ಚುನಾವಣಾ ಆಯುಕ್ತರ ನೇಮಕ ಪ್ರಶ್ನೆ ಮಾಡಿದ್ದ ಅರ್ಜಿ ಸುಪ್ರೀಂನಿಂದ ವಜಾ

KannadaprabhaNewsNetwork | Updated : Mar 22 2024, 08:52 AM IST

ಸಾರಾಂಶ

ಕೇಂದ್ರ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ಮಾಡಲಾದ ಇಬ್ಬರ ಆಯುಕ್ತರ ನೇಮಕಕ್ಕೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ.

ನವದೆಹಲಿ: ಕೇಂದ್ರ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ಮಾಡಲಾದ ಇಬ್ಬರ ಆಯುಕ್ತರ ನೇಮಕಕ್ಕೆ ತಡೆ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. 

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹೊತ್ತಿನಲ್ಲಿ ತಡೆ ನೀಡಿದರೆ ಅದು ಭಾರೀ ಅವ್ಯವಸ್ಥೆಗೆ ಕಾರಣವಾಗಬಹುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಓರ್ವ ಚುನಾವಣಾ ಆಯುಕ್ತರ ನಿವೃತ್ತಿ ಮತ್ತು ಇನ್ನೊಬ್ಬರ ದಿಢೀರ್‌ ರಾಜೀನಾಮೆ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರ ಸಂಖ್ಯೆ ಒಂದಕ್ಕೆ ಇಳಿದಿತ್ತು. 

ಈ ಹಿನ್ನೆಲೆಯಲ್ಲಿ ಆಯುಕ್ತರ ಆಯ್ಕೆಗೆ ಇರುವ ಪ್ರಧಾನಿ, ವಿಪಕ್ಷ ನಾಯಕ ಮತ್ತು ಕೇಂದ್ರ ಸಚಿವರ ಒಳಗೊಂಡ ಸಮಿತಿ ತುರ್ತು ಸಭೆ ನಡೆಸಿ ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಿಂಗ್‌ ಸಂಧು ಅವರನ್ನು ನೇಮಕ ಮಾಡಿತ್ತು.

ಆದರೆ ನೂತನ ಆಯುಕ್ತರ ನೇಮಕ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿಲ್ಲ. ಈ ನೇಮಕ ಮಾಡಿದ ಆಯ್ಕೆ ಸಮಿತಿಯು, 2022ರಲ್ಲಿ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದೆ. 

ಹೀಗಾಗಿ ನೇಮಕಕ್ಕೆ ತಡೆ ನೀಡಬೇಕೆಂದು ಮತ್ತು 2023ರ ಕೇಂದ್ರ ಸರ್ಕಾರದ ಕಾಯ್ದೆ ವಜಾ ಮಾಡಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.

ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾ.ಸಂಜೀವ್‌ ಖನ್ನಾ ಮತ್ತು ನ್ಯಾ. ದೀಪಂಕರ್‌ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ, ‘ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದೆ. 

ಅದು ಯಾರ ಅಧೀನಕ್ಕೂ ಒಳಪಟ್ಟಿಲ್ಲ. ಮೇಲಾಗಿ ನೂತನವಾಗಿ ನೇಮಕಗೊಂಡ ಆಯುಕ್ತರ ವಿರುದ್ಧ ಯಾವುದೇ ಆರೋಪಗಳಿಲ್ಲ. ಆಯ್ಕೆ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು ಎಂಬ ವಾದವನ್ನು ನಾವು ಒಪ್ಪುತ್ತೇವೆ. 

ಆದರೆ ಹಿಂದೆಲ್ಲಾ ಕಾರ್ಯಾದೇಶದ ಮೂಲಕ ನೇಮಕ ಮಾಡಲಾಗುತ್ತಿತ್ತು. ಆದರೆ ಇದೀಗ ನೇಮಕಕ್ಕೆಂದೇ ಪ್ರತ್ಯೇಕ ಕಾಯ್ದೆ ರೂಪುಗೊಂಡಿದೆ. 

ಹೀಗಿರುವಾಗ ಈ ಹಂತದಲ್ಲಿ ನಾವು ಯಾವುದೇ ಮಧ್ಯಂತರ ಆದೇಶದ ಮೂಲಕ ನೇಮಕಕ್ಕೆ ತಡೆ ನೀಡಿದರೆ ಅದು ಲೋಕಸಭಾ ಚುನಾವಣೆಯ ಬಗ್ಗೆ ಆನಿಶ್ಚತತೆಗೆ ಕಾರಣವಾಗಬಹುದು. ಹೀಗಾಗಿ ನೇಮಕಕ್ಕೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸುತ್ತೇವೆ ಎಂದು ಹೇಳಿತು.

ಆದರೆ ಆಯುಕ್ತರ ನೇಮಕಕ್ಕೆ ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀರನ್ನು ಒಳಗೊಂಡ ಸಮಿತಿ ರಚಿಸಬೇಕೆಂದು ಸೂಚಿಸಿದ್ದ ತನ್ನ 2022ರ ಆದೇಶವನ್ನು ಬದಿಗೊತ್ತಿ, ಕೇವಲ ಪ್ರಧಾನಿ, ವಿಪಕ್ಷ ನಾಯಕ ಮತ್ತು ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿ ರಚಿಸಿ 2023ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಕಾನೂನು ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ಕೋರ್ಟ್‌ ಸಮ್ಮತಿಸಿತು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿತು.

Share this article