ಪಿಟಿಐ ನವದೆಹಲಿ
ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಇಂದು ಅಸ್ಸಾಂ ಜನರ ಪಾಲಿಗೆ ಬಹುದೊಡ್ಡ ಐತಿಹಾಸಿಕ ದಿನ. ಉಲ್ಫಾ ಹಿಂಸಾಚಾರದಿಂದ ರಾಜ್ಯದ ಜನ ಸಾಕಷ್ಟು ನಲುಗಿದ್ದಾರೆ. 10000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಒಪ್ಪಿರುವ ಉಲ್ಫಾ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ದೊಡ್ಡ ಪ್ಯಾಕೇಜ್ ಘೋಷಿಸಲಿದೆ. ಅದರ ಪ್ರತಿ ಅಂಶ ಜಾರಿಗೂ ಸರ್ಕಾರ ಬದ್ಧ. ಶಾಂತಿ ಮಾತುಕತೆಯ ಪರಿಣಾಮ ರಾಜ್ಯದಲ್ಲಿ ಹಿಂಸಾಚಾರ ಪ್ರಮಾಣದಲ್ಲಿ ಶೇ.87ರಷ್ಟು, ಸಾವಿನ ಸಂಖ್ಯೆಯಲ್ಲಿ ಶೆ.90ರಷ್ಟು ಮತ್ತು ಅಪಹರಣ ಪ್ರಕರಣಗಳಲ್ಲಿ ಶೇ.84ರಷ್ಟು ಇಳಿಕೆಯಾಗಿದೆ. ಉಲ್ಘಾ ಹಿಂಸಾಚಾರಕ್ಕೆ ಅಸ್ಸಾಂನಲ್ಲಿ 1979ರಿಂದೀಚೆಗೆ 10000 ಜನರು ಜೀವ ತೆತ್ತಿದ್ದಾರೆ. ಈಗ ಉಗ್ರರು ಹಿಂಸೆ ತೊರೆದು, ಸಂಘಟನೆ ವಿಸರ್ಜಿಸಿ, ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಒಪ್ಪಿದ್ದಾರೆ. ಅಸ್ಸಾಂಗೆ ದೊಡ್ಡ ಆರ್ಥಿಕ ಪ್ಯಾಕೇಜ್ ನೀಡಲಾಗುವುದು’ ಎಂದು ಹೇಳಿದರು.ಈ ಒಪ್ಪಂದವು ಸ್ಥಳೀಯ ಜನರಿಗೆ ಸಾಂಸ್ಕೃತಿಕ ರಕ್ಷಣೆ ಮತ್ತು ಭೂಮಿಯ ಹಕ್ಕುಗಳನ್ನು ಒದಗಿಸುವುದರ ಜೊತೆಗೆ ಅಸ್ಸಾಂಗೆ ಸಂಬಂಧಿಸಿದ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತದೆ ಎಂದು ಕೇಂದ್ರ ಸರ್ಕಾರದ ಹೇಳಿಕೆ ತಿಳಿಸಿದೆ. ಇಂಥದ್ದೊಂದು ಒಪ್ಪಂದದ ಕುರಿತು ಉಲ್ಫಾ ಉಗ್ರರು ಮತ್ತು ಸರ್ಕಾರದ ನಡುವೆ 12 ವರ್ಷಗಳಿಂದ ಹಿಂಬಾಗಿಲ ಮಾತುಕತೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರುವಾ ಬಣದ ಸಮ್ಮತಿ ಇಲ್ಲ:ಈ ನಡುವೆ, ಉಲ್ಫಾದಲ್ಲಿ ಪರೇಶ್ ಬರುವಾ ಎಂಬಾತನ ಬಣವೂ ಇದ್ದು, ಈ ಬಣವು ಒಪ್ಪಂದದ ಭಾಗವಾಗುವುದಿಲ್ಲ ಏಕೆಂದರೆ ಸರ್ಕಾರದ ಈ ಆಫರ್‌ಗೆ ಬರುವಾ ಬಣದ ಸಮ್ಮತಿಯಿಲ್ಲ.ಆದರೆ ರಾಜ್‌ಖೋವಾ ಗುಂಪಿನ ಇಬ್ಬರು ಉನ್ನತ ನಾಯಕರಾದ- ಅನುಪ್ ಚೇಟಿಯಾ ಮತ್ತು ಶಶ್ಧರ್ ಚೌಧರಿ - ಕಳೆದ ವಾರದಿಂದಲೇ ದಿಲ್ಲಿಯಲ್ಲಿ ಬೀಡುಬಿಟ್ಟು ಸರ್ಕಾರದ ಜತೆಗಿನ ಶಾಂತಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ.44 ವರ್ಷದ ಸಂಘರ್ಷ‘ಸಾರ್ವಭೌಮ ಅಸ್ಸಾಂ‘ ಬೇಡಿಕೆಯೊಂದಿಗೆ 1979ರಲ್ಲಿ ಉಲ್ಫಾವನ್ನು ರಚಿಸಲಾಗಿತ್ತು. ಅಂದಿನಿಂದ, ಅದು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದೆ. ಇದರಲ್ಲಿ ಸುಮಾರು 4 ಸಾವಿರ ಉಗ್ರರು ಇದ್ದಾರೆ. ಉಲ್ಫಾ ಹಿಂಸಾಚಾರ 10000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಹೀಗಾಗಿ ಕೇಂದ್ರ ಸರ್ಕಾರವು 1990 ರಲ್ಲಿ ಉಲ್ಫಾವನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು. ಆದರೆ ಬಳಿಕ ಸಂಘಟನೆ 2 ಬಾರಿ ಒಳಜಗಳದ ಕಾರಣ ವಿಭಜನೆ ಆಗಿತ್ತು.