ಲಷ್ಕರ್‌ ಮುಖ್ಯಸ್ಥ ಹಫೀಜ್‌ ಸಯೀದ್‌ ಭದ್ರತೆ ಮತ್ತಷ್ಟು ಹೆಚ್ಚಿಸಿದ ಪಾಕಿಸ್ತಾನ

KannadaprabhaNewsNetwork | Updated : May 02 2025, 04:26 AM IST

ಸಾರಾಂಶ

ಪಹಲ್ಗಾಂ ದಾಳಿಗೆ ಭಾರತವು ಪ್ರತೀಕಾರದ ಶಪಥ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನವು ಇದೀಗ ಮುಂಬೈ ದಾಳಿ ರೂವಾರಿ, ನಿಷೇಧಿತ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಬಿಗಿ ಭದ್ರತೆ ಕಲ್ಪಿಸಿದೆ. 

 ನವದೆಹಲಿ: ಪಹಲ್ಗಾಂ ದಾಳಿಗೆ ಭಾರತವು ಪ್ರತೀಕಾರದ ಶಪಥ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನವು ಇದೀಗ ಮುಂಬೈ ದಾಳಿ ರೂವಾರಿ, ನಿಷೇಧಿತ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಬಿಗಿ ಭದ್ರತೆ ಕಲ್ಪಿಸಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್‌-ಎ-ತೊಯ್ಬಾ ಉಗ್ರರು ಜಂಟಿಯಾಗಿ ಆತನ ಭದ್ರತೆಯ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಹೋರ್‌ನ ಜನನಿಬಿಡ ಮೊಹಲ್ಲಾ ಜೊಹಾರ್‌ನಗರದಲ್ಲಿದೆ ಎನ್ನಲಾದ ಉಗ್ರನ ಮನೆ ಕಾಂಪೌಂಡ್‌ ಮೇಲೆ ಡ್ರೋನ್‌ ಕಣ್ಗಾವಲು ಇಡಲಾಗಿದೆ. 4 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ಹೈರೆಸಲ್ಯೂಷನ್‌ ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

26 ಮಂದಿಯನ್ನು ಬಲಿಪಡೆದ ಪಹಲ್ಗಾಂ ದಾಳಿ ಹಿಂದೆಯೂ ಹಫೀಜ್‌ ಇದ್ದಾನೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ದಾಳಿ ಭೀತಿಯಿಂದ ಲಷ್ಕರ್‌ ಉಗ್ರನಿಗೆ 24 ಗಂಟೆ ಭದ್ರತೆ ನೀಡುತ್ತಿದೆ. ಆತನ ಮನೆಯ ಸುತ್ತಮುತ್ತ ನಾಗರಿಕರ ಓಡಾಟ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟವನ್ನೂ ನಿರ್ಬಂಧಿಸಲಾಗಿದೆ. ಪಹಲ್ಗಾಂ ದಾಳಿ ಹೊಣೆಯನ್ನು ದಿ ರಿಸಿಸ್ಟೆನ್ಸ್‌ ಫ್ರಂಟ್‌(ಟಿಆರ್‌ಎಫ್‌) ವಹಿಸಿಕೊಂಡಿದೆಯಾದರೂ ಇದು ಲಷ್ಕರ್‌-ಎ-ತೊಯ್ಬಾದ ಸಹಸಂಘಟನೆ. ಭಾರತೀಯ ಗುಪ್ತಚರ ಇಲಾಖೆಯ ಪ್ರಕಾರ ಸಯೀದ್‌ ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.

ಸಯೀದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ಹೆಸರಿಸಿದ್ದು, ಈತನ ತಲೆಗೆ 84 ಕೋಟಿ ರು. ಬಹುಮಾನ ಘೋಷಿಸಲಾಗಿದೆ. ಸಯೀದ್‌ನನ್ನು ಜೈಲಿನಲ್ಲಿರಿಸಲಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದ್ದರೂ ಈ ಮೋಸ್ಟ್‌ ವಾಂಟೆಡ್‌ ಉಗ್ರ ಪಾಕ್‌ ಸೇನೆಯ ಆಶ್ರಯದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾನೆ.

2021ರಲ್ಲಿ ಸಯೀದ್‌ ಮನೆ ಸಮೀಪ ನಡೆದ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಆ ಬಳಿಕ ಆತನಿಗೆ ನೀಡಲಾಗಿದ್ದ ಭದ್ರತೆ ಬಿಗಿಗೊಳಿಸಲಾಗಿತ್ತು. ಇತ್ತೀಚೆಗೆ ಆತನ ಆತ್ಮೀಯ ಉಗ್ರ ಅಬು ಖತಲ್‌ನ ಹತ್ಯೆ ಬಳಿಕ ಸಯೀದ್‌ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

Share this article