ಕುಂಭ ಬೆಡಗಿ ಮೊನಾಲಿಸಾ ಅಪ್ರಾಪ್ತೆ : ಪತಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲು

KannadaprabhaNewsNetwork |  
Published : Apr 11, 2026, 03:00 AM ISTUpdated : Apr 11, 2026, 06:04 AM IST
Monalisa

ಸಾರಾಂಶ

ಇತ್ತೀಚಿಗೆ ವಿವಾಹ ಮೂಲಕ ಮತ್ತೊಮ್ಮೆ ವೈರಲ್‌ ಆದ ಮಹಾ ಕುಂಭಮೇಳದ ರುದ್ರಾಕ್ಷಿ ಕನ್ಯೆ ಮೊನಾಲಿಸಾ ಅಪ್ರಾಪ್ತೆ ಎಂದು ದೃಢಪಟ್ಟಿದ್ದು ಪತಿ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಖಾರ್ಗೋನ್ (ಮಧ್ಯಪ್ರದೇಶ): ಇತ್ತೀಚಿಗೆ ವಿವಾಹ ಮೂಲಕ ಮತ್ತೊಮ್ಮೆ ವೈರಲ್‌ ಆದ ಮಹಾ ಕುಂಭಮೇಳದ ರುದ್ರಾಕ್ಷಿ ಕನ್ಯೆ ಮೊನಾಲಿಸಾ ಅಪ್ರಾಪ್ತೆ ಎಂದು ದೃಢಪಟ್ಟಿದ್ದು ಪತಿ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. 

 ಕಳೆದ ಮಾ.11ಕ್ಕೆ ಮುಸ್ಲಿಂ ವ್ಯಕ್ತಿ ಫರ್ಮಾನ್ ಅವರನ್ನು ವಿವಾಹವಾಗಿದ್ದ ಮೊನಾಲಿಸಾ ಆ ಸಮಯ ಅಪ್ರಾಪ್ತೆಯಾಗಿದ್ದಾಳೆ ಎಂದು ಅಧಿಕೃತ ಆಸ್ಪತ್ರೆ ದಾಖಲೆಗಳ ಉಲ್ಲೇಖಿಸಿ ಪರಿಶಿಷ್ಟ ವರ್ಗದ ರಾಷ್ಟ್ರೀಯ ಆಯೋಗ ಹೇಳಿದೆ. 2009ರ ಡಿ.30ಕ್ಕೆ ಜನಿಸಿರುವ ಮೊನಾಲಿಸಾ ವಯಸ್ಸು ವಿವಾಹ ವೇಳೆ 16 ವರ್ಷ, 2 ತಿಂಗಳು, 12 ದಿನವಾಗುತ್ತದೆ ಎಂದು ಆಯೋಗ ಹೇಳಿದೆ.  

ಖಾರ್ಗೋನ್‌ ಪೊಲೀಸರು ಮೊನಾಲಿಸಾ ವಿವಾಹ ನಡೆದ ಕೇರಳದ ನೈನಾರ್ ದೇವ ದೇವಾಲಯದಲ್ಲಿ ತನಿಖೆ ನಡೆಸಿದ ನಂತರ ವಿವಾಹದಲ್ಲಿ ವಂಚನೆಯಾಗಿರುವುದು ಪತ್ತೆಯಾಗಿದೆ.

ನಮಾಜ್‌ ಸಮಯ ತಪ್ಪಿಸಿ ಸಿಂದೂರ ದಾಳಿ: ದ್ವಿವೇದಿ 

ನವದೆಹಲಿ: ‘ಆಪರೇಷನ್‌ ಸಿಂದೂರದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರ ನಮಾಜ್‌ ಸಮಯವನ್ನು ತಪ್ಪಿಸಿ ಪಾಕಿಸ್ತಾನದ ಭಯೋತ್ಪಾದಕರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು’ ಎಂದು ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು , ‘ಆಪರೇಷನ್‌ ಸಿಂದೂರವನ್ನು ನಿಖರವಾಗಿ ಮಾತ್ರವಲ್ಲ. ಎಚ್ಚರಿಕೆಯಿಂದ ಮಾಡಲಾಗಿತ್ತು. ಭಯೋತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸುವಾಗ ನಮಾಜ್‌ ಸಮಯವನ್ನು ಪರಿಗಣಿಸಲಾಗಿತ್ತು. 

ಏಕೆಂದರೆ ನಾವು ದಾಳಿ ಮಾಡುವ ವೇಳೆ ಭಯೋತ್ಪಾದಕ ತಾಣಗಳಾಗಿ ಬಳಸುತ್ತಿದ್ದ ಕೆಲವೊಂದು ಮಸೀದಿಗಳಲ್ಲಿ ನಿತ್ಯವೂ ಜನರು ಪ್ರಾರ್ಥನೆ ಮಾಡುತ್ತಿದ್ದರು. ಹೀಗಾಗಿ ನಾವು ಆ ಸಮಯವನ್ನು ಪರಿಗಣಿಸಿ ದಾಳಿ ನಡೆಸಿದೆವು’ ಎಂದಿದ್ದಾರೆ. ಜೊತೆಗೆ ‘ಎಲ್ಲರಿಗೂ ಒಬ್ಬನೇ ದೇವರು. ಹಾಗಾಗಿ ಅಂತಹ ಪ್ರಾರ್ಥನೆಗಳು ನಡೆಯುತ್ತಿಲ್ಲ ಎನ್ನುವ ಸಮಯವನ್ನು ಖಚಿತಪಡಿಸಿಕೊಂಡು ದಾಳಿ ನಡೆಸಲಾಗಿತ್ತು’ ಎಂದು ಹೇಳಿದ್ದಾರೆ.

ಅಸ್ಸಾಂ ಸಿಎಂ ಪತ್ನಿ ವಿರುದ್ಧದ ಆರೋಪ: ಖೇರಾಗೆ ಕಡೆಗೂ ಬೇಲ್‌

ಹೈದರಾಬಾದ್‌: ಕಾಂಗ್ರೆಸ್‌ ಹಿರಿಯ ನಾಯಕ ಪವನ್‌ ಖೇರಾ ವಿರುದ್ಧ ಅಸ್ಸಾಂ ಸರ್ಕಾರ ದಾಖಲಿಸಿದ್ದ ಪ್ರಕರಣದಲ್ಲಿ ಖೇರಾಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯ ಮೆಟ್ಟಿಲೇರಿದ್ದ ಅವರಿಗೆ ತೆಲಂಗಾಣ ಹೈಕೋರ್ಟ್‌ 1 ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದೇ ತಿಂಗಳ 5 ರಂದು ಖೇರಾ ಅಸ್ಸಾಂ ಸಿಎಂ, ಹಿಮಂತ ಬಿಸ್ವಾ ಶರ್ಮಾರ ಪತ್ನಿ 3 ದೇಶಗಳ ಪಾಸ್ಪೋರ್ಟ್ ಹೊಂದಿದ್ದಾರೆ. ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ. ಅದನ್ನು ಶರ್ಮಾ ನಾಮಪತ್ರ ಸಲ್ಲಿಕೆ ವೇಳೆ ಉಲ್ಲೇಖಿಸಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅವರು ಹೈದರಾಬಾದ್‌ನಲ್ಲಿರುವ ತಮ್ಮ ವಿಳಾಸವನ್ನು ಉಲ್ಲೇಖಿಸಿ ತೆಲಂಗಾಣ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದರು.

42 ಮಾವೋಗಳು ಶರಣು: ತೆಲಂಗಾಣ ನಕ್ಸಲ್ ಮುಕ್ತ

ಹೈದರಾಬಾದ್‌: ಪ್ರ ಮುಖ ನಕ್ಸಲ್‌ ನಾಯಕ ಸೋಡಿ ಮಲ್ಲಾ ಅಲಿಯಾಸ್ ಕೇಶಲ್ ಸೇರಿದಂತೆ ತೆಲಂಗಾಣದಲ್ಲಿ 42 ನಕ್ಸಲರು ಶುಕ್ರವಾರ ಪೊಲೀಸರಿಗೆ ಶರಣಾಗಿದ್ದಾರೆ. ಈ ಮೂಲಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಗಿದೆ ಎಂದು ಪೊಲೀಸರು ಘೋಷಿಸಿದ್ದಾರೆ. ಶರಣಾದ ನಕ್ಸಲರಿಂದ ಪೊಲೀಸರು 36 ಬಂದೂಕು, 5 ಎಕೆ 47 ರೈಫಲ್‌, 4 ಎಸ್‌ಎಲ್‌ಆರ್ ರೈಫಲ್‌ಗಳು, ಎರಡು ದೇಶೀಯ ನಿರ್ಮಿತ ಗ್ರೆನೇಡ್‌ಗಳು, 1,007 ಜೀವಂತ ಗುಂಡುಗಳು ಮತ್ತು 800 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ 2024 - 2026ರ ನಡುವೆ 761 ಮಾವೋವಾದಿಗಳು ಶರಣಾಗಿದ್ದಾರೆ.

ರಾಜ್ಯಸಭಾ ಸಂಸದರಾಗಿ ನಿತೀಶ್‌ ಪ್ರಮಾಣ: ಶೀಘ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ರಾಜ್ಯಸಭಾ ಸಂಸದರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ತಮ್ಮ ಕಚೇರಿಯಲ್ಲಿ ನಿತೀಶ್‌ಗೆ ಪ್ರಮಾಣ ವಚನ ಬೋಧಿಸಿದರು. ಮಾ.30ರಂದು ರಾಜ್ಯಸಭೆಗೆ ಆಯ್ಕೆಯಾದ ತಕ್ಷಣ ನಿತೀಶ್‌ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದು, ಏ.14ರಂದು ಎನ್‌ಡಿಎ ಹೊಸ ಸಿಎಂ ಆಯ್ಕೆ ಮಾಡುವ ಸಾಧ್ಯತೆಯಿದೆ. ರಾಜ್ಯಸಭೆ ಪ್ರವೇಶಿಸಿದ ನಿತೀಶ್‌ಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಷೇತ್ರ ಮರುವಿಂಗಡಣೆ ವಿರುದ್ಧ ವಿಪಕ್ಷ ಜಂಟಿ ಹೋರಾಟ : ಖರ್ಗೆ
ಅಮೆರಿಕ ಜತೆ ಆಟ ಆಡ್ಬೇಡಿ:ಸಂಧಾನ ಸಭೆಗೂ ಮುನ್ನಇರಾನ್‌ಗೆ ವ್ಯಾನ್ಸ್ ಎಚ್ಚರಿಕೆ