ತುರುವೇಕೆರೆಯಲ್ಲಿ ತುಂತುರು ಮಳೆಗೆ ತತ್ತರಿಸಿ ಹೋದ ಜನರು, ವ್ಯಾಪಾರ ಅಸ್ತವ್ಯಸ್ಥ

KannadaprabhaNewsNetwork |  
Published : Dec 04, 2024, 12:34 AM IST
೨ ಟಿವಿಕೆ ೧ - ತುರುವೇಕೆರೆ ಪಟ್ಟಣದಲ್ಲಿ ನಡೆದ ಸಂತೆಯಲ್ಲಿ ತುಂತುರು ಸೋನೆ ಮಳೆಯಲ್ಲೇ ಹೂವಿನ ವ್ಯಾಪಾರಿಯೊಬ್ಬ ಹೂ ಮಾರಾಟ ಮಾಡುತ್ತಿರುವುದು. | Kannada Prabha

ಸಾರಾಂಶ

ಸೈಕ್ಲೋನ್ ಎಫೆಕ್ಟ್‌ಗೆ ತುರುವೇಕೆರೆ ತಾಲೂಕಿನ ಜನರು ತತ್ತರಿಸಿ ಹೋಗಿದ್ದು, ಕಳೆದ ಎರಡು ದಿನಗಳಿಂದಲೂ ಸೂರ್ಯನ ಕಿರಣ ಕಾಣದೇ ಮಲೆನಾಡಿನಂತೆ ಆಗಿದೆ. ಮಧ್ಯಾಹ್ನದ ವೇಳೆಯೂ ಸಾಯಂಕಾಲದಂತೆ ಗೋಚರಿಸುತ್ತಿತ್ತು. ಜೋರಾದ ಮಳೆ ಆಗದಿದ್ದರೂ ಸಹ ತುಂತುರು ಮಳೆಯಿಂದಾಗಿ ಜನರು ಹೊರಕ್ಕೆ ಬರಲು ಹಿಂದೇಟು ಹಾಕಿದರು.

ತುಂತುರು ಮಳೆಗೆ ಸಂತೆ ವಾಪಾರಿಗಳು, ಗ್ರಾಹಕರು ಮತ್ತು ವಿದ್ಯಾರ್ಥಿಗಳು ಹೈರಾಣು

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸೈಕ್ಲೋನ್ ಎಫೆಕ್ಟ್‌ಗೆ ತಾಲೂಕಿನ ಜನರು ತತ್ತರಿಸಿ ಹೋಗಿದ್ದು, ಕಳೆದ ಎರಡು ದಿನಗಳಿಂದಲೂ ಸೂರ್ಯನ ಕಿರಣ ಕಾಣದೇ ಮಲೆನಾಡಿನಂತೆ ಆಗಿದೆ. ಮಧ್ಯಾಹ್ನದ ವೇಳೆಯೂ ಸಾಯಂಕಾಲದಂತೆ ಗೋಚರಿಸುತ್ತಿತ್ತು. ಜೋರಾದ ಮಳೆ ಆಗದಿದ್ದರೂ ಸಹ ತುಂತುರು ಮಳೆಯಿಂದಾಗಿ ಜನರು ಹೊರಕ್ಕೆ ಬರಲು ಹಿಂದೇಟು ಹಾಕಿದರು. ಮಳೆಯಿಂದಾಗಿ ನಿನ್ನೆಯಿಂದಲೂ ವ್ಯಾಪಾರ ವಹಿವಾಟು ಅಷ್ಟಕ್ಕಷ್ಟೆ. ಸೋಮವಾರ ಪಟ್ಟಣದಲ್ಲಿ ಸಂತೆ ಇರುತ್ತಿತ್ತು ಮಳೆಯಿಂದಾಗಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಸಂತೆಗೆ ಬರಲು ಹಿಂದೇಟು ಹಾಕಿದರು.ಸೋಮವಾರ ಎಡಬಿಡದೆ ಬೆಳಗಿನಿಂದ ಸುರಿಯುತ್ತಿರುವ ತುಂತುರು ಮಳೆಗೆ ಸಂತೆಯ ವಾಪಾರಿಗಳು, ಗ್ರಾಹಕರು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೈರಾಣಾದರು.ಸೋಮವಾರ ಮುಂಜಾನೆಯಿಂದಲೇ ತುಂತುರು ಸೋನೆ ಮಳೆ ಒಂದೇ ಸಮನೆ ಸುರಿಯುತ್ತಿದ್ದರಿಂದ ಗ್ರಾಮ ದೇವತೆ ಉಡುಸಲಮ್ಮ ದೇವಿ ದೇವಸ್ಥಾನ ಮುಂಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿನ ಸಂತೆ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಮಳೆಗೆ ನೆನೆಯದಂತೆ ಇಡಲು ಪರದಾಡಿದರು.ಬಹುಪಾಲು ವ್ಯಾಪಾರಿಗಳು ಪ್ಲಾಸ್ಟಿಕ್ ಟಾರ್ಪಲ್ ನಡಿ ವಿವಿಧ ಬಗೆಯ ತರಕಾರಿಗಳು, ಸೊಪ್ಪು, ವಿಳ್ಯೆದೆಲೆ, ಈರುಳ್ಳಿ ಬೆಳ್ಳುಳ್ಳಿ, ಬಾಳೆಹಣ್ಣು, ಹಣ್ಣು ಹಂಪಲು, ಅವರೆಕಾಯಿ, ತೊಗರಿ ಕಾಯಿ ಮಾರಾಟ ಮಾಡುತ್ತಿದ್ದರೆ, ಇನ್ನೂ ಕೆಲವು ಸಣ್ಣಪುಟ್ಟ ವ್ಯಾಪಾರಿಗಳು ಕೊಡೆ ಹಿಡಿದುಕೊಂಡೇ ಗ್ರಾಹಕರಿಗಾಗಿ ಕಾಯುತ್ತಿದ್ದರು.

ರಾಗಿ, ಜೋಳ, ವಿವಿಧ ಬಗೆಯ ಧಾನ್ಯಗಳು, ಬೆಣ್ಣೆ, ದಿನಸಿ ಪದಾರ್ಥಗಳು, ಕಡಲೆಪುರಿ ಸೇರಿದಂತೆ ಕೆಲವು ವಸ್ತುಗಳ ಮಾರಾಟ ಕ್ಷೀಣವಾಗಿತ್ತು. ಪ್ರತಿ ಸೋಮವಾರ ಸಂತೆಗೆ ಸುಮಾರು ಐದು ನೂರಕ್ಕೆ ಹೆಚ್ಚು ವ್ಯಾಪಾರಿಗಳು ಬರುತ್ತಿದ್ದರು. ಆದರೆ ಇಂದು ತುಂತುರು ಮಳೆಯ ಕಾರಣ ವ್ಯಾಪಾರಿಗಳ ಸಂಖ್ಯೆ ತುಂಬಾ ಕಡಿಮೆ ಇದ್ದುದರಿಂದ ಬೆಲೆಯು ಸಹ ಹೆಚ್ಚಳವಾಗಿತ್ತು.ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಟ್ಯಾಕ್ಟರ್ ಮೂಲಕ ಕೊಬ್ಬರಿ ತಂದು ಮಾರಲು ತೆಂಗು ಬೆಳೆಗಾರರು ನಲುಗಿದರು. ಅದೇ ಸ್ಥಳದಲ್ಲಿ ನಡೆಯುವ ಕುರಿ, ಮೇಕೆ ಸಂತೆಯಲ್ಲಿ ಮಳೆಯ ಕಾರಣ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಜೊತೆಗೆ ಹಳ್ಳಿಯಿಂದ ಕುರಿ ಮೇಕೆ ತಂದಿದ್ದ ರೈತರು ಸೋನೆ ಮಳೆಯಲ್ಲೇ ನಿಂತು ಗ್ರಾಹಕರಿಗಾಗಿ ಕಾಯುತ್ತಿದ್ದರು.ತುಮಕೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಕರೆದೊಯ್ಯಲು ಸರ್ಕಾರಿ ಬಸ್ ಸೇರಿದಂತೆ ಹಲವಾರು ಖಾಸಗಿ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರ ಪರಿಣಾಮವಾಗಿ ಪಟ್ಟಣದ ಸರ್ಕಾರಿ ಶಾಲಾ ಕಾಲೇಜು ಮತ್ತು ವಿವಿಧ ಖಾಸಗಿ ಶಾಲಾ, ಕಾಲೇಜುಗಳಿಗೆ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡಿದರು. ಪಟ್ಟಣದ ವಿದ್ಯಾರ್ಥಿಗಳು ಕೊಡೆ ಹಿಡಿದುಕೊಂಡೇ ಕಾಲೇಜಿಗೆ ತೆರಳುತ್ತಿದ್ದರು. ದ್ವಿಚಕ್ರ ವಾಹನದಲ್ಲೇ ದೂರದ ಶಾಲಾ, ಕಾಲೇಜುಗಳಿಗೆ ಶಿಕ್ಷಕರು, ಉಪನ್ಯಾಸಕರು ಮಳೆಯಲ್ಲಿ ನೆನೆದುಕೊಂಡೇ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು. ಬೆಳಗಿನಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೇ ವಿದ್ಯುತ್ ಕೈ ಕೊಡುತ್ತಿತ್ತು. ರಾತ್ರಿಯೂ ವಿದ್ಯುತ್ ಇಲ್ಲದೇ ಜನರು ಹೈರಾಣಾಗಿದ್ದರು. ಆನರು ಓಡಾಡಲೂ ಸಹ ಆಗದ ಸ್ಥಿತಿ ನಿರ್ಮಾಣವಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ