ಮಹಾರಾಷ್ಟ್ರ ವಿಪಕ್ಷ ಕೂಟದಲ್ಲಿ ಒಡಕು: 23 ಸೀಟಿಗೆ ಠಾಕ್ರೆ ಶಿವಸೇನೆ ಪಟ್ಟು

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಮಹಾರಾಷ್ಟ್ರದ 48ರಲ್ಲಿ 23 ಸೀಟು ಶಿವಸೇನೆಗೇ ಬೇಕು ಎಂದು ಸಂಜಯ್‌ ರಾವುತ್‌ ಪಟ್ಟು ಹಿಡಿದಿದ್ದು, ಹಂಚಿಕೆ ನಿರ್ಧಾರ ದಿಲ್ಲಿಯಲ್ಲಿ ಆಗುತ್ತೆ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ನಡುವೆ ಜೆಡಿಯುನಲ್ಲೂ ಸಹ ಬಿಕ್ಕಟ್ಟು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸಿದೆ.

ಮುಂಬೈ: 2024ರ ಲೋಕಸಭೆ ಚುನಾವಣೆಗೆ ಮುನ್ನ ಮಹಾರಾಷ್ಟ್ರದ ಶಿವಸೇನೆ (ಯುಬಿಟಿ)-ಕಾಂಗ್ರೆಸ್‌-ಎನ್‌ಸಿಪಿ ಮಹಾಮೈತ್ರಿಕೂಟದಲ್ಲಿ ಒಡಕು ಮೂಡುವ ಲಕ್ಷಣ ಗೋಚರಿಸಿವೆ. ತನ್ನ ಸಾಂಪ್ರದಾಯಿಕ ಎಲ್ಲ 23 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಟ್ಟು ಹಿಡಿದಿದೆ. ಆದರೆ ಇದಕ್ಕೆ ಕಾಂಗ್ರೆಸ್ ಅಸಮ್ಮತಿ ಸೂಚಿಸಿದೆ.ಮಹಾರಾಷ್ಟ್ರದಲ್ಲಿ 48 ಲೋಕಸಭೆ ಕ್ಷೇತ್ರಗಳಿವೆ. ಈ ಹಿಂದೆ ಠಾಕ್ರೆ ಹಾಗೂ ಏಕನಾಥ ಶಿಂಧೆ ಬಣಗಳು ವಿಭಜನೆ ಆಗುವ ಮುನ್ನ ಅಖಂಡ ಶಿವಸೇನೆಯು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು 23 ಸ್ಥಾನಗಳಿಗೆ ಸ್ಪರ್ಧಿಸುತ್ತಿತ್ತು. ಈ ಸಲವೂ ಅದು 23 ಸ್ಥಾನ ಬೇಕೆಂದು ಬೇಡಿಕೆ ಇರಿಸಿದೆ.ಶಿವಸೇನೆ (ಯುಬಿಟಿ) ವಕ್ತಾರ ಸಂಜಯ್ ರಾವುತ್ ಶುಕ್ರವಾರ ಮಾತನಾಡಿ, ‘ಈ ಹಿಂದೆ 23 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸುತ್ತಿತ್ತು. ಮುಂಬರುವ ಲೋಕಸಭೆಯಲ್ಲಿ ಸೀಟು ಹಂಚಿಕೆ ಅನುಪಾತದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಬಗ್ಗೆ ಉದ್ಧವ್‌ ಅವರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜತೆ ಸಕಾರಾತ್ಮಕ ಚರ್ಚೆ ನಡೆಸುತ್ತಿದ್ದಾರೆ’ ಎಂದರು.

ಶಿವಸೇನೆಯ ಈ ಪಟ್ಟಿಗೆ ಮಣಿದರೆ ಕಾಂಗ್ರೆಸ್‌-ಎನ್‌ಸಿಪಿ ನಡುವೆ ಉಳಿಯುವುದು ಕೇವಲ 25 ಸ್ಥಾನ ಮಾತ್ರ. ಹೀಗಾಗಿ ಶಿವಸೇನೆಯ ಈ ಪ್ರಸ್ತಾವಕ್ಕೆ ಕಾಂಗ್ರೆಸ್‌ ಮುಖಂಡ ವಿಜಯ್ ವಡೆತ್ತಿವಾರ್‌ ಅಸಮ್ಮತಿ ಸೂಚಿಸಿದ್ದು, ‘ಮೈತ್ರಿಕೂಟದ ಸೀಟು ಹಂಚಿಕೆಯನ್ನು ದಿಲ್ಲಿಯಲ್ಲಿ ಅಂತಿಮಗೊಳಿಸಲಾಗುವುದು. ಇನ್ನೂ ಚರ್ಚೆಯೇ ಆರಂಭವಾಗಿಲ್ಲ’ ಎಂದಿದ್ದಾರೆ.

ಲೋಕ ಚುನಾವಣೆಗೂ ಮುನ್ನ ಜೆಡಿಯುನಲ್ಲಿ ಒಡಕುಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ನಡುವೆಯೇ ಜೆಡಿಯುದ ನೂತನ ಅಧ್ಯಕ್ಷರಾಗಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಲಲನ್‌ಸಿಂಗ್‌ ಮತ್ತು ನಿತೀಶ್‌ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿಗಳ ನಡುವೆಯೇ ಅಧ್ಯಕ್ಷ ಸ್ಥಾನಕ್ಕೆ ನಿತೀಶ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.ದೆಹಲಿಯಲ್ಲಿ ಆಯೋಜಿಸಲಾಗಿದ್ದ 2 ದಿನಗಳ ಪಕ್ಷದ ಸಭೆಯಲ್ಲಿ ಲಲನ್‌ ಸಿಂಗ್‌ ರಾಜೀನಾಮೆ ನೀಡಿದ ಕಾರಣ ನಿತೀಶ್‌ ಕುಮಾರ್‌ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷ ಹೇಳಿದೆ. ಆದರೆ ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ಅವರ ಜೊತೆ ಹೆಚ್ಚು ಆತ್ಮೀಯರಾಗಿದ್ದರು ಮತ್ತು ಇಂಡಿಯಾ ಮೈತ್ರಿಕೂಟ ಬಲಪಡಿಸಲು ಲಲನ್‌ ಯಾವುದೇ ಒಲವು ವ್ಯಕ್ತಪಡಿಸುತ್ತಿರಲಿಲ್ಲ ಎಂಬ ಕಾರಣಕ್ಕೆ ಲಲನ್‌ ಸಿಂಗ್‌ ಅವರನ್ನು ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this article