ಮುಂಬೈ ಟಾಯ್ಲೆಟ್ಸಲ್ಲಿ ಪಾಕ್‌ ನಟಿ ಮಹಿರಾ ಪೋಸ್ಟರ್‌ ಅಂಟಿಸಿ ಆಕ್ರೋಶ

KannadaprabhaNewsNetwork |  
Published : May 04, 2025, 01:33 AM ISTUpdated : May 04, 2025, 05:52 AM IST
Mahira Khan

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧೋತ್ಸಾಹ ಹೆಚ್ಚುತ್ತಿರುವ ನಡುವೆಯೇ ಇತ್ತ ಮುಂಬೈನಲ್ಲಿ ಪಾಕಿಸ್ತಾನದ ನಟಿ ಮಹಿರಾ ಖಾನ್ ಅವರ ಚಿತ್ರಗಳನ್ನು ಶೌಚಾಲಯಗಳಲ್ಲಿ ಅಂಟಿಸಲಾಗುತ್ತಿದೆ.

ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧೋತ್ಸಾಹ ಹೆಚ್ಚುತ್ತಿರುವ ನಡುವೆಯೇ ಇತ್ತ ಮುಂಬೈನಲ್ಲಿ ಪಾಕಿಸ್ತಾನದ ನಟಿ ಮಹಿರಾ ಖಾನ್ ಅವರ ಚಿತ್ರಗಳನ್ನು ಶೌಚಾಲಯಗಳಲ್ಲಿ ಅಂಟಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಫೈಜಾನ್‌ ಅನ್ಸಾರಿ, ‘ನಾವು ಹಿಂದೆ ಹೇಳಿದಂತೆ ಪಹಲ್ಗಾಂ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಹೀಗಾಗಿ ಪಾಕ್‌ ನಟ ನಟಿಯರ ಚಿತ್ರಗಳನ್ನು ಶೌಚಾಲಯಗಳಲ್ಲಿ ಅಂಟಿಸುವ ಅಭಿಯಾನ ಆರಂಭಿಸಿದ್ದೇವೆ. ಈ ಮೂಲಕ ಪಾಕಿಸ್ತಾನ ಏನಿದ್ದರೂ ಶೌಚಾಲಯ ಶುಚಿಗೊಳಿಸುವ ಸ್ಥಾನದಲ್ಲಿಯೇ ಇರಲಿದೆ ಎಂಬ ಸಂದೇಶವನ್ನು ಕಳಿಸುತ್ತಿದ್ದೇವೆ. ಮುಂದೆ ಇನ್ನು ಹಲವರ ಚಿತ್ರಗಳನ್ನು ಅಂಟಿಸಲಿದ್ದೇವೆ ಎಂದು ಹೇಳಿದರು.

ಆಸ್ಟ್ರೇಲಿಯಾ: ಸತತ 2ನೇ ಬಾರಿ ಆಲ್ಬನೀಸ್‌ ಅಧಿಕಾರಕ್ಕೆ

ಕ್ಯಾನ್ಬೆರಾ: ಶನಿವಾರ ನಡೆದ ಆಸ್ಟ್ರೇಲಿಯಾ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಜಯ ಗಳಿಸಿದ್ದು, ಪ್ರಧಾನಿ ಆ್ಯಂಟನಿ ಅಲ್ಬನೀಸ್‌(62) ಸತತ 2ನೇ ಬಾರಿ ಪ್ರಧಾನಿ ಆಗಲಿದ್ದಾರೆ.150 ಸೀಟುಗಳ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಅಲ್ಬನೀಸ್‌ ಅವರ ಲೇಬರ್‌ ಪಕ್ಷ 78 ಸ್ಥಾನದಲ್ಲಿ ಗೆದ್ದು ಸರಳ ಬಹುಮತ ಸಂಪಾದಿಸಿದೆ. ಜಾನ್ ಹೋವಾರ್ಡ್‌ ಬಳಿಕ 2004ರ ನಂತರ ಆಸ್ಟ್ರೇಲಿಯದಲ್ಲಿ ಸತತ 2ನೇ ಬಾರಿ ಗೆದ್ದು ಪ್ರಧಾನಿ ಆಗುತ್ತಿರುವುದು ಇದೇ ಮೊದಲು.ಅತ್ತ ವಿಪಕ್ಷ ನಾಯಕ ಪೀಟರ್ ಡಟ್ಟನ್, ‘ನಾವು ಚುನಾವಣಾ ಪ್ರಚಾರವನ್ನು ಸರಿಯಾಗಿ ಮಾಡಿರಲಿಲ್ಲ. ಅದರ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಪ್ರಧಾನಿಯವರಿಗೆ ಕರೆ ಮಾಡಿ ಗೆಲುವಿಗೆ ಶುಭ ಕೋರಿದೆ’ ಎನ್ನುತ್ತಾ ಸೋಲೊಪ್ಪಿಕೊಂಡಿದ್ದಾರೆ.

ಶೋನಲ್ಲಿ ಲೈಂಗಿಕ ಭಂಗಿ ತೋರಿಸಿ ಎಂದಿದ್ದ ನಟನ ಮೇಲೆ ಕೇಸ್‌

ಮುಂಬೈ: ‘ಹೌಸ್‌ ಅರೆಸ್ಟ್‌’ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳನ್ನು ಲೈಂಗಿಕ ಭಂಗಿ ತೋರಿಸುವಂತೆ ಒತ್ತಾಯಿಸಿದ್ದ ನಟ ಅಜಾಜ್‌ ಖಾನ್‌, ನಿರ್ಮಾಪಕ ರಾಜಕುಮಾರ್‌ ಪಾಂಡೆ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇತರರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಲ್ಲು ಆ್ಯಪ್‌ನಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ವಿಡಿಯೋ ತುಣುಕೊಂದು ವೈರಲ್‌ ಆಗುತ್ತಿದ್ದು, ಅದರಲ್ಲಿ ನಿರೂಪಕ ಖಾನ್‌ ಲೈಂಗಿಕ ಭಂಗಿಯಲ್ಲಿರುವಂತೆ ತೋರಿಸಲು ಮಹಿಳಾ ಸ್ಪರ್ಧಿಗಳನ್ನು ಒತ್ತಾಯಿಸುತ್ತಿರುವುದು ಕಂಡುಬಂದಿದೆ.

‘ಶೋನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರಲಾಗಿದೆ’ ಎಂದು ಭಜರಂಗದಳದ ಕಾರ್ಯಕರ್ತ ಗೌತಮ್‌ ರಾವರಿಯಾ ದಾಖಲಿಸಿದ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿ ರಣವೀರ್‌ ಅಲಹಾಬಾದಿಯಾ ಇಂಡಿಯಾ ಗಾಟ್‌ ಲೇಟೆಂಟ್‌ ಶೋನಲ್ಲಿ ಅಶ್ಲೀಲ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ರಾಜನಾಥ್ ಕೂಡ ರಷ್ಯಾಗೆ ಹೋಗುವುದು ಅನುಮಾನ

ನವದೆಹಲಿ: ಮೇ 9ರಂದು ಮಾಸ್ಕೋದಲ್ಲಿ ನಡೆಯಲಿರುವ ರಷ್ಯಾದ ವಿಜಯ ದಿನಾಚರಣೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೈರುಹಾಜರಾಗುವ ಸಾಧ್ಯತೆಯಿದೆ. ಅವರ ಬದಲು ರಕ್ಷಣಾ ಖಾತೆ ರಾಜ್ಯ ಮಂತ್ರಿ ಸಂಜಯ ಸೇಠ್‌ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ.2ನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಸೋವಿಯತ್ ರಷ್ಯಾ ವಿಜಯದ 80ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿರುವ ವಿಜಯ ದಿವಸ್ ಪರೇಡ್‌ನಲ್ಲಿ ಅತಿಥಿಯಾಗಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಭಾರತ-ಪಾಕಿಸ್ತಾನದ ಯುದ್ಧಾತಂಕ ತೀವ್ರವಾಗುತ್ತಿರುವ ಕಾರಣ ಮೋದಿ ಪ್ರವಾಸ ರದ್ದುಗೊಳಿಸಿದ್ದರು. ಅವರ ಬದಲಿಗೆ ರಾಜನಾಥ್ ಸಿಂಗ್ ತೆರಳಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಹೋಗುವುದೂ ಅನುಮಾನ ಎನ್ನಲಾಗಿದೆ.

ಗುಟ್ಟಾಗಿ ಪಾಕ್‌ ಮಹಿಳೆ ಮದುವೆ ಆದ ಸಿಆರ್‌ಪಿಎಫ್‌ ಯೋಧ ಸಸ್ಪೆಂಡ್‌

ನವದೆಹಲಿ: ಅಧಿಕಾರಿಗಳ ಗಮನಕ್ಕೆ ತರದೇ ಗುಟ್ಟಾಗಿ ಪಾಕ್‌ ಮಹಿಳೆಯ ಮದುವೆ ಆದ ಯೋಧನನ್ನು ಸಿಆರ್‌ಪಿಎಫ್‌ ಸಸ್ಪೆಂಡ್‌ ಮಾಡಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಸಿಆರ್‌ಪಿಎಫ್‌, ‘ಸಿಆರ್‌ಪಿಎಫ್‌ನ 41 ಬೆಟಾಲಿಯನ್‌ನ ಯೋಧ ಮುನೀರ್‌ ಅಹ್ಮದ್‌ ಪಾಕಿಸ್ತಾನಿ ಪ್ರಜೆಯೊಂದಿಗಿನ ತನ್ನ ವಿವಾಹವನ್ನು ಮರೆಮಾಚಿದ್ದ ಮತ್ತು ಆಕೆಯ ವೀಸಾದ ಮಾನ್ಯತೆ ಅವಧಿ ಮೀರಿದ್ದರೂ ಆಕೆಗೆ ಆಶ್ರಯ ನೀಡಿದ್ದ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಆತನ ಕ್ರಮಗಳು ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದೆ’ ಎಂದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ । ಇಸ್ಲಾಮಿಕ್‌ ನಾಯಕನ ಹತ್ಯೆ ಬೆನ್ನಲ್ಲೇ ಹಿಂಸೆಟಾಪ್‌- ಬಾಂಗ್ಲಾ ಶೇಕ್‌- ಭಾರತೀಯ ರಾಯಭಾರಿಗಳ ಮನೆಗೆ ಕಲ್ಲೆಸೆತ । ಭಾರತ, ಹಿಂದು ವಿರೋಧಿ ಘೋಷಣೆ
ಹೂಡಿಕೆಗೆ ಕರೆ ನೀಡುವ ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌