‘ಪಾಡ್‌ಕಾಸ್ಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆ ದಾರಿ ತಪ್ಪಿಸುವಂತಿದೆ ಮತ್ತು ಏಕಪಕ್ಷೀಯವಾಗಿದೆ’ ಎಂದು ಪಾಕಿಸ್ತಾನವು ನರೇಂದ್ರ ಮೋದಿ ಲೆಕ್ಸ್ ಫ್ರೀಡ್‌ಮನ್ ಜೊತೆಗೆ ನಡೆಸಿದ ಸಂದರ್ಶನದ ಬಗ್ಗೆ ಪ್ರತಿಕ್ರಿಯಿಸಿದೆ.
ಇಸ್ಲಾಮಬಾದ್: ‘ಪಾಡ್‌ಕಾಸ್ಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆ ದಾರಿ ತಪ್ಪಿಸುವಂತಿದೆ ಮತ್ತು ಏಕಪಕ್ಷೀಯವಾಗಿದೆ’ ಎಂದು ಪಾಕಿಸ್ತಾನವು ನರೇಂದ್ರ ಮೋದಿ ಲೆಕ್ಸ್ ಫ್ರೀಡ್‌ಮನ್ ಜೊತೆಗೆ ನಡೆಸಿದ ಸಂದರ್ಶನದ ಬಗ್ಗೆ ಪ್ರತಿಕ್ರಿಯಿಸಿದೆ.
ನರೇಂದ್ರ ಮೋದಿಯವರು ಸಂದರ್ಶನದಲ್ಲಿ ಪಾಕಿಸ್ತಾನದ ಜೊತೆಗೆ ಶಾಂತಿ ಬಯಸಿ ನಡೆಸಿದ ಪ್ರತಿಯೊಂದು ಪ್ರಯತ್ನದಲ್ಲಿಯೂ ಧ್ವೇಷ ಮತ್ತು ಹಗೆತನ ವ್ಯಕ್ತವಾಗಿತ್ತು ಎಂದಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು, ‘ ಈ ಹೇಳಿಕೆಗಳು ದಾರಿ ತಪ್ಪಿಸುವಂತಿದೆ ಮತ್ತು ಏಕಪಕ್ಷೀಯವಾಗಿದೆ.
ವಿಶ್ವಸಂಸ್ಥೆ, ಪಾಕಿಸ್ತಾನ, ಕಾಶ್ಮೀರ ಜನರಿಗೆ ಭಾರತ ನೀಡಿದ ಭರವಸೆಗಳ ಹೊರತಾಗಿಯೂ ಕಳೆದ ಏಳು ದಶಕಗಳಿಂದ ಬಗೆಹರಿಯದೆ ಉಳಿದಿರುವ ಜಮ್ಮು ಮತ್ತು ಕಾಶ್ಮೀರದ ವಿವಾದವನ್ನು ಅವರು ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದಿದೆ.
ಫ್ರಿಡ್‌ಮನ್ ಜತೆ ಮೋದಿ ಸಂವಾದ ಟ್ರುತ್‌ನಲ್ಲಿ ಹಂಚಿಕೊಂಡ ಟ್ರಂಪ್
ವಾಷಿಂಗ್ಟನ್: ಅಮೆರಿಕ ಮೂಲದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಸುಮಾರು 3 ಗಂಟೆಗಳ ಕಾಲ ನಡೆದ ಸಂವಾದದಲ್ಲಿ, ನಿಮಗೆ ಟ್ರಂಪ್ ಅವರಲ್ಲಿ ಇಷ್ಟವಾಗುವ ಗುಣ ಯಾವುದು ಎಂದು ಪಾಡ್‌ಕಾಸ್ಟರ್ ಕೇಳಿದಾಗ, ‘ಅವರು ಮೊದಲ ಅವಧಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗ ಹೂಸ್ಟನ್‌ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮ ಮಾಡಿದ್ದರು. ಆಗ ತಮ್ಮ ಭದ್ರತಾ ಶಿಷ್ಟಾಚಾರವನ್ನು ಮರೆತು ನನ್ನ ಜೊತೆ ಸ್ಟೇಡಿಯಂ ಸುತ್ತ ಕೈಹಿಡಿದು ಸಾಗಿದರು. ಅವರ ಧೈರ್ಯ ಮತ್ತು ನನ್ನ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ಕಂಡು ಅಚ್ಚರಿಪಟ್ಟೆ’ ಎಂದು ಮೋದಿ ತಿಳಿಸಿದ್ದರು.
ಮೋದಿ ಸಕಾರಾತ್ಮಕ ನುಡಿಗೆ ಚೀನಾ ಮೆಚ್ಚುಗೆ
ಬೀಜಿಂಗ್: ಭಾರತ-ಚೀನಾ ಭಿನ್ನಾಭಿಪ್ರಾಯವನ್ನು ಬಿಟ್ಟು ಮಾತುಕತೆಗೆ ಒಲವು ತೋರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಕಾರಾತ್ಮಕ ಹೇಳಿಕೆಗಳನ್ನು ಚೀನಾ ಶ್ಲಾಘಿಸಿದೆ. ಪರಸ್ಪರ ಯಶಸ್ಸಿಗೆ ಕಾರಣವಾಗುವ ಆನೆ ಮತ್ತು ಡ್ರ್ಯಾಗನ್ ಜೋಡಿ ಕುಣಿತವು ಉಭಯ ದೇಶಗಳಿಗೆ ಇರುವ ಏಕೈಕ ಆಯ್ಕೆಯಾಗಿದೆ ಎಂದು ಅದು ಹೇಳಿದೆ.‘ಚೀನಾ-ಭಾರತ ಸಂಬಂಧಗಳ ಕುರಿತು ಪ್ರಧಾನಿ ಮೋದಿಯವರ ಇತ್ತೀಚಿನ ಸಕಾರಾತ್ಮಕ ಹೇಳಿಕೆಯನ್ನು ಚೀನಾ ಗಮನಿಸಿದೆ ಮತ್ತು ಅದನ್ನು ಪ್ರಶಂಸಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ತಿಳಿಸಿದ್ದಾರೆ.
ಅಮೆರಿಕದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಜತೆಗಿನ ಸಂವಾದದಲ್ಲಿ ಭಾರತ ಮತ್ತು ಚೀನಾ ಬಾಂಧವ್ಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಚೀನಾದೊಂದಿಗಿನ ಈ ಹಿಂದಿನ ಸಂಘರ್ಷದ ಹೊರತಾಗಿಯೂ, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮಾತುಕತೆ ನಡೆಯಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಕನಿಷ್ಠ ವೈಭವೀಕರಣ, ಗರಿಷ್ಠ ಆಡಳಿತ ಇರಲಿ: ಕಾಂಗ್ರೆಸ್ ವ್ಯಂಗ್ಯ
ನವದೆಹಲಿ: ಲೆಕ್ಸ್ ಫ್ರಿಡ್‌ಮನ್ ಜತೆಗೆ ಪ್ರಧಾನಿ ಮೋದಿ ನಡೆಸಿದ ಪಾಡ್‌ಕಾಸ್ಟ್ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ‘ದೇಶ ಸಂಕಷ್ಟದಲ್ಲಿದೆ. ಈ ನಡುವೆ ಕನಿಷ್ಠ ವೈಭವೀಕರಣ, ಗರಿಷ್ಠ ಆಡಳಿತ ಇರಲಿ’ ಎಂದು ಪ್ರಧಾನಿಗೆ ಟಾಂಗ್ ನೀಡಿದೆ.ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್,‘ ಸುಮಾರು ಒಂದು ವರ್ಷಗಳ ಹಿಂದೆ ಅವರು ನಾನು ಮನುಷ್ಯರಲ್ಲ ಎಂದಿದ್ದರು. ಆದರೆ ಈಗ 1+1 ಥಿಯರಿಯಲ್ಲಿ ನಂಬಿಕೆ ಇರುವುದಾಗಿ ಹೇಳುತ್ತಾರೆ. ಮೊದಲನೆಯ 1 ಮೋದಿ, ಎರಡನೇ 1 ದೈವಿಕ ಸ್ಥಿತಿ. ದೇಶದ ಆರ್ಥಿಕತೆಯು ಗಂಭೀರ ಸವಾಲುಗಳನ್ನು ಎದುರಿಸುತ್ತಿರುವಾಗ, ನಮ್ಮ ನೆರೆಹೊರೆಯು ಅಸ್ಥಿರದಲ್ಲಿರುವಾಗ ಅವರು ಈ ವಿಷಯಗಳನ್ನು ಹೇಳುತ್ತಿದ್ದಾರೆ. ಕನಿಷ್ಠ ಸ್ವಯಂ ವೈಭವೀಕರಣ ಮತ್ತು ಗರಿಷ್ಠ ಆಡಳಿತ ಇರಬೇಕು’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಟೀಕೆ ಪ್ರಜಾಪ್ರಭುತ್ವದ ಆತ್ಮ ಎಂದಿರುವ ಮೋದಿ ಟೀಕಿಸಿದ ಅವರು, ‘ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಪ್ರತಿಯೊಂದು ಸಂಸ್ಥೆಯನ್ನು ಕೆಡವಿದ್ದಾರೆ. ವಿಮರ್ಶಕರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದಾರೆ’ ಎಂದು ಹರಿಹಾಯ್ದರು.