ಅಮೆರಿಕಕ್ಕೆ ಯುದ್ಧ ನಿಲ್ಲಿಸಲು ಹೇಳಿ: ಬೆಂಗ್ಳೂರಲ್ಲಿ ಖಮೇನಿ ಪ್ರತಿನಿಧಿ ಇಲಾಹಿ ಆಗ್ರಹ

KannadaprabhaNewsNetwork |  
Published : May 03, 2026, 01:45 AM IST
ಇಲಾಹಿ | Kannada Prabha

ಸಾರಾಂಶ

ಇರಾನ್‌ ಸರ್ವೋಚ್ಚ ನಾಯಕ ಖಮೇನಿಯ ಪ್ರತಿನಿಧಿಯಾಗಿ ಭಾರತದಲ್ಲಿರುವ ಅಬ್ದುಲ್‌ ಮಜೀದ್‌ ಹಕೀಂ ಇಲಾಹಿ, ‘ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ಇಸ್ರೇಲ್‌ಗೆ ಹೇಳಿ’ ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಬೆಂಗಳೂರು: ಇರಾನ್‌ ಸರ್ವೋಚ್ಚ ನಾಯಕ ಖಮೇನಿಯ ಪ್ರತಿನಿಧಿಯಾಗಿ ಭಾರತದಲ್ಲಿರುವ ಅಬ್ದುಲ್‌ ಮಜೀದ್‌ ಹಕೀಂ ಇಲಾಹಿ, ‘ಯುದ್ಧವನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ಇಸ್ರೇಲ್‌ಗೆ ಹೇಳಿ’ ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಹಿ, ‘ಒಂದು ರಾಷ್ಟ್ರದ ಜತೆ ವ್ಯವಹಾರ ಮಾಡಬೇಡಿ ಎಂದು ಉಳಿದೆಲ್ಲಾ ದೇಶಗಳಿಗೆ (ಅಮೆರಿಕ) ಹೇಳುವುದು ಸರಿಯೇ? ಕದನದ ಬಗ್ಗೆ ಇರಾನ್‌ಅನ್ನು ಪ್ರಶ್ನಿಸುವ ಬದಲು, ಅದನ್ನು ಶುರು ಮಾಡಿದವರ ಬಳಿಯೇ ನಿಲ್ಲಿಸುವಂತೆ ಹೇಳಿ. ಹಾಗಾದರೆ ಮಾತ್ರವೇ ಎಲ್ಲವೂ ಸಹಜಸ್ಥಿತಿಗೆ ಮರಳುತ್ತದೆ’ ಎಂದರು. ಜತೆಗೆ, ಇರಾನ್‌ ಯುದ್ಧ ಬಯಸಿರಲಿಲ್ಲ ಎಂದೂ ಹೇಳಿದ್ದಾರೆ.

ಇದೇ ವೇಳೆ, ‘ಅಮೆರಿಕ ಮತ್ತು ಇಸ್ರೇಲ್‌ 3 ಮುಗಿಯಬಹುದು ಎಂದುಕೊಂಡಿದ್ದ ಈ ಯುದ್ಧಕ್ಕಾಗಿ 4 ವರ್ಷಗಳ ತಯಾರಿ ನಡೆಸಿದ್ದವು. ನಾವು ಬೇಷರತ್‌ ಶರಣಾಗಬೇಕೆಂದು ಅವರು ಬಯಸಿದ್ದರು. ಆದರೆ ಇರಾನ್‌ ಬಾಗದು’ ಎಂದಿರುವ ಇಲಾಹಿ, ‘ಸಂಧಾನಕಾರನಾಗಿರುವ ಪಾಕಿಸ್ತಾನದ ಮೇಲೆ ನಂಬಿಕೆ ಇಲ್ಲ. ಅವರು ಬರೀ ನಮ್ಮ ಸಂದೇಶವನ್ನು ಅಮೆರಿಕಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

==

ಅಮೆರಿಕ ಜತೆ ಮತ್ತೆ ಕದನ ಶುರು: ಇರಾನ್‌

ಟೆಹ್ರಾನ್‌: ಇರಾನ್‌ ಸಲ್ಲಿಸಿದ ಕದನವಿರಾಮದ ಪ್ರಸ್ತಾವನೆಯು ತೃಪ್ತಿದಾಯಕವಾಗಿಲ್ಲ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ ಬೆನ್ನಲ್ಲೇ, ಕದನವು ಮತ್ತೆ ಆರಂಭವಾಗುವುದು ಎಂಬ ವಿಶ್ಲೇಷಣೆ ಆರಂಭವಾಗಿದೆ. ಇರಾನ್‌ ಸೇನೆಯ ಉನ್ನತ ಅಧಿಕಾರಿಯಾಗಿರುವ ಮೊಹೊಮ್ಮದ್‌ ಜಾಫರ್‌ ಆಸಾದಿ ಇಂತಹ ಎಚ್ಚರಿಕೆ ನೀಡಿದ್ದಾರೆ ಎಂದು ಅಲ್ಲಿನ ಫಾರ್ಸ್‌ ನ್ಯೂಸ್‌ ವರದಿ ಮಾಡಿದೆ. ‘ಅಮೆರಿಕ ಯಾವುದೇ ಭರವಸೆ ಅಥವಾ ಒಪ್ಪಂದಕ್ಕೆ ಬದ್ಧವಾಗಿಲ್ಲ. ಅಲ್ಲಿನ ಅಧಿಕಾರಿಗಳ ಕ್ರಮಗಳು ಮತ್ತು ಹೇಳಿಕೆಗಳು ಮಾಧ್ಯಮ ನಿಯಂತ್ರಿತವಾಗಿವೆ. ಅವರ ಮೊದಲ ಗುರಿ ತೈಲ ಬೆಲೆ ಕುಸಿತ ತಡೆಯುವುದಾಗಿದ್ದು, ತಾವೇ ಸೃಷ್ಟಿಸಿದ ಅವ್ಯವಸ್ಥೆಯಿಂದ ಹೊರಬರಲು ಯತ್ನಿಸುತ್ತಿದ್ದಾರೆ’ ಎಂದು ಅಸಾದಿ ಹೇಳಿದರು. ಮುಂದುವರೆದು, ‘ಇರಾನ್‌ ಯುದ್ಧಕ್ಕೆ ಸದಾ ಸಿದ್ಧವಾಗಿದೆ’ ಎಂದರು.

==

ಹುಚ್ಚರಿಗೆ ಅಣ್ವಸ್ತ್ರ ಸಿಗದಿರಲೆಂದು ಇರಾನ್‌ ವಿರುದ್ಧ ಯುದ್ಧ: ಟ್ರಂಪ್‌

ವಾಷಿಂಗ್ಟನ್‌: ಕದನವಿರಾಮದೊಂದಿಗೆ ಇರಾನ್‌ ವಿರುದ್ಧದ ಯುದ್ಧ ನಿಂತಿದೆ ಎಂದು ಸರ್ಕಾರ ಅಲ್ಲಿನ ಸಂಸತ್ತಿನಲ್ಲಿ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಹುಚ್ಚರ ಕೈಗೆ ಅಣ್ವಸ್ತ್ರ ಸಿಗದೇ ಇರಲಿ ಎಂದು ನಾವು ಅವರ ಮೇಲೆ ಆಕ್ರಮಣ ಮಾಡಿದೆವು’ ಎಂದು ಹೇಳಿದ್ದಾರೆ.‘ನಮ್ಮ ಆಕ್ರಮಣವು, ಅಣುಶಕ್ತ ಆಗಹೊರಟಿದ್ದ ಇರಾನ್‌ನಿಂದ ಮಧ್ಯಪ್ರಾಚ್ಯವನ್ನು ರಕ್ಷಿಸಿದೆ. ನಾವು ಹಾಗೆ ಮಾಡದಿದ್ದರೆ ಅವರ ಕೈಗೆ ಅಣ್ವಸ್ತ್ರ ಸಿಕ್ಕಿ ಇಸ್ರೇಲ್‌, ಮಧ್ಯಪ್ರಾಚ್ಯ, ಯುರೋಪ್‌ ಧೂಳೀಪಟವಾಗುತ್ತಿದ್ದವು. ಆದರೆ ಈಗ ಇರಾನ್‌ ಬಳಿ ನೌಕಾಪಡೆ, ವಾಯುಪಡೆ, ವಾಯುದಾಳಿ ತಡೆವ ಸಾಧನ, ರಾಡಾರ್‌, ಉನ್ನತ ನಾಯಕತ್ವ ಉಳಿದೇ ಇಲ್ಲ. ಇನ್ನು ಮೂರು ವರ್ಷ ಯಾವುದೇ ಸಮಸ್ಯೆಯಾಗದು’ ಎಂದು ಟ್ರಂಪ್‌ ಹೇಳಿದ್ದಾರೆ. ಜತೆಗೆ, ‘ಇರಾನ್‌ನವರಿಗೆ ಒಪ್ಪಂದ ಮಾಡಿಕೊಳ್ಳುವ ಮನಸ್ಸಿದೆ. ಆದರೆ ಅಲ್ಲಿ ಎಲ್ಲವೂ ಗೊಂದಲಮಯವಾಗಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪ್ರಸಾರ ಭಾರತಿ ಮುಖ್ಯಸ್ಥ ಹುದ್ದೆಗೆ ಪ್ರಸೂನ್‌ ಜೋಶಿ
ಸಿಎಂ ಮಮತಾಗೆ ಸುಪ್ರೀಂನಲ್ಲಿ ಹಿನ್ನಡೆ