಂದ 2024ರವರೆಗೆ ದೇಗುಲದ ತುಪ್ಪ ಸಂಗ್ರಹಣೆಯಲ್ಲಿ ಗಣನೀಯ ಆಡಳಿತ ವೈಫಲ್ಯ, ನಿಯಮ ಉಲ್ಲಂಘನೆ ಮತ್ತು ಸಂಭಾವ್ಯ ಪಿತೂರಿ ನಡೆದಿದೆ. 70 ಲಕ್ಷ ಕೆ.ಜಿ.ಗಿಂತಲೂ ಹೆಚ್ಚು ತುಪ್ಪವನ್ನು ಕಡ್ಡಾಯ ಪರೀಕ್ಷೆಗಳಿಲ್ಲದೆ ಸ್ವೀಕರಿಸಿ ಲಡ್ಡು ತಯಾರಿಕೆಗೆ ಬಳಸಲಾಗಿದೆ. ಇವು ಕೇವಲ ತಪ್ಪುಗಳಲ್ಲ, ಸಂಪೂರ್ಣ ವ್ಯವಸ್ಥೆಯ ವೈಫಲ್ಯ ಎಂದು ಉಲ್ಲೇಖಿಸಲಾಗಿದೆ.

==

ವಡೋದರಾ ವಿವಿ ಪಠ್ಯದಲ್ಲಿ ಮೋದಿ ನಾಯಕತ್ವದ ಪಾಠ

ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಖರ ನಾಯಕತ್ವ ಹಾಗೂ ಅದರಿಂದ ಸಮಾಜದ ಮೇಲಾದ ಪರಿಣಾಮಗಳ ಬಗೆಗಿನ ‘ಮೋದಿ ತತ್ವ’ ಎಂಬ ಪಾಠವನ್ನು ಇಲ್ಲಿನ ಮಹಾರಾಜಾ ಅಯಾಜಿರಾವ್‌ ವಿವಿಯು ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ಸೇರಿಸಿದೆ. ‘ದೇಶಭಕ್ತಿಯ ಸಮಾಜಶಾಸ್ತ್ರ’ ಎಂಬ ಶೀರ್ಷಿಕೆಯ ಕೋರ್ಸ್‌ನಲ್ಲಿ ಮೋದಿ, ಛತ್ರಪತಿ ಶಿವಾಜಿ ಮಹಾರಾಜ್‌, ಸಯಾಜಿರಾವ್‌ ಗಾಯಕ್ವಾಡ್‌ 3 ಸೇರಿದಂತೆ ಕೆಲ ಸಮಾಜ ಸುಧಾರಕರ ಕೆಲಸಗಳ ಬಗ್ಗೆ ಪಠ್ಯ ಮಾಹಿತಿ ಒಳಗೊಂಡಿದೆ. ಅದರಲ್ಲಿ ಮೋದಿ ಜನಪ್ರಿಯರಾಗಿದ್ದು ಹೇಗೆ? ಭಾರೀ ಪ್ರಮಾಣದಲ್ಲಿ ಸ್ವೀಕೃತರಾಗಲು ಹೇಗೆ ಸಾಧ್ಯವಾಯಿತು? ಸುದೀರ್ಘಾವಧಿಗೆ ಅಧಿಕಾರದಲ್ಲಿ ಉಳಿದಿರುವುದು ಹೇಗೆ? ಎಂಬಿತ್ಯಾದಿಗಳು ಪಠ್ಯದಲ್ಲಿವೆ.

==

ಆನ್ಲೈನ್‌ ಜಿಹಾದ್‌: ಐಸಿಸ್‌ ನಂಟಿನ ಉಗ್ರನ ಬಂಧನ

ಕಛ್: ಐಸಿಸ್‌ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿ, ಆನ್‌ಲೈನ್‌ನಲ್ಲಿ ಜಿಹಾದ್‌ ನಡೆಸುತ್ತಿದ್ದ ಉಗ್ರನನ್ನು ವಿಶೇಷ ಕಾರ್ಯಾಚರಣೆ ಪಡೆಯ ಪೊಲೀಸರು ಗುಜರಾತ್‌ನ ಕಛ್‌ನಲ್ಲಿ ಬಂಧಿಸಿದ್ದಾರೆ. ಭುಜ್‌ ತಾಲೂಕಿನ ಲೊಡಾಯಿ ಗ್ರಾಮದ ಫಕೀರಮ್ಮದ್‌ ಗಡ್ಗಾ ಬಂಧಿತ. ಆತ ಐಸಿಸ್ ಸಂಬಂಧಿತ ಪ್ರಚಾರ ಮತ್ತು ಇತರ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡುತ್ತಿದ್ದ. ಪ್ರಚೋದನಕಾರಿ ಪೋಸ್ಟ್‌ ಪ್ರಕಟಿಸಲು ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಹಲವು ಖಾತೆಗಳನ್ನು ಹೊಂದಿದ್ದ. ರಾಷ್ಟ್ರದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಚಟುವಟಿಕೆಗಳಾದ ‘ಖಲೀಫೇಟ್’ ಮತ್ತು ‘ಜಿಹಾದ್’ ಪರಿಕಲ್ಪನೆಯ ಕಡೆಗೆ ಜನರನ್ನು ಪ್ರಚೋದಿಸುತ್ತಿದ್ದ ಎಂದು ಆರೋಪಿಸಲಾಗಿದೆ.

==

ಕಳೆದ ವರ್ಷ ₹81000 ಕೋಟಿ ಮೌಲ್ಯದ ಆಸ್ತಿ ಇಡಿಯಿಂದ ಜಪ್ತಿ

ಸಂತ್ರಸ್ತರಿಗೆ ₹32000 ಕೋಟಿ ಮೌಲ್ಯದ ಆಸ್ತಿ ವಾಪಸ್‌

ಬಂಧನ ಶೇ.27ರಷ್ಟು ಇಳಿಕೆ, ಕೇಸ್‌ ಸಂಖ್ಯೆ ಹೆಚ್ಚಳ

ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ (ಇ.ಡಿ.) ದೇಶಾದ್ಯಂತ ದಾಖಲೆಯ ₹81000 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಆದರೆ ಇದೇ ಅವಧಿಯಲ್ಲಿ ಆರೋಪಿಗಳ ಬಂಧನ ಪ್ರಮಾಣ ಶೇ.27ರಷ್ಟು ಇಳಿಮುಖವಾಗಿದೆ!

ಇ.ಡಿ. ಬಿಡುಗಡೆ ಮಾಡಿದ ವಾರ್ಷಿಕ ವರದಿ ಅನ್ವಯ, ಮಾ.31ಕ್ಕೆ ಅಂತ್ಯಗೊಂಡ 2026ನೇ ಹಣಕಾಸು ವರ್ಷದಲ್ಲಿ ಇ.ಡಿ. ದೇಶಾದ್ಯಂತ 2982 ಕಡೆ ದಾಳಿ ನಡೆಸಿ 1080 ಕೇಸು ದಾಖಲಿಸಿ 712 ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಿದೆ. ಇದರ ಮೊತ್ತ 81422 ಕೋಟಿ ರು.ನಷ್ಟಿತ್ತು. ಹಿಂದಿನ ವರ್ಷದಲ್ಲಿ 775 ಪ್ರಕರಣ ದಾಖಲಿಸಿ, 461 ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಿತ್ತು. ಇದರ ಮೊತ್ತ 30036 ಕೋಟಿ ರು.ನಷ್ಟಿತ್ತು.

₹32000 ಕೋಟಿ ಆಸ್ತಿ ವಾಪಸ್‌:2026ನೇ ವಿತ್ತ ವರ್ಷದಲ್ಲಿ ವಂಚನೆಗೊಳಗಾದವರಿಗೆ ಒಟ್ಟು ₹32000 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಇ.ಡಿ. ಹಿಂತಿರುಗಿಸಿದೆ. ಇದರಲ್ಲಿ ಬ್ಯಾಂಕ್‌ಗಳು, ಹೂಡಿಕೆದಾರರು ಮತ್ತು ಮನೆಖರೀದಿದಾರರು ಸೇರಿದ್ದಾರೆ. 2025ನೇ ಹಣಕಾಸು ವರ್ಷದಲ್ಲಿ ಈ ರೀತಿ 15,263 ಕೋಟಿ ರು.ಮೌಲ್ಯದ ಸಂಪತ್ತನ್ನು ವಾಪಸ್‌ ನೀಡಲಾಗಿತ್ತು.156 ಮಂದಿ ಬಂಧನ:

ಇನ್ನು 2025ರಲ್ಲಿ ಇ.ಡಿ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ 214 ಮಂದಿ ಬಂಧಿಸಿತ್ತು. 2026ರಲ್ಲಿ ಈ ಪ್ರಮಾಣ 156ಕ್ಕಿಳಿದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕಕ್ಕೆ ಯುದ್ಧ ನಿಲ್ಲಿಸಲು ಹೇಳಿ: ಬೆಂಗ್ಳೂರಲ್ಲಿ ಖಮೇನಿ ಪ್ರತಿನಿಧಿ ಇಲಾಹಿ ಆಗ್ರಹ
ಸಿಎಂ ಮಮತಾಗೆ ಸುಪ್ರೀಂನಲ್ಲಿ ಹಿನ್ನಡೆ