ಪಾಕಿಸ್ತಾನದಲ್ಲಿ ಅಮೆರಿಕ- ಇರಾನ್‌ ಚರ್ಚೆ

KannadaprabhaNewsNetwork |  
Published : Apr 12, 2026, 02:00 AM ISTUpdated : Apr 12, 2026, 06:41 AM IST
Iran

ಸಾರಾಂಶ

ಮಧ್ಯಪ್ರಾಚ್ಯ ಹಾಗೂ ಗಲ್ಫ್‌ನಲ್ಲಿ ಯುದ್ಧವನ್ನು ತಣಿಸಲು ಇರಾನ್ ಮತ್ತು ಅಮೆರಿಕ ನಡುವೆ ಶನಿವಾರ ಮಾತುಕತೆಗಳು ಆರಂಭವಾಗಿವೆ. 1979ರ ಇರಾನ್ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಅತ್ಯುನ್ನತ ಮಟ್ಟದ ನೇರ ಮಾತುಕತೆ ನಡೆಯುತ್ತಿರುವುದು ಇದೇ ಮೊದಲು

  ಇಸ್ಲಾಮಾಬಾದ್/ಲಾಹೋರ್ : ಮಧ್ಯಪ್ರಾಚ್ಯ ಹಾಗೂ ಗಲ್ಫ್‌ನಲ್ಲಿ ಯುದ್ಧವನ್ನು ತಣಿಸಲು ಇರಾನ್ ಮತ್ತು ಅಮೆರಿಕ ನಡುವೆ ಶನಿವಾರ ಮಾತುಕತೆಗಳು ಆರಂಭವಾಗಿವೆ. 1979ರ ಇರಾನ್ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವೆ ಅತ್ಯುನ್ನತ ಮಟ್ಟದ ನೇರ ಮಾತುಕತೆ ನಡೆಯುತ್ತಿರುವುದು ಇದೇ ಮೊದಲು. ಈ ಸಂವಾದವನ್ನು ಕದನ ವಿರಾಮವನ್ನು ಜಾರಿಗೆ ತರುವತ್ತ ಒಂದು ಹೆಜ್ಜೆಯಾಗಿ ನೋಡಲಾಗುತ್ತಿದೆ.

ಭಾರೀ ಭದ್ರತಾ ವ್ಯವಸ್ಥೆಯಲ್ಲಿರುವ ಸೆರೆನಾ ಹೋಟೆಲ್‌ನಲ್ಲಿ ಮಾತುಕತೆ ಸುಮಾರು 5 ತಾಸು ವಿಳಂಬವಾಗಿ ಆರಂಭವಾಯಿತು. ಇದಕ್ಕೆ ಕಾರಣ ಪಾಕಿಸ್ತಾನ ಹಾಗೂ ಅಮೆರಿಕಗಳು ನೇರ ಮಾತುಕತೆ ಆರಂಭಿಸಲು ಹಲವು ಷರತ್ತು-ಪ್ರತಿಷರತ್ತುಗಳು.

ಹೀಗಾಗಿ ಮೊದಲು ನೇರ ಮಾತುಕತೆ ಆರಂಭವಾಗಲಿಲ್ಲ. ಪಾಕಿಸ್ತಾನಿ ಅಧಿಕಾರಿಗಳ ಮೂಲಕ ಸಂದೇಶಗಳ ವಿನಿಮಯದೊಂದಿಗೆ ಮಾತುಕತೆ ಶುರುವಾಯಿತು. ಪ್ರತ್ಯೇಕ ಕೋಣೆಗಳಲ್ಲಿ ಕುಳಿತಿದ್ದ ಅಮೆರಿಕ ಹಾಗೂ ಇರಾನ್‌ ನಿಯೋಗಗಳ ಮಧ್ಯೆ ಪಾಕ್ ಅಧಿಕಾರಿಗಳು ವಿಷಯ ವಿನಿಮಯ ಮಾಡಿದರು.ಈ ವೇಳೆ ಸಕಾರಾತ್ಮಕತೆ ವ್ಯಕ್ತವಾದ ಕಾರಣ ಸಂಜೆ ನೇರ ಮಾತುಕತೆ ಆರಂಭವಾಯಿತು. ಮೊದಲ ಹಂತದ ಮಾತುಕತೆ 2 ತಾಸು ನಡೆಯಿತು. ರಾತ್ರಿ ಭೋಜನ ವಿರಾಮದ ನಂತರ 2ನೇ ಸುತ್ತಿನ ಮಾತುಕತೆಯೂ ನಡೆಯಿತು. ಭಾನುವಾರ ಕೂಡ ಚರ್ಚೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ, ಹೋರ್ಮುಜ್‌ ಬಿಕ್ಕಟ್ಟು ಹೊರತುಪಡಿಸಿ ಮಿಕ್ಕ ಮಾತುಕತೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿವೆ. ಲೆಬನಾನ್‌ ಬಿಕ್ಕಟ್ಟು ಸೇರಿ ಹಲವು ವಿಷಯಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಮಾತುಕತೆಗೂ ಮುನ್ನ ಕತಾರ್‌ ಸೇರಿ ವಿವಿಧ ಗಲ್ಫ್‌ ದೇಶಗಳಲ್ಲಿ ಇರಾನ್‌ನ ಬ್ಯಾಂಕ್‌ ಖಾತೆ ಸೇರಿ ವಿವಿಧ ಮೇಲೆ ಹಾಕಿದ್ದ ನಿರ್ಬಂಧ ಸಡಿಲಿಸಲು ಅಮೆರಿಕ ಒಪ್ಪಿದೆ ಎಂದು ಅವು ಹೇಳಿವೆ.

ಹೋರ್ಮುಜ್‌ ಬಿಕ್ಕಟ್ಟು:

ಅಮೆರಿಕ ಆಗ್ರಹಿಸಿದಂತೆ ಹೋರ್ಮುಜ್‌ ಜಲಸಂಧಿಯನ್ನು ಜಂಟಿಯಾಗಿ ನಿಯಂತ್ರಿಸಲು ಇರಾನ್‌ ಒಪ್ಪಿಲ್ಲ. ಇದು ಬಿಕ್ಕಟ್ಟಿಗೆ ಕಾರಣ ವಾಗಿದೆ. ಈ ಬಗ್ಗೆ ಮಾತುಕತೆ ಮುಂದುವರಿದಿವೆ.

ನಿಯೋಗದಲ್ಲಿ ಯಾರು?:

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸ್ಪೀಕರ್ ಮೊಹಮ್ಮದ್ ಬಕೀರ್ ಗಾಲಿಬಾಫ್ ಇರಾನಿನ ನಿಯೋಗದ ನೇತೃತ್ವ ವಹಿಸಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಅಮೆರಿಕ ನಿಯೋಗದಲ್ಲಿದ್ದಾರೆ.

ಪಾಕ್‌ ಮಧ್ಯಸ್ಥಿಕೆಯಲ್ಲಿ ಪ್ರತ್ಯೇಕ ಸಭೆಗಳು:

ದ್ವಿಪಕ್ಷೀಯ ಮಾತುಕತೆಗೂ ಮೊದಲು ಎರಡೂ ನಿಯೋಗಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಪ್ರಧಾನಿ ಶೆಹಬಾಜ್ ಷರೀಫ್ ನಡೆಸಿದರು ಹಾಗೂ ಪಶ್ಚಿಮ ಏಷ್ಯಾದಲ್ಲಿ ‘ಶಾಶ್ವತ ಶಾಂತಿ’ ನೆಲೆಸಬೇಕೆಂಬ ಪಾಕಿಸ್ತಾನದ ಬಯಕೆಯನ್ನು ಪುನರುಚ್ಚರಿಸಿದರು ಮತ್ತು ಸಂವಾದವನ್ನು ಸುಗಮಗೊಳಿಸುವ ಇಸ್ಲಾಮಾಬಾದ್‌ನ ಬದ್ಧತೆಯನ್ನು ದೃಢಪಡಿಸಿದರು.

ಪಾಕ್‌ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ರಜಾ ನಖ್ವಿ ಅವರು ಸಂವಾದದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫೆ.28 ರಂದು ಇರಾನ್‌ ಹಾಗೂ ಅಮೆರಿಕ-ಇಸ್ರೇಲ್‌ ನಡುವೆ ಸಮರ ಆರಂಭವಾಗಿತ್ತು. ಏಪ್ರಿಲ್ 8 ರಂದು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಕದನ ವಿರಾಮದ ನಂತರ ಯುದ್ಧ ಕೊಂಚ ತಣ್ಣಗಾಗಿದೆ.

ಹೋರ್ಮುಜ್‌ನಲ್ಲಿ ಅಡಗಿಸಿದ್ದ ಬಾಂಬ್‌ ಇರಾನ್‌ ಕೈಗೆ ಸಿಕ್ತಿಲ್ಲ- ಹೀಗಾಗಿ ಜಲಸಂಧಿ ಆರಂಭಕ್ಕೆ ಹೊಸ ಅಡ್ಡಿ

ಟೆಹ್ರಾನ್‌: ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಹೋರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರ ತಡೆಯುವ ಉದ್ದೇಶದಿಂದ ತಾನೇ ಅಳವಡಿಸಿದ್ದ ಜಲಸ್ಫೋಟಕ ಪತ್ತೆಹಚ್ಚಲು ಸಾಧ್ಯವಾಗದ ಸ್ಥಿತಿಗೆ ಇದೀಗ ತಲುಪಿದೆ. ಇದೇ ಕಾರಣಕ್ಕೆ ಹೋರ್ಮುಜ್‌ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲು ಪರದಾಡುತ್ತಿದೆ.==

ಮಾತುಕತೆ ವಿಫಲವಾದ್ರೆ ಕಠೋರ ದಾಳಿ: ಟ್ರಂಪ್‌- ಇರಾನ್‌ ವಿಫಲ ದೇಶ ಎಂದು ಕುಟುಕುವಾಷಿಂಗ್ಟನ್‌: ಪಾಕಿಸ್ತಾನದಲ್ಲಿ ಸಂಧಾನ ಮಾತುಕತೆ ಆರಂಭವಾದ ಬೆನ್ನಲ್ಲೇ ಮತ್ತೆ ಇರಾನ್‌ಗೆ ಎಚ್ಚರಿಕೆ ಸಂದೇಶ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ‘ಮಾತುಕತೆಗಳು ಆರಂಭವಾಗಿವೆ, ಆದರೆ ಇದು ಹೇಗೆ ಮುಂದುವರಿಯುತ್ತದೆ ಎಂದು ಗೊತ್ತಿಲ್ಲ. ಮಾತುಕತೆಗಳು ವಿಫಲವಾದರೆ ಯುದ್ಧವನ್ನು ಪುನರಾರಂಭ ಮಾಡುತ್ತೇವೆ.’ ಎಂದು ಗುಡುಗಿದ್ದಾರೆ.

ಅಮೆರಿಕ ಪರ ವ್ಯಾನ್ಸ್‌ ಪಡೆ

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಧ್ಯಕ್ಷ ಟ್ರಂಪ್‌ರ ಅಳಿಯ ಜೇರೆಡ್ ಕುಶ್ನರ್, ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ನಿಯೋಗದಲ್ಲಿದ್ದಾರೆ

ಇರಾನ್‌ ಪರ ಅರಾಗ್ಚಿ ಸೇನೆ

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹಾಗೂ ಸ್ಪೀಕರ್ ಮೊಹಮ್ಮದ್ ಬಕೀರ್ ಗಾಲಿಬಾಫ್ ಇರಾನಿನ ನಿಯೋಗದ ನೇತೃತ್ವ ವಹಿಸಿದ್ದಾರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾಡಾನೆ ಜೊತೆ ಓಡಿಹೋದ ಕರ್ನಾಟಕದ 2 ಹೆಣ್ಣಾನೆಗಳು!
ಮೋದಿ ಕರೆಗೆ ಓಗೊಟ್ಟು ಸಾಮೂಹಿಕ ವಿವಾಹದಲ್ಲಿ ಬಿಜೆಪಿ ಶಾಸಕನ ಮದ್ವೆ!