50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ !

KannadaprabhaNewsNetwork | Updated : May 01 2025, 04:54 AM IST

ಸಾರಾಂಶ

 ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ.

 ಇಸ್ಲಾಮಾಬಾದ್‌: ಈಗಾಗಲೇ ಬಡತನ, ಸಾಲ, ಉದ್ವಿಗ್ನತೆ, ಭಾರತದ ಭಯದಿಂದ ಕಂಗೆಟ್ಟಿರುವ ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ. 

ಈಗಾಗಲೇ ದೇಶದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ತಾಪಮಾನ 48 ಡಿ.ಸೆ. ತಲುಪಿದ್ದು, ಇದು ಇನ್ನೂ ಅಧಿಕವಾಗಲಿದೆ. 2018ರಲ್ಲಿ ನವಾಬ್‌ಶಾ ಪ್ರದೇಶದಲ್ಲಿ 50 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಈ ವರ್ಷ ಈ ದಾಖಲೆಯನ್ನು ಮುರಿಯುವಷ್ಟು ಬಿಸಿಲಿರಲಿದೆ ಎನ್ನಲಾಗಿದೆ. 

ಪಾಕಿಸ್ತಾನದ ಹವಾಮಾನ ಇಲಾಖೆಯು ಏ.26ರಿಂದ 30ರ ನಡುವೆ ಉಷ್ಣ ಗಾಳಿ ಸಂಭವಿಸುವ ಎಚ್ಚರಿಕೆ ನೀಡಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಎಚ್ಚರಿಸಿತ್ತು.

ಗಾಯದ ಮೇಲೆ ಬರೆ ಎಂಬಂತೆ, ಕಾಶ್ಮೀರದಲ್ಲಿ ನಡೆದ ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ, ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ಉಪನದಿಗಳ ನೀರಿನ ಹರಿವನ್ನು ತಡೆಹಿಡಿಯುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮರಾಲ ಪ್ರದೇಶದಲ್ಲಿ ಚಿನಾಬ್‌ ನದಿ ನೀರಿನ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಇದು ಪಾಕಿಸ್ತಾನವನ್ನು ಇನ್ನಷ್ಟು ಬಾಯಾರುವಂತೆ ಮಾಡಲಿದೆ.

ಪಾಕ್ ವಾಯುಸೀಮೆ ನಿಷೇಧ ಕಾರಣ ಭಾರತದ ಕಂಪನಿಗಳಿಗೆ ವಾರ್ಷಿಕ ₹3700 ಕೋಟಿ ಹೊರೆ

ಮುಂಬೈ/ನವದೆಹಲಿ: ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಾಯುಸೀಮೆ ನಿರ್ಬಂಧಿಸಿದ್ದು, ಇದರಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ವಾರ್ಷಿಕ 3700 ಕೋಟಿ ರು. ಹೆಚ್ಚುವರಿ ಹೊರೆ ಉಂಟಾಗಲಿದೆ.

ಉದಾಹರಣೆಗೆ ಉತ್ತರ ಭಾರತದಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ವಿಮಾನ 45 ನಿಮಿಷಗಳ ಕಾಲ ಹೆಚ್ಚುವರಿ ಹಾರಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ಪ್ರತಿ ಗಂಟೆಗೆ 5 ಲಕ್ಷ ರು. ಖರ್ಚಾಗಲಿದೆ. ಮತ್ತೊಂದೆಡೆ ಅಮೆರಿಕ, ಯೂರೋಪ್‌ಗಳಿಗೆ ತೆರಳು ವಿಮಾನಗಳು 1.5 ತಾಸು ಹೆಚ್ಚು ಹಾರಾಟ ನಡೆಸಬೇಕಾಗುತ್ತದೆ. ಇದರಿಂದ ಯೂರೋಪ್‌ ವಿಮಾನಗಳಿಗೆ 22 ಲಕ್ಷ ರು. ಮತ್ತು ಅಮೆರಿಕ ವಿಮಾನಗಳಿಗೆ 29 ಲಕ್ಷ ರು. ಅಧಿಕ ವೆಚ್ಚ ತಗುಲಲಿದೆ.

ಇದೆಲ್ಲಾ ಕೂಡಿಸಿದರೆ ಮಾಸಿಕ 300 ಕೋಟಿ ರು.ಗೂ ಅಧಿಕ ವೆಚ್ಚ ಭಾರತೀಯ ಕಂಪನಿಗಳ ಮೇಲೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಇಂಡಿಗೋ ಕಂಪನಿಯು ಪಾಕ್‌ ನಿರ್ಧಾರದಿಂದ ತನ್ನ ಕಜಾಕಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಹೋಗುವ ವಿಮಾನಗಳನ್ನು ರದ್ದುಗೊಳಿಸಿದೆ.

Share this article