ಪಾಕ್‌ನಿಂದ ಮಾನವೀಯತೆ, ಕಾಶ್ಮೀರತೆ ಮೇಲೆ ದಾಳಿ

KannadaprabhaNewsNetwork |  
Published : Jun 07, 2025, 12:27 AM ISTUpdated : Jun 07, 2025, 06:02 AM IST
ಮೋದಿ | Kannada Prabha

ಸಾರಾಂಶ

 ಕಾಶ್ಮೀರಿಗಳ ಜೀವನೋಪಾಯವನ್ನು ಕಿತ್ತುಕೊಳ್ಳಲು ಉದ್ದೇಶಿಸಿತ್ತು. ಪ್ರವಾಸಿಗರನ್ನು ಗುರಿ ಮಾಡುವ ಮೂಲಕ ಪಾಕಿಸ್ತಾನವು ಮಾನವೀಯತೆ ಮತ್ತು ಕಾಶ್ಮೀರಿಯತೆ ಮೇಲೆ ದಾಳಿ ನಡೆಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

 ಕಟ್ರಾ: ಪಹಲ್ಗಾಂ ದಾಳಿ ಮೂಲಕ ಪಾಕಿಸ್ತಾನವು ದೇಶದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಲು ಮತ್ತು ಪ್ರವಾಸೋದ್ಯಮವನ್ನು ನಂಬಿಕೊಂಡು ಬದುಕುತ್ತಿರುವ ಕಾಶ್ಮೀರಿಗಳ ಜೀವನೋಪಾಯವನ್ನು ಕಿತ್ತುಕೊಳ್ಳಲು ಉದ್ದೇಶಿಸಿತ್ತು. ಪ್ರವಾಸಿಗರನ್ನು ಗುರಿ ಮಾಡುವ ಮೂಲಕ ಪಾಕಿಸ್ತಾನವು ಮಾನವೀಯತೆ ಮತ್ತು ಕಾಶ್ಮೀರಿಯತೆ ಮೇಲೆ ದಾಳಿ ನಡೆಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

‘ಆದರೆ ಭಾರತ ಇದಕ್ಕೆ ತಕ್ಕ ಎದಿರೇಟು ನೀಡಿದೆ. ಆಪರೇಷನ್‌ ಸಿಂದೂರದ ಹೆಸರು ಕೇಳಿದಾಗಲೆಲ್ಲ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ನೆನಪಾಗುತ್ತದೆ’ ಎಂದಿದ್ದಾರೆ.

26 ಮಂದಿಯನ್ನು ಬಲಿಪಡೆದ ಪಹಲ್ಗಾಂ ದಾಳಿ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಅವರು ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಮೊದಲ ರೈಲು ಸೇವೆ, ವಿಶ್ವದ ಅತಿ ಎತ್ತರದ ಅಂಜಿ ಸೇತುವೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪಹಲ್ಗಾಂ ದಾಳಿ ಬಳಿಕ ಕಾಶ್ಮೀರ ನೆಲದಲ್ಲಿ ನಿಂತು ನೆರೆಯ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪ್ರವಾಸೋದ್ಯಮವು ಉದ್ಯೋಗ ಸೃಷ್ಟಿಗೆ ಮತ್ತು ಜನರ ನಡುವೆ ಸಂಪರ್ಕಕ್ಕೆ ಅವಕಾಶ ಸಿಗುತ್ತದೆ. ದುರಾದೃಷ್ಟವೆಂದರೆ ನಮ್ಮ ನೆರೆಯ ದೇಶವು ಮಾನವೀಯತೆ, ಸಾಮರಸ್ಯ ಮತ್ತು ಪ್ರವಾಸೋದ್ಯಮದ ವಿರೋಧಿಯಾಗಿದೆ. ಇದರ ಜತೆಗೆ, ಬಡಜನರ ಜೀವನೋಪಾಯದ ಶತ್ರುವಾಗಿದೆ. ಏ.22ರಂದು ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ಮಾನವೀಯತೆ ಮತ್ತು ಕಾಶ್ಮೀರಿಯತೆಯ ಮೇಲೆ ದಾಳಿ ನಡೆಸಿದೆ ಎಂದು ಅಭಿಪ್ರಾಯಪಟ್ಟರು.

ಈ ದಾಳಿ ಮೂಲಕ ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವುದು, ಕಾಶ್ಮೀರದ ಜನರ ಸಂಪಾದನೆಯನ್ನು ಕಸಿಯುವುದೇ ಪಾಕಿಸ್ತಾನದ ಉದ್ದೇಶ ಆಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದ ಜನ ಪಾಕಿಸ್ತಾನದ ಷಡ್ಯಂತ್ರದ ವಿರುದ್ಧ ಗಟ್ಟಿಯಾಗಿ ನಿಂತರು. ಈ ಬಾರಿ ಕಾಶ್ಮೀರದ ಜನ ಪ್ರದರ್ಶಿಸಿದ ನಿಲುವು ಪಾಕಿಸ್ತಾನಕ್ಕೆ ಮಾತ್ರವಲ್ಲ, ವಿಶ್ವಾದ್ಯಂತ ಭಯೋತ್ಪಾದನೆಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಬೆಳವಣಿಗೆ:

ಕಳೆದ ಐದು ವರ್ಷಗಳಲ್ಲಿ ಪ್ರವಾಸೋದ್ಯಮವು ಬಾರೀ ಸಂಖ್ಯೆಯಲ್ಲಿ ಬೆಳವಣಿಗೆ ಕಂಡಿದೆ. ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದ ಬಡವರ ಮನೆ ಒಲೆ ಉರಿಸುತ್ತಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಆ ಕ್ಷೇತ್ರವನ್ನೇ ಗುರಿ ಮಾಡಿಕೊಂಡು ದಾಳಿ ನಡೆಸಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಗೈಡ್‌ಗಳು, ಕುದುರೆ ಸವಾರಿ ಉದ್ಯೋಗದಲ್ಲಿರುವವರು, ಗೆಸ್ಟ್‌ ಹೌಸ್‌ ಮಾಲೀಕರು, ಅಂಗಡಿ ಮಾಲಕರು ಮತ್ತು ರಸ್ತೆಬದಿ ಡಾಬಾ ನಡೆಸುವವರ ಬದುಕು ಶಾಶ ಮಾಡಲು ಮುಂದಾಗಿದೆ ಎಂದರು.

ಭಾರತೀಯ ಸೇನೆಯು ಆಪರೇಷನ್‌ ಸಿಂದೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಒಳಗೆ ಹೋಗಿ ನುಗ್ಗಿ ಹೊಡೆದಿದೆ. ಪಾಕಿಸ್ತಾನ ಉಗ್ರರ ಮೂಲಸೌಲಭ್ಯಗಳನ್ನು ಕೆಲವೇ ನಿಮಿಷಗಳಲ್ಲಿ ಪುಡಿಪುಡಿ ಮಾಡಿದೆ. ಹೀಗಾಗಿ ಆಪರೇಷನ್‌ ಸಿಂದೂರದ ಹೆಸರು ಕೇಳಿದಾಗಲೆಲ್ಲ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ನೆನಪಾಗುತ್ತದೆ ಎಂದರು.

ಚಿನಾಬ್‌ ಬ್ರಿಡ್ಜ್‌ಗೆ ಬೆಂಗಳೂರು ಐಐಎಸ್ಸಿ ವಿಜ್ಞಾನಿ ಮಾಧವಿ ಕೊಡುಗೆ

ಕನ್ನಡಪ್ರಭ ವಾರ್ತೆ ಬೆಂಗಳೂರುಜಮ್ಮು-ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ಚಿನಾಬ್‌ ಕಮಾನು ರೈಲ್ವೆ ಸೇತುವೆ ನಿರ್ಮಾಣದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮಾಧವಿ ಲತಾ ಕಳೆದ 17 ವರ್ಷಗಳಿಂದ ಶ್ರಮ ವಹಿಸಿದ್ದಾರೆ.ಜಗತ್ತಿನ ಎಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೇತುವೆ ನಿರ್ಮಾಣದ ಹಿಂದಿನ ಮಹಿಳಾ ಶಕ್ತಿಗೆ ಐಐಎಸ್ಸಿ ಅಭಿನಂದಿಸಿದೆ.ಸೇತುವೆ ನಿರ್ಮಾಣ ಸ್ಥಳದ ಇಳಿಜಾರು ಸ್ಥಿರತೆ ಮತ್ತು ಬುನಾದಿ ಸ್ಥಾಪಿಸಲು ಐಐಎಸ್ಸಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಯೋಜನೆ ಪೂರ್ವದಲ್ಲಿ ಅಂದಾಜಿಸಿದ್ದಕ್ಕಿಂತ ಭಿನ್ನವಾದ ಕಲ್ಲು ಮಾದರಿಗಳು ಕಾಮಗಾರಿಗೆ ಅಗೆಯುವಾಗ ಕಂಡು ಬಂದವು. ಪಯರ್‌ ನಿರ್ಮಾಣಕ್ಕೆ ಬುನಾದಿ ಹಾಕುವುದು ಮತ್ತು ಇಳಿಜಾರು ಸ್ಥಿರತೆ ಕಾಪಾಡಿಕೊಳ್ಳುವುದೇ ಈ ವೇಳೆ ದೊಡ್ಡ ಸವಾಲಾಗಿತ್ತು ಎಂದು ಮಾಧವಿ ಲತಾ ತಿಳಿಸಿದ್ದಾರೆ.==

ನರೇಂದರ್‌ ಸರೆಂಡರ್‌: ಮತ್ತೆ ರಾಗಾ ವಾಗ್ದಾಳಿ 

ರಾಜ್‌ಗಿರ್‌ (ಬಿಹಾರ): ಭಾರತ-ಪಾಕ್‌ ಸಂಘರ್ಷದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎದುರು ಪ್ರಧಾನಿ ಮೋದಿ ಶರಣಾದರು (ನರೇಂದರ್‌ ಸರೆಂಡರ್) ಎಂದು ಆರೋಪಿಸಿದ್ದ ಕಾಂಗ್ರೆಸ್ ರಾಹುಲ್‌ ಗಾಂಧಿ, ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಮತ್ತೆ ಪ್ರಧಾನಿ ಕಾಲೆಳೆದಿದ್ದಾರೆ. ಮೋದಿ ಅವರಿಗೆ ಶರಣಾಗುವ ಅಭ್ಯಾಸವೇ ಇದೆ ಎಂದು ಹೇಳಿದ್ದಾರೆ.ನಳಂದಾ ಜಿಲ್ಲೆಯ ರಾಜ್‌ಗಿರ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣಾ ಸಮ್ಮೇಳನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ಮೋದಿ ಅವರು ಕದನ ವಿರಾಮಕ್ಕೆ ಒತ್ತಡ ಹೇರಿದ್ದಾಗಿ ಕನಿಷ್ಠ 11 ಬಾರಿ ಟ್ರಂಪ್‌ ಹೇಳಿದ್ದಾರೆ. ಇದಕ್ಕೆ ಮೋದಿ ಅವರು ಕನಿಷ್ಠ ಪ್ರತಿಭಟನೆಯನ್ನೂ ತೋರುತ್ತಿಲ್ಲ. ಟ್ರಂಪ್‌ ಹೇಳಿದ್ದು ನಿಜ ಆಗಿರುವುದೇ ಇದಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಜಾತಿಗಣತಿ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದಿಂದ ಜಾತಿ ಗಣತಿ ಮಾಡಿಸಿಯೇ ಸಿದ್ಧ ಎಂದು ನಾನು ಸಂಸತ್ತಿನಲ್ಲಿ ಮೋದಿ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಿದ್ದೆ. ಶರಣಾಗುವ ಅಭ್ಯಾಸವಿದೆ ಎಂಬುದು ನಿಮಗೂ ಗೊತ್ತಿದೆ. ನಾವು ಸ್ವಲ್ಪ ಒತ್ತಡ ಹಾಕಿದರೆ ಅವರು ಸಂಪೂರ್ಣ ಶರಣಾಗುತ್ತಾರೆ ಎಂದು ರಾಹುಲ್‌ ವ್ಯಂಗ್ಯವಾಡಿದರು.ಇದೇ ವೇಳೆ ಬಿಜೆಪಿ ಯಾವತ್ತಿಗೂ ನೈಜ ಜಾತಿ ಗಣತಿ ನಡೆಸಲ್ಲ. ಯಾಕೆಂದರೆ ಇದರಿಂದ ಅವರ ರಾಜಕೀಯವೇ ಅಂತ್ಯವಾಗುತ್ತದೆ. ದೇಶದಲ್ಲಿ ಜಾತಿಯೇ ಇಲ್ಲ ಎಂದು ಮೋದಿ ಹೇಳುತ್ತಾರೆ, ಹಾಗಿದ್ದರೆ ಅವರು ಒಬಿಸಿ ಹೇಗಾಗುತ್ತಾರೆ? ಎಂದು ಕಾಲೆಳೆದರು.

ದೇಶದಲ್ಲಿ ಜಾತಿ ಗಣತಿಯ ಎರಡು ಮಾದರಿಗಳಿವೆ. ಒಂದು ಬಿಜೆಪಿಯದು. ಅದರಲ್ಲಿ ನಾಲ್ಕು ಬಾಗಿಲ ಒಳಗೆ ಕೂತು ಅಧಿಕಾರಿಗಳು ಎಲ್ಲವನ್ನೂ ನಿರ್ಧರಿಸುತ್ತಾರೆ. ಅವರಲ್ಲಿ ಯಾರೂ ಶೋಷಿತರು ಇರುವುದಿಲ್ಲ. ಇನ್ನೊಂದು ಮಾದರಿ ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣ ಸರ್ಕಾರದ್ದು. ಅಲ್ಲಿ ದಲಿತ ಸಂಘಟನೆಗಳು ಮತ್ತು ನಾಯಕರನ್ನು ವಿಶ್ವಾಸಕ್ಕೆ ಪಡೆದು ಮುಕ್ತವಾಗಿ ಸರ್ವೆ ನಡೆಸಲಾಗುತ್ತದೆ ಎಂದರು.ಇದೇ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದುಹಾಕುತ್ತೇವೆ. ಇದು ಬಿಹಾರದಿಂದಲೇ ಆರಂಭವಾಗಲಿದೆ ಎಂದು ರಾಹುಲ್‌ ಹೇಳಿದರು.

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !