ದೀದಿ ರಾಜೀನಾಮೆಗೆ ಆಗ್ರಹಿಸಿ ಭಾರಿ ಪ್ರತಿಭಟನೆ, ಹಿಂಸಾಚಾರ

KannadaprabhaNewsNetwork | Published : Aug 28, 2024 1:32 AM

ಸಾರಾಂಶ

ಪ.ಬಂಗಾಳದ ರಾಜಧಾನಿಯಲ್ಲಿ ನಡೆದ ವೈದ್ಯೆಯ ರೇಪ್ ಹಾಗೂ ಕೊಲೆ ಪ್ರಕರಣದ ಹೊಣೆ ಹೊತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಕೋಲ್ಕತಾದಲ್ಲಿ ವಿದ್ಯಾರ್ಥಿ ಸಂಘಟನೆಗಳು ಹಿಂಸಾತ್ಮಕ ಹೋರಾಟ ಆರಂಭಿಸಿವೆ.

ಪಿಟಿಐ ಕೋಲ್ಕತಾ

ಪ.ಬಂಗಾಳದ ರಾಜಧಾನಿಯಲ್ಲಿ ನಡೆದ ವೈದ್ಯೆಯ ರೇಪ್ ಹಾಗೂ ಕೊಲೆ ಪ್ರಕರಣದ ಹೊಣೆ ಹೊತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಕೋಲ್ಕತಾದಲ್ಲಿ ವಿದ್ಯಾರ್ಥಿ ಸಂಘಟನೆಗಳು ಹಿಂಸಾತ್ಮಕ ಹೋರಾಟ ಆರಂಭಿಸಿವೆ. ಮಂಗಳವಾರ ಕೋಲ್ಕತಾದಲ್ಲಿ 2 ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಿದ್ಯಾರ್ಥಿ ನಾಯಕರನ್ನು ಬಂಧಿಸಿದ್ದಾರೆ. ಹಿಂಸೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ.

ವಿದ್ಯಾರ್ಥಿ ಸಂಘಟನೆಗಳಾದ ‘ಪಶ್ಚಿಮ ಬಂಗಾಳ ಛಾತ್ರ ಸಮಾಜ’ ಮತ್ತು ‘ಸಂಗ್ರಾಮಿ ಜೌಥ ಮಂಚ್’ ‘ನಾಬನ್ನಾ ಅಭಿಜಾನ್’ (ನಾಬನ್ನಾ ಚಲೋ) ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ನಾಬನ್ನಾ ವೃತ್ತದಲ್ಲಿ ಪ್ರತಿಭಟನೆಗೆ ಉದ್ದೇಶಿಸಿದ್ದವು. ಆದರೆ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಯಬಹುದು. ಮಮತಾ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ಕೊಲೆಗಳು ನಡೆಯಬಹುದು ಎಂಬ ಮುನ್ಸೂಚನೆ ಕಾರಣ ಹೋರಾಟಕ್ಕೆ ಪೊಲೀಸರು ನಿರ್ಬಂಧ ಹೇರಿದ್ದರು.

ಇದೇ ವೇಳೆ ಪ್ರತಿಭಟನೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಹೌರಾ ಮೈದಾನದಲ್ಲಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಖಾಕಿ ಪಡೆ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ನಡೆಸಿ ಅಶ್ರುವಾಯು ಸಿಡಿಸಿದರು. ವಿದ್ಯಾರ್ಥಿಗಳು ಪೊಲೀಸರು ಮೇಲೆ ಕಲ್ಲು, ಇಟ್ಟಿಗೆಗಳಿಂದ ಹಲ್ಲೆಗೆ ಯತ್ನಿಸಿದರು. ಬ್ಯಾರಿಕೇಡ್‌ ಕಿತ್ತೆಸೆಯಲು ಪ್ರಯತ್ನಿಸಿದರು.

‘ಪೊಲೀಸರು ನಮಗೆ ಯಾಕೆ ಹೊಡೆಯುತ್ತಿದ್ದಾರೆ? ನಾವು ಕಾನೂನುಗಳನ್ನು ಉಲ್ಲಂಘಿಸುತ್ತಿಲ್ಲ, ಶಾಂತಿಯುತ ಪ್ರತಿಭಟನೆ ನಡೆಸಿ ವೈದ್ಯೆಯ ಸಾವಿಗೆ ನ್ಯಾಯಕ್ಕೆ ಆಗ್ರಹಿಸುತ್ತಿದ್ದೇವೆ. ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಇದು ಹಿಂಸೆ ಸೃಷ್ಟಿಸಿ, ಸರ್ಕಾರಕ್ಕೆ ಮಸಿ ಬಳಿಯುವ ಹುನ್ನಾರ ಎಂದು ಟಿಎಂಸಿ ಆರೋಪಿಸಿ, ಈ ಕುರಿತಾದ ವಿಡಿಯೋ ಬಿಡುಗಡೆ ಮಾಡಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿ ಚಾರ್ಜ್‌ನ್ನು ಬಿಜೆಪಿ ಖಂಡಿಸಿದೆ.

Share this article