ಮತ್ತೆ ಸಂಪುಟ ಪುನಾರಚನೆ ಕಸರತ್ತು ಆರಂಭ

KannadaprabhaNewsNetwork |  
Published : Apr 12, 2026, 01:15 AM ISTUpdated : Apr 12, 2026, 06:48 AM IST
Congress

ಸಾರಾಂಶ

 ರಾಜ್ಯ  ಸಚಿವ ಸಂಪುಟ ಪುನಾರಚನೆ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಸರ್ಕಾರ 3ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆ  ಶೀಘ್ರ ಸಂಪುಟ ಪುನಾರಚನೆ ನಡೆಸುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು 25 ಶಾಸಕರ ತಂಡ   ದೆಹಲಿಗೆ ತೆರಳಲಿದೆ.

  ಬೆಂಗಳೂರು : ಉಪ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಸಂಪುಟ ಪುನಾರಚನೆ ನಡೆಸುವಂತೆ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು ಸುಮಾರು 25 ಶಾಸಕರ ತಂಡ ಭಾನುವಾರ ದೆಹಲಿಗೆ ತೆರಳಲಿದೆ.

ರಾಮದುರ್ಗ ಶಾಸಕ ಅಶೋಕ್‌ ಪಟ್ಟಣ್ ನೇತೃತ್ವದಲ್ಲಿ ಸುಮಾರು 25 ಶಾಸಕರ ತಂಡ ಭಾನುವಾರ ಸಂಜೆ ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಲಿದ್ದಾರೆ.ಇದೇ ವೇಳೆ ತಂಡವೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭೇಟಿಗೂ ಪ್ರಯತ್ನಿಸಲಿದ್ದು, ಅವಕಾಶ ದೊರೆತರೆ ಸಂಪುಟ ಪುನಾರಚನೆಗೆ ನಿರ್ದೇಶನ ನೀಡುವಂತೆ ರಾಹುಲ್‌ ಅವರನ್ನು ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಪುಟ್ಟರಂಗಶೆಟ್ಟಿ, ಸುಬ್ಬಾರೆಡ್ಡಿ. ಶಾಂತನಗೌಡ, ಜಿ.ಟಿ.ಪಾಟೀಲ್‌, ಕೃಷ್ಣಮೂರ್ತಿ, ಜಿ.ಎನ್‌. ಪಾಟೀಲ್‌, ಯಶವಂತ ರಾಯಗೌಡ, ಷಡಕ್ಷರಿ, ನಾರಾಯಣಸ್ವಾಮಿ, ಅಪ್ಪಾಜಿ ನಾಡಗೌಡ, ಲಕ್ಷ್ಮಣ ಸವದಿ, ಪ್ರಿಯಕೃಷ್ಣ, ಬಿ.ಆರ್‌. ಪಾಟೀಲ್‌, ವಿನಯ್‌ ಕುಲಕರ್ಣಿ, ರಿಜ್ವಾನ್ ಅರ್ಷದ್ ಸೇರಿ ಸುಮಾರು 25 ಶಾಸಕರು ಭಾನುವಾರ ಸಂಜೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಮಾಡಲಿದ್ದಾರೆಂದು ತಿಳಿದು ಬಂದಿದೆ.ತೀವ್ರ ಒತ್ತಡ:

ಸಂಪುಟ ಪುನಾರಚನೆ ಮಾಡುವಂತೆ ಪಕ್ಷದಲ್ಲಿ ತೀವ್ರ ಒತ್ತಡವಿದ್ದು, ಹಿರಿಯ ಸದಸ್ಯರು ಸೇರಿ ವಿಧಾನ ಪರಿಷತ್‌ ಸದಸ್ಯರು, ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತ್ಯೇಕ ಸಭೆ ಮಾಡಿ ಸಂಪುಟ ಪುನಾರಚನೆ ಮಾಡಿ ತಮಗೆ ಸ್ಥಾನ ನೀಡಬೇಕೆಂದು ಹಲವು ಬಾರಿ ಮನವಿ ಮಾಡುತ್ತಾ ಬಂದಿದ್ದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು ಸೇರಿ ವಿವಿಧ ಕಾರಣಗಳಿಂದ ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಹೈಕಮಾಂಡ್‌ ಮುಂದೂಡುತ್ತಾ ಬಂದಿದೆ. 

ಈಗ ಮುಂಬರುವ ಪಂಚಾಯಿತಿ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಮುನ್ನ ಸಂಪುಟ ಪುನಾರಚನೆ ಮಾಡುವಂತೆ ಒತ್ತಡ ಹೇರಲು ಶಾಸಕರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಹೈಕಮಾಂಡ್‌ ಒಪ್ಪಿದರೆ ಸಂಪುಟ ಪುನಾರಚನೆಗೆ ಸಿದ್ಧ ಎಂದು ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಸಂಪುಟ ಪುನಾರಚನೆ ಕೂಗು ಇನ್ನಷ್ಟು ಜೋರಾಗಲಿದೆ.

ನಿಯೋಗದಲ್ಲಿ ಯಾರ್‍ಯಾರು?

ಅಶೋಕ್‌ ಪಟ್ಟಣ್, ಪುಟ್ಟರಂಗಶೆಟ್ಟಿ, ಸುಬ್ಬಾರೆಡ್ಡಿ. ಶಾಂತನಗೌಡ, ಜಿ.ಟಿ.ಪಾಟೀಲ್‌, ಕೃಷ್ಣಮೂರ್ತಿ, ಜಿ.ಎನ್‌. ಪಾಟೀಲ್‌, ಯಶವಂತ ರಾಯಗೌಡ, ಷಡಕ್ಷರಿ, ನಾರಾಯಣಸ್ವಾಮಿ, ಅಪ್ಪಾಜಿ ನಾಡಗೌಡ, ಲಕ್ಷ್ಮಣ ಸವದಿ, ಪ್ರಿಯಕೃಷ್ಣ, ಬಿ.ಆರ್‌. ಪಾಟೀಲ್‌, ವಿನಯ್‌ ಕುಲಕರ್ಣಿ, ರಿಜ್ವಾನ್ ಅರ್ಷದ್‌ ಮೊದಲಾದವರು

ಶಾಸಕರ ಬೇಡಿಕೆ ಏನು?

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ತುಂಬುತ್ತಾ ಬಂದಿದೆ. ಇದು ಪುನಾರಚನೆಗೆ ಸಕಾಲ

ವಿಧಾನಸಭೆ, ಪರಿಷತ್‌ನಲ್ಲಿ ಹಲವು ಹಿರಿಯ, ಯುವ ಶಾಸಕರು ಸಚಿವ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ

ಮುಂದಿನ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಹೊಸಬರಿಗೂ ಅವಕಾಶ ಸೂಕ್ತ

ಹೈಕಮಾಂಡ್‌ ಒಪ್ಪಿದರೆ ಸಂಪುಟ ಪುನಾರಚನೆಗೆ ತಾವು ಸಿದ್ಧ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ

ಹೀಗಾಗಿ ಸಂಪುಟ ಪುನಾರಚನೆಗೆ ಕ್ರಮ ಕೈಗೊಳ್ಳಲು ಸಿಎಂಗೆ ಸೂಚಿಸಿ ಎಂದು ಹೈಕಮಾಂಡ್‌ಗೆ ಮೊರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾಡಾನೆ ಜೊತೆ ಓಡಿಹೋದ ಕರ್ನಾಟಕದ 2 ಹೆಣ್ಣಾನೆಗಳು!
ಮೋದಿ ಕರೆಗೆ ಓಗೊಟ್ಟು ಸಾಮೂಹಿಕ ವಿವಾಹದಲ್ಲಿ ಬಿಜೆಪಿ ಶಾಸಕನ ಮದ್ವೆ!