ನವದೆಹಲಿ: ಕೆಲವು ಹೂಡಿಕೆ ವಹಿವಾಟುಗಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿಯಮ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಪೇಟಿಎಂ ಮತ್ತು ಅದರ ಎರಡು ಅಂಗ ಸಂಸ್ಥೆಗಳಾದ ಲಿಟಲ್ ಇಂಟರ್ನೆಟ್ ಮತ್ತು ನಿಯರ್‌ಬೈ ಮಾಲೀಕತ್ವದ ಒನ್97 ಕಮ್ಯುನಿಕೇಷನ್ಸ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
ಫೆ.28ರಂದು ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಲಿಟಲ್ ಇಂಟರ್ನೆಟ್ ಮತ್ತು ನಿಯರ್‌ಬೈ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆಯಲ್ಲಿ ಫೆಮಾ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಂಪನಿಯು 611 ಕೋ.ರು.ಗಿಂತ ಹೆಚ್ಚಿನ ಮೊತ್ತದ ಹಣಕಾಸು ವಹಿವಾಟಿನಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
ಜನರು ಸರ್ಕಾರದಿಂದಲೇ ಭಿಕ್ಷೆ ಬೇಡುವ ಮನಸ್ಥಿತಿಗೆ ಬಂದಿದ್ದಾರೆ: ಎಂಪಿ ಸಚಿವ
ರಾಜಗಢ (ಮಧ್ಯಪ್ರದೇಶ): ‘ಈಗಿನ ಜನರು ದೇಶಕ್ಕೆ ಏನಾದರು ಕೊಡುವುದನ್ನು ಬಿಟ್ಟು ಸರ್ಕಾರದಿಂದಲೇ ಭಿಕ್ಷೆ ಬೇಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ವಿವಾದಿತ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಟೇಲ್, ‘ಈನಡುವೆ ಜನರು ಸಮಾಜದಿಂದ ಏನಾದರೂ ಪಡೆದುಕೊಳ್ಳುವುದರಲ್ಲಿಯೇ ಇರುತ್ತಾರೆ.
ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಭಿಕ್ಷೆ ಬೇಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ರಾಜಕಾರಣಿಗಳು ಯಾವುದಾದರೂ ಸಭೆ ಸಮಾರಂಭಕ್ಕೆ ಹೋದರೆ, ಹೂಗುಚ್ಛ ನೀಡಿ, ಹಾರ ಹಾಕುತ್ತಾರೆ. ಜೊತೆಗೆ ಬೇಡಿಕೆ ಪತ್ರಗಳ ರಾಶಿಯನ್ನೇ ನೀಡುತ್ತಾರೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರನ್ನು ನೋಡಿ ನಾವು ಕಲಿಯಬೇಕು. ಅವರ ಜೀವನದ ತತ್ವವನ್ನು ನಾವು ಅಳವಡಿಸಿಕೊಂಡರೆ, ನಮ್ಮ ಜೀವನ ಪಾವನವಾಗುತ್ತದೆ. ಸಮಾಜಕ್ಕೆ ನಾವು ಮೊದಲು ಕೊಡುಗೆಯನ್ನು ನೀಡಬೇಕು’ ಎಂದರು.
ಕದನ ವಿರಾಮ ಅಂತ್ಯ: ಗಾಜಾಗೆ ಅಗತ್ಯ ನೆರವು ಪೂರೈಕೆಗೆ ಇಸ್ರೇಲ್ ತಡೆ
ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ನಡುವೆ ಮೊದಲನೇ ಹಂತದ ಕದನ ವಿರಾಮ ಶನಿವಾರ ಅಂತ್ಯಗೊಂಡ ಬೆನ್ನಲ್ಲೇ, ಗಾಜಾಗೆ ನೀಡುತ್ತಿರುವ ಎಲ್ಲಾ ನೆರವು ಮತ್ತು ಸರಬರಾಜಿಗೆ ತಡೆ ಹೇರುವುದಾಗಿ ಇಸ್ರೇಲ್ ಹೇಳಿದೆ. ಇದೇ ವೇಳೆ ಇಸ್ರೇಲ್, ಹಮಾಸ್‌ಗೆ ಹೊಸ ಕದನ ವಿರಾಮ ನಿಯಮವನ್ನು ಒಪ್ಪಿಕೊಳ್ಳುವಂತೆ ಸೂಚಿಸಿದ್ದು, ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಹೆಚ್ಚುವರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಜನವರಿ 19 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಘೋಷಣೆಯಾಗಿ, ಬಳಿಕ ಪರಸ್ಪರ ಯುದ್ಧ ಕೈದಿಗಳ ಬಿಡುಗಡೆ ಮಾಡಲಾಗಿತ್ತು.
ಇಸ್ರೇಲ್ ಗಡಿ ದಾಟಲು ಯತ್ನಿಸಿದ ಕೇರಳ ವ್ಯಕ್ತಿ ಗುಂಡಿನ ದಾಳಿಗೆ ಬಲಿ
ತಿರುವನಂತಪುರಂ: ಜೋರ್ಡಾನ್‌ನಿಂದ ಇಸ್ರೇಲ್‌ಗೆ ಭೂಗಡಿ ಮೂಲಕ ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಸೇನೆಯಿಂದ ಗುಂಡಿನ ದಾಳಿಗೊಳಗಾಗಿದ್ದ ಕೇರಳ ಮೂಲದ ಥುಂಬಾ ನಿವಾಸಿ ಅನಿ ಥಾಮಸ್ ಗೇಬ್ರಿಯಲ್ (47) ಸಾವನ್ನಪ್ಪಿದ್ದಾರೆ.
ಫೆ.10ರಂದು ಜೋರ್ಡಾನ್ ಮತ್ತು ಇಸ್ರೇಲ್ ಗಡಿಯಲ್ಲಿ ಈ ಘಟನೆ ನಡೆದಿದೆ. ಗೇಬ್ರಿಯಲ್ ಮತ್ತು ಅವರ ಸಂಬಂಧಿ ಎಡಿಸಸ್ ಸೇರಿದಂತೆ ನಾಲ್ವರು, ಏಜೆಂಟ್ ಸಹಾಯದಿಂದ ಜೋರ್ಡಾನ್‌ನಿಂದ ಇಸ್ರೇಲ್ ಗಡಿ ದಾಟಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಜೋರ್ಡಾನ್ ಸೇನೆ ತಡೆದಿದೆ. ಆದರೆ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸೈನಿಕರು ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಗೇಬ್ರಿಯಲ್ ತಲೆಗೆ ಗುಂಡು ತಗುಲಿದ್ದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ನಾಳೆ 97ನೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ
ನವದೆಹಲಿ: 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಭಾರತದ ಕಿರುಚಿತ್ರ ಅನುಜಾ ಪ್ರಶಸ್ತಿಯ ರೇಸ್‌ನಲ್ಲಿದೆ. ಅಮೆರಿಕದ ಕಾಲಮಾನದ ಪ್ರಕಾರ ಸೋಮವಾರ ಮಾರ್ಚ್ 3ರಂದು ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಇದೇ ಮೊದಲ ಬಾರಿಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
ಭಾರತದಿಂದ ಬಾಲಿವುಡ್‌ನ ಲಾಪತಾ ಲೇಡಿಸ್ ಆಸ್ಕರ್‌ಗೆ ಆಯ್ಕೆಯಾಗಿತ್ತು. ಆದರೆ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದು ನಿರಾಸೆ ಮೂಡಿಸಿತ್ತು. ಆದರೆ ಭಾರತದ ಕಿರುಚಿತ್ರ ಅನುಜಾ ಲೈವ್ ಆ್ಯಕ್ಷನ್ ಕಿರುಚಿತ್ರದಲ್ಲಿ ಪ್ರಶಸ್ತಿ ರೇಸ್‌ನಲ್ಲಿರುವುದು ನಿರೀಕ್ಷೆ ಹೆಚ್ಚಿಸಿದೆ. ವರ್ಷದ ಆರಂಂಭದಲ್ಲಿ ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನ ಪರಿಣಾಮದಿಂದಾಗಿ ಆಸ್ಕರ್ ಕಾರ್ಯಕ್ರಮ ಕೆಲವು ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿತ್ತು.