ಸುಪ್ರೀಂ ಮುಂದೆ ಬೇಷರತ್‌ ಕ್ಷಮೆಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ

KannadaprabhaNewsNetwork | Updated : Mar 22 2024, 08:50 AM IST

ಸಾರಾಂಶ

ತಮ್ಮ ಉತ್ಪನ್ನಗಳು ಮತ್ತು ಅವುಗಳ ಸಾಮರ್ಥ್ಯದ ಕುರಿತಾಗಿ ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ

ನವದೆಹಲಿ: ತಮ್ಮ ಉತ್ಪನ್ನಗಳು ಮತ್ತು ಅವುಗಳ ಸಾಮರ್ಥ್ಯದ ಕುರಿತಾಗಿ ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ. 

ಅಲ್ಲದೆ ವಿವಾದಕ್ಕೆ ಕಾರಣವಾಗಿದ್ದ ಪತಂಜಲಿ ಸಂಸ್ಥೆಯ ಜಾಹೀರಾತುಗಳನ್ನು ಇನ್ನು ಯಾವುದೇ ಮಾಧ್ಯಮದಲ್ಲೂ ಪ್ರಕಟಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

ಪತಂಜಲಿ ಸಂಸ್ಥೆಯ ಉತ್ಪನ್ನಗಳ ಜಾಹೀರಾತು ಕುರಿತು ಭಾರತೀಯ ವೈದ್ಯಕೀಯ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ತಪ್ಪು ಮಾಹಿತಿ ಒಳಗೊಂಡ ಜಾಹೀರಾತು ಪ್ರದರ್ಶಿಸಿದಂತೆ ಸೂಚಿಸಿತ್ತು. 

ಇದಕ್ಕೆ ಸಂಸ್ಥೆ ಸಮ್ಮತಿಸಿದ್ದರೂ ಅದನ್ನು ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಬಾರದು ಎಂದು ಮಾಹಿತಿ ನೀಡಿ ಎಂದು ರಾಮ್‌ದೇವ್‌ ಮತ್ತು ಬಾಲಕೃಷ್ಣಗೆ ನೋಟಿಸ್‌ ನೀಡಿತ್ತು. 

ಅದಕ್ಕೂ ಇಬ್ಬರೂ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ಖುದ್ದು ಹಾಜರಾತಿಗೆ ಬುಧವಾರವಷ್ಟೇ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು.

Share this article