ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪ್ರಯೋಗ ನಡೆಸಿದ್ದ ನೆರೆಯ ಪಾಕಿಸ್ತಾನ ಇದೀಗ ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತದ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನಾ ಪಡೆಗಳು ಕೂಡಾ ಸೂಕ್ತ ತಿರುಗೇಟು ನೀಡಿದ ಬಳಿಕ ಪಾಕಿಸ್ತಾನ ತನ್ನ ದಾಳಿ ನಿಲ್ಲಿಸಿದೆ.
ನವದೆಹಲಿ: ಪೆಹಲ್ಗಾಂ ನರಮೇಧದ ಬಳಿಕ ಭಾರತದ ವಾಯುದಾಳಿಯ ಸಾಧ್ಯತೆಗೆ ಬೆದರಿ ಗುರುವಾರ ಕರಾಚಿ ಕರಾವಳಿಯಲ್ಲಿ ಕ್ಷಿಪಣಿ ಪ್ರಯೋಗ ನಡೆಸಿದ್ದ ನೆರೆಯ ಪಾಕಿಸ್ತಾನ ಇದೀಗ ಕಾಶ್ಮೀರದ ಗಡಿ ಪ್ರದೇಶದಲ್ಲಿ ಭಾರತದ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನಾ ಪಡೆಗಳು ಕೂಡಾ ಸೂಕ್ತ ತಿರುಗೇಟು ನೀಡಿದ ಬಳಿಕ ಪಾಕಿಸ್ತಾನ ತನ್ನ ದಾಳಿ ನಿಲ್ಲಿಸಿದೆ.
ಶುಕ್ರವಾರ ಬೆಳಗ್ಗೆ ಪಾಕ್ ಪಡೆಗಳು ಅಪ್ರಚೋದಿತವಾಗಿ ಭಾರತದ ಗಡಿಯತ್ತ ಹಲವು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡಾ ದಾಳಿ ನಡೆಸಲಾದ ಪಾಕ್ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದವು. ಇದಾದ ಬಳಿಕ ಪಾಕ್ ಪಡೆಗಳು ದಾಳಿ ನಿಲ್ಲಿಸಿದವು ಎಂದು ಸೇನಾ ಮೂಲಗಳು ತಿಳಿಸಿವೆ.
ಕೋವಿಡ್ ಅವಧಿಯಲ್ಲಿ ಅಂದರೆ 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆ, ಕಾಶ್ಮೀರ ಗಡಿಯಲ್ಲಿ ಕದನವಿರಾಮದ ಘೋಷಣೆ ಮೂಲಕ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಸ್ಥಗಿತಗೊಳಿಸಲು ಸಮ್ಮತಿಸಿದ್ದವು. ಅದಾದ ಬಳಿಕ ಇದೇ ಮೊದಲ ಬಾರಿಗೆ ಗಡಿಯಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಎಂದಿನಂತೆ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘನೆ ಮಾಡಿದೆ.
ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರ ಮೇಲೆ ಉಗ್ರರ ಕಣ್ಣು?
ಶ್ರೀನಗರ: ಪಹಲ್ಗಾಂನಲ್ಲಿ ಪ್ರವಾಸಿಗರಿಗೆ ಗುಂಡಿಕ್ಕಿದ್ದ ಉಗ್ರರು ಇದೀಗ ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಶ್ರೀನಗರ ಹಾಗೂ ಗಂದರ್ಬಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಭದ್ರತಾ ಸಿಬ್ಬಂದಿಗೆ ತಮ್ಮ ಬ್ಯಾರಕ್‌ನಿಂದ ಅನವಶ್ಯಕವಾಗಿ ಹೊರಬಂದು ಓಡಾಡದಂತೆ ಸೂಚಿಸಲಾಗಿದೆ.
ಪಾಕ್ ಹ್ಯಾಕರ್‌ಗಳಿಂದ ಆರ್ಮಿ ಕಾಲೇಜ್ ಆಫ್ ನರ್ಸಿಂಗ್ವೆ ಬ್‌ಸೈಟ್ ಹ್ಯಾಕ್
ನವದೆಹಲಿ: ಪಹಲ್ಗಾಂ ದುರಂತ ಬೆನ್ನಲ್ಲೇ ಪಾಕಿಸ್ತಾನ ಮೂಲದ ಹ್ಯಾಕರ್‌ಗಳು ಆರ್ಮಿ ಕಾಲೇಜ್ ಆಫ್ ನರ್ಸಿಂಗ್‌ನ ವೆಬ್‌ಸೈಟ್‌ನ್ನು ಶುಕ್ರವಾರ ಹ್ಯಾಕ್ ಮಾಡಿ, ಗ್ರಾಫಿಕ್ ದೃಶ್ಯಗಳನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ.ಪಾಕಿಸ್ತಾನ ಮೂಲದ ಟೀಮ್ ಇನ್ಸೇನ್ ಪಿಕೆ ಗುಂಪು ವೆಬ್‌ಸೈಟ್ ಹ್ಯಾಕ್ ಮಾಡಿದ್ದು, ನರ್ಸಿಂಗ್ ಕಾಲೇಜಿನ ಅಧಿಕೃತ ಜಾಲತಾಣ ಪುಟಕ್ಕೆ ಭೇಟಿ ನೀಡಿದಾಗ ನೀವು ಹ್ಯಾಕ್ ಆಗಿದ್ದೀರಿ, ಟೀಮ್ ಇನ್ಸೇನ್ ಪಿಕೆ ಎನ್ನುವ ಸಂದೇಶ ಕಾಣಿಸಿದೆ.
ಅದರ ಜೊತೆಗೆ ಕೆಳಗಡೆ ಏ.22ರಂದು ಪಹಲ್ಗಾಂನಲ್ಲಿ ನಡೆದ ದಾಳಿಯ ಬಗ್ಗೆಗಿನ ಅಸ್ಪಷ್ಟ ಚಿತ್ರಗಳು ಕೂಡ ಕಾಣಿಸಿದೆ.
ಆರ್ಮಿ ಕಾಲೇಜ್ ಆಫ್ ನರ್ಸಿಂಗ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತದ ಸೇನಾ ವ್ಯಾಪ್ತಿಗೆ ಬರುವುದಿಲ್ಲ.