ಪಹಲ್ಗಾಂ ದಾಳಿಯಲ್ಲಿ ಮುಸ್ಲಿಂ ವ್ಯಕ್ತಿ ಬಲಿ : ಉಗ್ರರ ಗನ್‌ ಕಸಿಯಲು ಯತ್ನಿಸಿದ ಆದಿಲ್‌ ಹತ್ಯೆ

KannadaprabhaNewsNetwork |  
Published : Apr 24, 2025, 02:05 AM ISTUpdated : Apr 24, 2025, 04:25 AM IST
ಅದಿಲ್  | Kannada Prabha

ಸಾರಾಂಶ

ಹಲ್ಗಾಂ ಉಗ್ರ ದಾಳಿಯಲ್ಲಿ ಹತರಾದ 26 ಜನರಲ್ಲಿ ಏಕೈಕ ಮುಸ್ಲಿಂ ವ್ಯಕ್ತಿಯೆಂದರೆ ಕುದುರೆ ಸವಾರ ಆದಿಲ್‌ ಹುಸೇನ್‌. ಉಗ್ರರ ಬಂದೂಕನ್ನು ಕಸಿದುಕೊಳ್ಳಲು ಇವರು ಯತ್ನಿಸಿದಾಗ ಆತನನ್ನು ಉಗ್ರರು ಹೊಡೆದುರುಳಿಸಿದ್ದಾರೆ.

 ಶ್ರೀನಗರ: ಪಹಲ್ಗಾಂ ಉಗ್ರ ದಾಳಿಯಲ್ಲಿ ಹತರಾದ 26 ಜನರಲ್ಲಿ ಏಕೈಕ ಮುಸ್ಲಿಂ ವ್ಯಕ್ತಿಯೆಂದರೆ ಕುದುರೆ ಸವಾರ ಆದಿಲ್‌ ಹುಸೇನ್‌. ಉಗ್ರರ ಬಂದೂಕನ್ನು ಕಸಿದುಕೊಳ್ಳಲು ಇವರು ಯತ್ನಿಸಿದಾಗ ಆತನನ್ನು ಉಗ್ರರು ಹೊಡೆದುರುಳಿಸಿದ್ದಾರೆ.

ಪಹಲ್ಗಾಂನ ಬೈಸರನ್‌ಗೆ ವಾಹನ ಸಂಚಾರ ಅಸಾಧ್ಯ ಕಾರಣ ಈತ ಕುದುರೆಗಳ ಮೂಲಕ ಪ್ರವಾಸಿಗರನ್ನು ಕರೆತರುತ್ತಿದ್ದ. ಆಗ ಈ ಘಟನೆ ನಡೆದಿದೆ.

ಬುಧವಾರ ನಡೆದ ಈತನ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರು ಭಾಗಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಓಮರ್‌, ‘ಆದಿಲ್‌ ಅವರು ದಾಳಿಯನ್ನು ತಡೆಯಲು ಉಗ್ರನಿಂದ ಬಂದೂಕು ಕಸಿದುಕೊಳ್ಳಲು ಯತ್ನಿಸಿದರು. ಈ ಕಾರಣಕ್ಕೆ ಆದಿಲ್‌ರನ್ನು ಉಗ್ರರು ಕೊಂದರು. ಇವರ ಕುಟುಂಬಕ್ಕೆ ಎಲ್ಲಾ ಸಹಾಯಗಳನ್ನು ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

ಪಹಲ್ಗಾಂ ದಾಳಿ ಬಳಿಕ ಪಾಕ್‌ಗೆ ಧನ್ಯವಾದ: ಜಾರ್ಖಂಡ್‌ ವ್ಯಕ್ತಿ ಸೆರೆ

ಬೊಕಾರೋ (ಜಾರ್ಖಂಡ್‌): ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರದಾಳಿಯನ್ನು ಸಂಭ್ರಮಿಸಿ, ಪಾಕಿಸ್ತಾನ ಮತ್ತು ಲಷ್ಕರ್‌ ಸಂಘಟನೆಗೆ ಶುಭಾಶಯ ಕೋರಿದ್ದಕ್ಕಾಗಿ ಜಾರ್ಖಂಡ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಎಂಡಿ ನೌಶದ್‌, ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಧನ್ಯವಾದಗಳು ಪಾಕಿಸ್ತಾನ ಮತ್ತು ಲಷ್ಕರ್‌ ಇ ತೊಯ್ಬಾ. ಅಲ್ಲಾ ನಿಮಗೆ ಎಂದಿಗೂ ಒಳ್ಳೆಯದನ್ನು ಮಾಡಲಿ. ಇನ್‌ಷಾಲ್ಲಾ. ಆರ್‌ಎಸ್‌ಎಸ್‌, ಬಜರಂಗದಳ, ಬಿಜೆಪಿ ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿದರೆ ನಮಗೆ ಹೆಚ್ಚೆಚ್ಚು ಸಂತಸವಾಗುತ್ತದೆ’ ಎಂದು ಬರೆದಿದ್ದ. ಈತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ವಾಯುಸೀಮೆ ಬಳಸದ ಪ್ರಧಾನಿ ಮೋದಿ ವಿಮಾನ

ನವದೆಹಲಿ: ಜಮ್ಮು ಕಾಶ್ಮೀರದ ಉಗ್ರ ದಾಳಿ ವೇಳೆ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದ ಹಿಂತಿರುಗುವಾದ ಪಾಕಿಸ್ತಾನದ ವಾಯುಸೀಮೆ ಬಳಸದೇ ಅರಬ್ಬಿ ಸಮುದ್ರದ ಮೇಲೆ ಬಂದು ಭಾರತ ಪ್ರವೇಶಿಸಿದ್ದಾರೆ.ದಾಳಿಗೂ ಮುನ್ನ ಸೌದಿಗೆ ತೆರಳುವಾಗ ಪ್ರಧಾನಿ ಮೋದಿ ಅವರ ಬೋಯಿಂಗ್‌ 777 ವಿಮಾನವು ಪಾಕಿಸ್ತಾನ ವಾಯುಸೀಮೆ ಪ್ರವೇಶಿಸಿ ಸೌದಿಗೆ ತೆರಳಿತ್ತು. ಆದರೆ ಸೌದಿ ಪ್ರವಾಸ ಅರ್ಧದಲ್ಲಿ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗುವಾಗ ಪಾಕ್‌ ಮೇಲೆ ಹಾರಾಡದೇ ಭಾರತಕ್ಕೆ ಬಂದಿದ್ದಾರೆ.

ಅಮಿತ್ ಶಾ ರಾಜೀನಾಮೆಗೆ ಶಿವಸೇನೆ ಠಾಕ್ರೆ ಬಣ ಆಗ್ರಹ

ಮುಂಬೈ: ‘ಪಹಲ್ಗಾಂನಲ್ಲಿ 26 ಪ್ರವಾಸಿಗರ ಸಾವಿಗೆ ಬಿಜೆಪಿಯ ದ್ವೇಷದ ರಾಜಕೀಯ ಕಾರಣ. ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ ವಿಫಲರಾಗಿದ್ದು, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಶಿವಸೇನೆ (ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಅಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ರಾವುತ್, ‘ಸಾಯಿಸುವ ಮುನ್ನ ಉಗ್ರರು ಧರ್ಮ ಯಾವುದು ಎಂದು ಕೇಳಿದರೆ ಇದಕ್ಕೆ ಬಿಜೆಪಿಯ ದ್ವೇಷದ ರಾಜಕಾರಣವೇ ಕಾರಣ. ಇದಕ್ಕೆ ಬೇರೆ ಯಾರು ಹೊಣೆ ಅಲ್ಲ. ಇದು ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಹರಡುತ್ತಿರುವ ದ್ವೇಷ ರಾಜಕಾರಣದ ಫಲಿತಾಂಶ’ ಎಂದರು. 

ಜತೆಗೆ , ‘ದೇಶದ ಇತಿಹಾಸದಲ್ಲಿಯೇ ಅಮಿತ್ ಶಾ ವಿಫಲ ಗೃಹಮಂತ್ರಿ. ಇಡೀ ದೇಶ ಅವರ ರಾಜೀನಾಮೆ ಬಯಸುತ್ತಿದೆ. ಅವರಿಗೆ ಒಂದು ದಿನವೂ ಈ ಹುದ್ದೆಯನ್ನು ಅಲಂಕರಿಸುವ ಹಕ್ಕಿಲ್ಲ’ ಎಂದರು.

ಬಿಹಾರದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ರಾಜಕೀಯ ಮಾಡುತ್ತಿದೆ ಎಂದು ಇದೇ ವೇಳೆ ರಾವುತ್ ಆರೋಪಿಸಿದರು.

ಶಾ ಜತೆ ಖರ್ಗೆ, ರಾಗಾ ಚರ್ಚೆ: ಪಹಲ್ಗಾಂ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹ

ನವದೆಹಲಿ: ಪಹಲ್ಗಾಂ ದುರಂತದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಜತೆ ಮಾತುಕತೆ ನಡೆಸಿ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು.ಶಾ ಜತೆಗಿನ ಮಾತುಕತೆ ಬಳಿಕ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಖರ್ಗೆ, ‘ಈ ಘೋರ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಬಲಿಪಶುಗಳಿಗೆ ನ್ಯಾಯ ಸಿಗಬೇಕು. ಗಡಿಯಾಚೆಗಿನ ಭಯೋತ್ಪಾದಕ ದಾಳಿಗೆ ಸಮರ್ಪಕ ಉತ್ತರ ನೀಡಬೇಕು’ ಎಂದಿದ್ದಾರೆ.ರಾಹುಲ್ ಗಾಂಧಿ ಕೂಡ ಎಕ್ಸ್‌ ಮುಖೇನ ಪ್ರತಿಕ್ರಿಯಿಸಿದ್ದು, ‘ಉಗ್ರರ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿದೆ. ಪರಿಸ್ಥಿತಿ ಸಹಜವಾಗಿದೆ ಎನ್ನುವ ಪೊಳ್ಳು ಹೇಳಿಕೆ ಬದಲು ಸರ್ಕಾರ ಇದರ ಹೊಣೆ ತೆಗೆದುಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ