;Resize=(412,232))
ವಾರಾಣಸಿ: ಪ್ರಯಾಣಿಕನೊಬ್ಬ ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು 2 ಬಾರಿ ತೆರೆಯಲೆತ್ನಿಸಿದ ವಿಚಿತ್ರ ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ‘ನನ್ನ ಮೈಮೇಲೆ ದೆವ್ವ ಬಂದಿದೆ’ ಎಂಬ ವಿಚಿತ್ರ ಹೇಳಿಕೆ ನೀಡಿದ್ದಾನೆ.
ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದ್ ಅದ್ನಾನ್ ಕೃತ್ಯ ಎಸಗಿದ ವ್ಯಕ್ತಿ. ವಾರಾಣಸಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಆತನನ್ನು ಬಂಧಿಸಲಾಗಿದೆ.
ಇಂಡಿಗೋ 6ಇ-185 ವಿಮಾನ ಶನಿವಾರ ರಾತ್ರಿ 8:15ಕ್ಕೆ ಬೆಂಗಳೂರಿನಿಂದ ವಾರಾಣಸಿಗೆ ಹೊರಟಿತ್ತು. ಟೇಕಾಫ್ ಆದ 15 ನಿಮಿಷಕ್ಕೆ ಈ ವ್ಯಕ್ತಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದಾನೆ. ಇದನ್ನರಿತ ಸಿಬ್ಬಂದಿ ಆ ರೀತಿ ಮಾಡದಂತೆ ಎಚ್ಚರಿಸಿದ್ದಾರೆ. ಬಳಿಕ ಸಹಜವಾಗಿ ವರ್ತಿಸಿದ್ದಾನೆ. ನಂತರ ರಾತ್ರಿ 10.20ಕ್ಕೆ ಇನ್ನೇನು ವಿಮಾನ ಲ್ಯಾಂಡ್ ಆಗಬೇಕು ಎಂಬುವಷ್ಟರಲ್ಲಿ (ವಿಮಾನವು ಭೂಮಿಯಿಂದ ಕೇವಲ 500 ಅಡಿ ಮೇಲಿರುವಾಗ) ಪುನಃ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ವಿಮಾನದಲ್ಲಿ ಗೊಂದಲ ಉಂಟಾಗಿ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಪೈಲಟ್‌ಗೆ ಎಚ್ಚರಿಕೆ ಸಂದೇಶ ಹೋಗಿದೆ. ಹೀಗಾಗಿ ನಂತರ ಕೆಲ ಸಮಯ ಆಕಾಶದಲ್ಲೇ ವಿಮಾನವನ್ನು ಸುತ್ತಿಸಿ, ರಾತ್ರಿ 10.35ಕ್ಕೆ ಲ್ಯಾಂಡ್ ಮಾಡಲಾಗಿದೆ.
ಆ ಬಳಿಕ ಪೊಲೀಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ‘ನನಗೇನೂ ಗೊತ್ತಿಲ್ಲ. ನನ್ನ ಮೈಮೇಲೆ ದೆವ್ವ ಬಂದಿತ್ತು’ ಎಂದು ಉತ್ತರಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.